ಆತ್ಮ, ಪರಮಾತ್ಮಾನುಸಂಧಾನದ ಪರಮ ಆಧ್ಯಾತ್ಮಿಕ ದಿನವೇ ಶ್ರಾವಣ ಮಾಸ.!
–ನಿರಂಜನ ದೇವರಮನೆ
ಸಾಹಿತಿಗಳು, ಚಿತ್ರದುರ್ಗ
ಅತ್ಯಂತ ಬಹು ವಿಶಿಷ್ಟವಾದ ಹಾಗೂ ಪವಿತ್ರವಾದ ತಿಂಗಳು ಶ್ರಾವಣ ಮಾಸ, ಆಷಾಡದಲ್ಲಿ ಬೀಸುವ ಗಾಳಿ ತೇಲುವ ಮೋಡಗಳ ಪರಸ್ಪರ ಅನುಸಂಧಾನದ ಫಲವೇ ಭೂ ಮಾತೆಗೆ ಮಳೆಯ ಮುಖೇನ ತಂಪೆರೆವ ಮಹತ್ವದ ಮಾಸ ಹಾಗೇ ಆತ್ಮ-ಪರಮಾತ್ಮಾನುಸಂಧಾನದ ಪರಮ ಆಧ್ಯಾತ್ಮಿಕ ದಿನಗಳೂ ಕೂಡ ಆಗಿವೆ.
ಪುರಾಣ, ಪುಣ್ಯ ಕಥಾಪ್ರವಚನ, ಪರಶಿವನ ಆರಾಧನೆ, ಅನುಷ್ಠಾನ ಮತ್ತು ಆಚಾರ್ಯ ಗುರುವರೇಣ್ಯ ಹಾಗೂ ಸಾಧುಸಂತರ ಸದ್ಭೋದನೆಯ ಶ್ರವಣ ಕಾಲವೇ ಶ್ರಾವಣ ಮಾಸವಾಗಿ ಸಕಲ ದೇವತೆಗಳ ಆರಾಧನೆಯ ವಿಶಿಷ್ಟ ಪೂಜೆ ಹಾಗೂ ಕಾರ್ಯ ಸಿದ್ಧಿಯ ಸಂಕಲ್ಪಗಳ ವ್ರತಾಚಾರಣೆಯ ಕಾರ್ಯಾನುಷ್ಠಾನಗಳ ದಿನಗಳಾಗಿ, ಸಾತ್ವಿಕ ಶಿಷ್ಟ-ಸದ್ಗುಣಗಳನ್ನು ಬೆಳೆಸುವ ತಾತ್ವಿಕ ತಿಂಗಳಾಗಿ ರೂಪುಗೊಂಡಿರುತ್ತದೆ.
ಪ್ರಕೃತಿಯಲ್ಲಿ ಶ್ರಾವಣ ಮಾಸ ಚೆಲುವಿನ ಚಿತ್ತಾರದ ಕಾರಂಜಿಯನ್ನು ಚಿಮ್ಮುತ್ತಿದ್ದರೇ ಧರ್ಮ ಪೀಠಗಳು ಮತ್ತು ಮಠಮಂದಿರಗಳಲ್ಲಿ ಭಕ್ತಿ-ಜ್ಞಾನ, ಶ್ರದ್ಧೆ-ನಿಷ್ಠೆ, ಸಂಸ್ಕಾರ, ಸಂಗೀತ, ಕಲೆ, ಸಾಹಿತ್ಯ ಮುಂತಾದವುಗಳು ಧರ್ಮ-ಸಂಸ್ಕೃತಿಯ ರೂಪದಲ್ಲಿ ಮೈದೆಳೆದು ಜೀವನದಲ್ಲಿ ಕಲ್ಯಾಣ, ಬದುಕಿನ ಶಿವಸೌಂದರ್ಯವನ್ನು ತುಂಬುತ್ತವೆ. ಈ ಶ್ರಾವಣವೇ ಒಂದು ಪರ್ವವಾಗಿ, ಎಲ್ಲ ದಿನವೂ ಒಂದಿಲ್ಲೊಂದು ಹಬ್ಬದ ವಿಶೇಷ ಹೊಂದಿ ಭಾರತೀಯ ಶ್ರೀಮಂತಿಕೆಯನ್ನು ಮೆರೆಸುತ್ತದೆ. ಈ ಯುಗದ ಮಾನವಜನಾಂಗ ಯುಗಧರ್ಮಕ್ಕೆ ತಕ್ಕಂತೆ ಹೊಸ ವಿಚಾರಗಳ ಪ್ರಣಾಲಿಕೆಗೆ ಹೊಂದಿಕೊಂಡು ಈ ಅಮೂಲ್ಯವಾದ ಪರಂಪರೆ ಉಳಿಸಿಕೊಂಡು ಬರುತ್ತಿರುವುದೂ ಸಹ ವಿಶೇಷವಾಗಿರುತ್ತದೆ.
ಭಾರತೀಯ ವೀರಶೈವ-ಲಿಂಗಾಯತ ಪರಂಪರೆಯಲ್ಲಿ ಸಾಗಿಬಂದ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು ಜಾಗತಿಕ ಮಟ್ಟದಲ್ಲಿ ಸನಾತನ ವೀರಶೈವ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು. ಇಡೀ ಮನುಕುಲವನ್ನು ಸಂಸ್ಕಾರಗೊಳಿಸಿ, ಸಂಸ್ಕೃತಿವಂತರನ್ನಾಗಿ ಮಾಡಲು ಈ ದೇಶದಲ್ಲಿ ಪಂಚಪೀಠಗಳನ್ನು ಸ್ಥಾಪಿಸಿ, ಅವುಗಳ ಮುಖೇನ ಶಕ್ತಿ ವಿಶಿಷ್ಟಾದೈತ್ಯ ಸಿದ್ಧಾಂತದ ಪ್ರಕಾರ ಇಷ್ಟಲಿಂಗ ಪೂಜೆ, ಪ್ರಣವ-ಪಂಚಾಕ್ಷರಿ ಮಂತ್ರ ರುದ್ರಪಠಣ, ಶಿವಾಗಮಗಳ ಅಧ್ಯಯನ, ವಚನಾನುಸಂಧಾನ, ಧಾರ್ಮಿಕ-ವಿಧಿ ವಿಧಾನಗಳು, ಅಷ್ಟಾವರಣ, ಪಂಚಚಾರ ಷಟಸ್ಥಲಗಳ ಪ್ರಧಾನ ತತ್ವಗಳು, ವರ್ಣ-ಜಾತಿ, ಲಿಂಗ-ವರ್ಗ ಭೇದಗಳ ನಿರ್ಮೂಲನೆ, ಭಕ್ತ, ಕಾಯಕ ದಾಸೋಹ ಹಾಗೂ ತತ್ತ್ವಜ್ಞಾನ-ವಿಜ್ಞಾನವನ್ನು ತಮ್ಮ ಧರ್ಮ ಸಂವಿಧಾನದಲ್ಲಿ ಅಳವಡಿಕೊಂಡು ಅವುಗಳ ಮೂಲಕ ಪ್ರತಿಯೊಬ್ಬನಿಗೂ ವಿಶೇಷ ಆಚರಣೆಗಳೊಂದಿಗೆ ಸಂಸ್ಕಾರ-ಸಂಸ್ಕೃತಿನೀಡುತ್ತಿರುವುದು ಹಾಗೂ ಧರ್ಮ ಸಂಸ್ಕೃತಿಯ ರಕ್ಷಣೆ ಹಾಗೂ ಪೋಷಣೆ ಮಾಡುವ ವ್ಯಕ್ತಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ಅಷ್ಟೇ ಅತ್ಯಂತ ಮಹತ್ವದ್ದಾಗಿದೆ.
ಶ್ರೀ ಪಂಚಪೀಠಗಳಲ್ಲಿ ಒಂದಾದ ಶ್ರೀ ಮದುಜ್ಜಯಿನಿ ಸದ್ಧರ್ಮ ಪೀಠ ಸದಾ ಜನತೆಯ ಏಳಿಗೆ, ಸಮುದಾಯದ ಪ್ರಗತಿ ಹಾಗೂ ದೇಶದ ಅಭ್ಯುದಯಕ್ಕೆ ಶ್ರಮಿಸುತ್ತ ಬಂದಿರುವ ಬಹುಮುಖಿ ಸಾಧನೆಯ ಧರ್ಮ ಜಾಗೃತಿ ಪೀಠ. ಈ ಪೀಠ ಪರಂಪರೆಯಲ್ಲಿ ಸಾಗಿಬಂದಿರುವ ಅನೇಕ ಪೀಠಾಚಾರ್ಯರು ತಮ್ಮ ಪೂಜಾನಿಷ್ಠೆ ತಪೋಬಲ ಶಿವಯೋಗ ಹಾಗೂ ಕಾಯಕ-ದಾಸೋಹ ತತ್ತ್ವದಿಂದ ಅನೇಕ ಪವಾಡ ಸದೃಶಗಳೊಂದಿಗೆ ಜನಮನವನ್ನು ಗೆದ್ದು ತಮ್ಮ ಪೀಠದ ಘನತೆ-ಗೌರವಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಪ್ರಸ್ತುತ ಉಜ್ಜಯಿನಿ ಪೀಠದ ಜಗದ್ಗುರುಗಳಾದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠವನ್ನು ಅಲಂಕರಿಸಿ ಭಕ್ತ ಸಮುದಾಯದ ಶ್ರೇಯೋಭಿವೃದ್ಧಿ ಸಮಾಜ ಕಲ್ಯಾಣ, ದೇಶಾಭಿಮಾನ ಹಾಗೂ ಜಾಗತಿಕ ಶಾಂತಿ ಮುಂತಾದ ಬಹುತೇಕ ಕಾರ್ಯಾನುಷ್ಠಾನದಲ್ಲಿ ತೊಡಗಿ ನಾಡಿನ ಜನತೆಯ ಭಕ್ತಿ-ಗೌರವಗಳಿಗೆ ಭಾಜನರಾಗಿದ್ದಾರೆ.
ಶ್ರೀ ಜಗದ್ಗುರುಗಳು ಸಮಾಜೋ-ಧಾರ್ಮಿಕ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಮ್ಮ ಪೀಠ ಪರಿಸರದಲ್ಲಿ ಅನೇಕ ಆಚರಣೆ, ವ್ರತ-ಉತ್ಸವಗಳನ್ನು ವಿಶಿಷ್ಟ-ವಿನೂತನ ಧಾರ್ಮಿಕ-ಸಾಂಸ್ಕೃತಿಕ ಪರ್ವವನ್ನಾಗಿ ಮಾಡಿ ಭಕ್ತರ ಹೃನ್ಮಂದಿರಗಳನ್ನು ತಣಿಸಿದ್ದಾರೆ. ಮಾನವೀಯ ಪ್ರಜ್ಞೆ ಶಾಂತಿಯ ಮಂತ್ರ ಸತ್ಯ ತ್ಯಾಗ ಸರ್ವೋದಯ ಸಮನ್ವಯ ಸಹಕಾರ ಸಹಬಾಳ್ವೆಯಂಥ ಮೌಲ್ಯಗಳ ಉದ್ಧಾತ ಚಿಂತನೆಗಳು ಅನುಷ್ಠಾನಗೊಳ್ಳುವಂತೆ ಕಾರ್ಯಕ್ರಮಗಳನ್ನು ಏರ್ಪಡಿಸಿ, ಧರ್ಮ, ಸಾಹಿತ್ಯ, ಸಂಗೀತ ಕಲೆ ಹಾಗೂ ಸಂಘಟನಾತ್ಮಕ ಕಲಿಕೆಯ ಕೇಂದ್ರವನ್ನಾಗಿ ಮಾಡಿ ಭಕ್ತರ ಭವವನ್ನು ದೂರ ಮಾಡಿ ದೇಹ-ಮನ-ಭಾವ ಶುದ್ಧಿಯಾಗುವಂತೆ ತಮ್ಮ ಸಂದೇಶವನ್ನು ನೀಡುತ್ತಿರುತ್ತಾರೆ.
ಜಾತಿ-ವರ್ಗ, ಪಂಥ-ಪಂಗಡ ಗಡಿ-ಭಾಷೆಯ ಮೆರೆಯನ್ನು ದಾಟಿ ಬಂದ ಎಲ್ಲ ಭಕ್ತರು ತಮ್ಮ ಆರೋಗ್ಯ ಪೂರ್ಣ ಬದುಕಿಗೆ, ಸಮಷ್ಟಿ ಪ್ರಜ್ಞೆಗೆ ಹಾಗೂ ಉತ್ತಮ ಸಾಂಘಿಕ ಜೀವನಕ್ಕೆ ಪೀಠವನ್ನು ಆಶ್ರಯಿಸಿ ತಮ್ಮ ಕರ ಜೋಡಿಸುವ ಮುಖೇನ ಸಾರ್ಥಕ ಬದುಕಿನ ಗುರಿಯನ್ನು ಕಂಡುಕೊಂಡು ಅದನ್ನು ಈಡೇರಿಸಿಕೊಳ್ಳುತ್ತಾರೆ.
ಪ್ರಸ್ತುತ ಶ್ರಾವಣ ಮಾಸದ ಇಷ್ಟಲಿಂಗ ಪೂಜಾನುಷ್ಠಾನ ಮತ್ತು ವಿವಿಧ ಧಾರ್ಮಿಕ- ಸಾಮಾಜಿಕ ಕಾರ್ಯಗಳು ಶ್ರೀ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ದಿನಾಂಕ:05-08-2024 ರಿಂದ 04-09-2024 ರ ವರೆಗೆ ಉಜ್ಜಯಿನಿ ಶ್ರೀ ಸದ್ಧರ್ಮ ಪೀಠದಲ್ಲಿ ಬಹು ವಿಶಿಷ್ಟವಾಗಿ ಜರುಗುತ್ತವೆ.
ಇಷ್ಟಲಿಂಗ ಮಹಾಪೂಜೆ:
ಶ್ರಾವಣ ಮಾಸದ ಪ್ರತಿ ದಿನಗಳ ಕಾಲವೂ ಶ್ರೀ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ನಡೆಯುತ್ತದೆ. ಶ್ರೀ ಜಗದ್ಗುರುಗಳವರ ಶಿವಪೂಜಾ ತಪೋನುಷ್ಠಾನ ಮುಂಜಾನೆಯಿಂದ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಅಷ್ಟೋತ್ತರ, ರುದ್ರಜಪ ಹಾಗೂ ಪಾದಪೂಜೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಆ ಸಂದರ್ಭದಲ್ಲಿ ಜಪ-ತಪಗಳು ಹಾಗೂ ಮಂತ್ರಪಠಣ ಅತ್ಯಂತ ಮನೋಜ್ಞವಾಗಿರುತ್ತದೆ.
ಪುರಾಣ ಪ್ರವಚನ: ಶ್ರಾವಣ ಮಾಸದ ಪ್ರತಿದಿನ ಸಂಜೆ ನಾಡಿನ ಪ್ರಸಿದ್ಧ ವಿದ್ವಾಂಸರಿಂದ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠ ಪರಂಪರೆಯ ಪರಮ ತಪೋನಿಧಿ ಲಿಂಗೈಕ್ಯ ಶ್ರೀ ಸಿದ್ದಲಿಂಗ ಭಗವತ್ಪಾದರ ಪವಾಡ ಸದೃಶಗಳು ಮತ್ತು ಸಮಾಜಮುಖಿ ಕಾರ್ಯಗಳ ಕುರಿತ ಪುರಾಣ ಪ್ರವಚನ ಶ್ರೀ ಜಗದ್ಗುರುಗಳ ಸಾನಿಧ್ಯದಲ್ಲಿ, ನಾಡಿನ ಶಿವಾಚಾರ್ಯರು ಹಾಗೂ ವಿರಕ್ತ ಚರಮೂರ್ತಿಗಳ ಸಮ್ಮುಖದಲ್ಲಿ, ನಾಡಿನ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಅತ್ಯಂತ ವಿದ್ವತ್‌ಪೂರ್ಣವಾಗಿ ಜರುಗುತ್ತದೆ. ಶ್ರೀ ಲಿಂಗೈಕ್ಯ ಭಗವತ್ಪಾದರ ದಿವ್ಯ ಬದುಕಿನ ದರ್ಶನ ಮಾಡಿಸುವ ಮೂಲಕ ಅವರು ಕೈಗೊಂಡ ವೀರಶೈವ-ಲಿಂಗಾಯತ ಧರ್ಮ-ಸಂಸ್ಕೃತಿಯ ಪ್ರಚಾರ, ಸಮಾಜದ ಏಕತೆ ಮತ್ತು ಸಮನ್ವಯತೆ ಸಾಧಿಸಲು ಅವರು ಕೈಗೊಳ್ಳುತ್ತಿದ್ದ ಕಾರ್ಯತಂತ್ರಗಳು ಅತ್ಯಂತ ಆಶ್ಚರ್ಯಕರ ಸಂಗತಿಗಳು ಅನಾವರಣಗೊಳ್ಳುವಂತೆ ಪ್ರವಚನ ಕೈಗೊಳ್ಳುತ್ತಾರೆ.
ಪ್ರಸಕ್ತ ಶ್ರಾವಣ ಮಾಸದ ಪ್ರವಚನಕಾರರಾಗಿ ಪದ್ಮಭೂಷಣ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶ್ರೀ ವೆ॥ ಪಂಡಿತ ಸಿದ್ಧರಾಮಯ್ಯ ಶಾಸ್ತ್ರಿಗಳವರು ಸೋಮನಾಳ್ ತಮ್ಮ ಅಗಾಧ ಪ್ರತಿಭಾ ಪಾಂಡಿತ್ಯದ ಮುಖೇನ ಪ್ರವಚನ ನೀಡುತ್ತಾರೆ. 04-09-2024 ರಂದು ಪುರಾಣ ಮಹಾಮಂಗಲದೊಂದಿಗೆ ಪ್ರವಚನ ಮುಕ್ತಾಯಗೊಳ್ಳುತ್ತದೆ.
ಸದ್ಧರ್ಮ ಬೋಧಾಮೃತ:
ಈ ರಾಷ್ಟ್ರದ ಶ್ರೇಷ್ಠ ಧರ್ಮ ಸಂಶೋಧಕರು ಮತ್ತು ಪ್ರಸಿದ್ಧ ವಿದ್ವಾಂಸರಿಂದ ವೀರಶೈವ-ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ವಿಚಾರಧಾರೆಗಳು, ಸನಾತನ ಸಂಸ್ಕೃತಿ-ಪರಂಪರೆ ಸಂವರ್ಧಿಸುವ ಚಿಂತನೆಗಳು, ಜಾಗತಿಕ ಸಮುದಾಯದೊಂದಿಗೆ ವಿಶ್ವಶಾಂತಿಯನ್ನು ಸಾಕಾರಗೊಳಿಸುವ ಮೂಲ ಮಂತ್ರಗಳು, ಪರಂಪರೆಯೊಂದಿಗೆ ಪ್ರಗತಿಪರ ಧೋರಣೆಗಳ ಅನುಷ್ಠಾನ, ಸರ್ವೋದಯ ಸಮನ್ವಯ ಪೂರ್ಣದೃಷ್ಠಿಯ ಪರಿಕಲ್ಪನೆಗಳ ಅನಾವರಣ, ಪರಮ ಪಂಚಪೀಠಾಚಾರ್ಯರು ಹಾಗೂ ಬಸವಾದಿ ಶರಣರ ಬಹುಮುಖಿ ಕಾರ್ಯಗಳನ್ನು ಕುರಿತ ವಿಶೇಷ ಉಪನ್ಯಾಸ, ಸಂದೇಶ, ಪ್ರವಚನ ಮುಗಿದ ನಂತರ ಅತ್ಯಂತ ಅರ್ಥಪೂರ್ಣವಾಗಿ ಜರುಗುತ್ತವೆ. ಉಜ್ಜಯಿನಿ ಪೀಠದ ಪರಂಪರೆಯಂತೆ ಈ ಶ್ರಾವಣ ಮಾಸದಲ್ಲಿ ಅನೇಕ ಆಚರಣೆಗಳು ಮತ್ತು ವಿಶಿಷ್ಟ ಪೂಜಾ ಕೈಂಕರ್ಯಗಳು ನಿರಂತರವಾಗಿ ಜರುಗುತ್ತವೆ.
ಮಹಾಪೂಜಾ ವೈಭವ:
ಶ್ರೀ ಉಜ್ಜಯಿನಿ ಪೀಠದ ಕ್ಷೇತ್ರನಾಥ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಅನಂತಬಿಲ್ವಾರ್ಚನೆ ಅಷ್ಟೋತ್ತರ ಮಹಾಮಂಗಲ ಹಾಗೂ ವೈವಿಧ್ಯಮಯವಾದ ವಿವಿಧ ಪಲ್ಲಕ್ಕಿ ಉತ್ಸವಗಳು ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆಯುತ್ತವೆ. ಹಾಗೇಯೇ ಪೀಠದ ಶಕ್ತಿ ಮಾತೆ ಶ್ರೀ ಗೌರಿದೇವಿಗೆ ವಿವಿಧ ಪುಷ್ಪಾರ್ಚನೆ ಸಹಸ್ರ ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ.
ಮಂಗಳಗೌರಿ ಪೂಜೆ ಸಂಪತ್‌ಗೌರಿ ವ್ರತ:
ಶ್ರಾವಣ ಮಾಸದಲ್ಲಿ ಬರುವ ಪ್ರತಿ ಮಂಗಳವಾರ ಹೊಸದಾಗಿ ಮದುವೆಯಾದ ಮುತ್ತೈದೆಯರು ಮಂಗಳಾಗೌರಿ ವ್ರತ ಹಿಡಿದು ಪೂಜೆ ಮಾಡಿ ಬಾಗಿನ ಕೊಡುವ ಪದ್ಧತಿ ಶ್ರೀಗೌರಿಯ ಸಮ್ಮುಖದಲ್ಲಿ ನಡೆಯುವ ಮೂಲಕ ಶಾಶ್ವತ ಮುತ್ತೈದೆತನ ಮತ್ತು ಸಕಲ ಸೌಭಾಗ್ಯಗಳನ್ನು ಅನುಗ್ರಹಿಸು ಎಂದು ಬೇಡಿಕೊಳ್ಳುವ ಪರಿ ತುಂಬಾ ಹೃದಯಂಗಮವಾಗಿರುತ್ತದೆ.
ಪ್ರತಿ ಶುಕ್ರವಾರ ಸಂಪತ್‌ಗೌರಿ ವ್ರತವನ್ನು ಅತ್ಯಂತ ಭಕ್ತಿಭಾವದಿಂದ ಹಾಗೂ ಸಡಗರ-ಸಂಭ್ರಮಗಳಿಂದ ಆಚರಿಸುತ್ತಾರೆ. ಜೊತೆ ಜೊತೆಗೆ ಸಂಪತ್ತು, ಐಶ್ವರ್ಯ ಸುಖ-ಸಮೃದ್ಧಿ ನೀಡೆಂದು ಪ್ರಾರ್ಥಿಸಿ ಧನ್ಯರಾಗುತ್ತಾರೆ ಹೀಗೆ ಸಾವಿರಾರು ಸುಮಂಗಲೆಯರು ಶ್ರೀ ಗೌರಿ ಮಾತೆಯನ್ನು ಆರಾಧಿಸುವ ಮುಖೇನ ಶಿವ-ಶಕ್ತಿಯರ ಆಭೇದವನ್ನು ಪ್ರದರ್ಶಿಸುತ್ತಾರೆ.
ವರಮಹಾಲಕ್ಷ್ಮೀ ಹಬ್ಬ:
ಶ್ರೀ ಪೀಠದ ರಾಜಾಂಗಣದಲ್ಲಿ ಶ್ರೀ ಜಗದ್ಗುರುಗಳವರ ಸಾನಿಧ್ಯದಲ್ಲಿ ಆ.16ರ ಶುಕ್ರವಾರ ಸಂಜೆ 5 ಗಂಟೆಯಿಂದ ಸಾಮೂಹಿಕ ಉಡಿ ತುಂಬುವ ಕಾರ್ಯ ಅತ್ಯಂತ ವೈವಿದ್ಯಮಯವಾಯಿತು. ದೇಶದ ಅನೇಕ ಕಡೆಗಳಿಂದ ಆಗಮಿಸುವ ಸಾವಿರಾರು ಮಹಿಳೆಯರು ಶ್ರೀ ಮರುಳಸಿದೇಶ್ವರ ಹಾಗೂ ಶ್ರೀ ಗೌರಿ ಮಾತೆಯ ಸಮ್ಮುಖದಲ್ಲಿ ದೀರ್ಘಕಾಲ ಸುಮಂಗಲಿಯರಾಗಿ ಯಶೋಕೀರ್ತಿಯನ್ನು ಪಡೆದು ಸದಾ ಪಾತಿವ್ರತ್ಯ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ ಶ್ರೀ ಜಗದ್ಗುರುಗಳವರಿಂದ ಸಾಮೂಹಿಕವಾಗಿ ಉಡಿ ತುಂಬಿಸಿಕೊಂಡು ಕೃತಾರ್ಥರಾದರು.
ಯಾವುದೇ ಜಾತಿ,ಮತ, ಭೇದವಿಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿಯಿಂದ ವರಮಹಾಲಕ್ಷ್ಮೀಯನ್ನು ಪೂಜಿಸಿ ಅವಳ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಈ ಕಾರ್ಯ ಮಧ್ಯರಾತಿಯವರೆಗೆ ಜರುಗಿ ಮಹಾಮಂಗಲದೊಂದಿಗೆ ಸಂಪನ್ನಗೊಳ್ಳುತ್ತದೆ. ಇದರಿಂದ ಎಲ್ಲ ಮಹಿಳೆಯರು ತಮ್ಮ ಬದುಕಿನಲ್ಲಿ ಸೌಹಾರ್ದ-ಸಹಬಾಳ್ವೆ-ಸಾತ್ವಿಕ ಸಂಪನ್ನತೆಯನ್ನು ತಂದುಕೊಳ್ಳುವುದರೊಂದಿಗೆ ಶಕ್ತಿಆರಾಧನೆಯ ಸೌಮ್ಯರೂಪವನ್ನು ಅನಾವರಣಗೊಳಿಸುತ್ತಾರೆ.
ನೂಲು ಗಂಧಧಾರಣೆ:
ಯರ್ಜುವೇದವನ್ನು ಪ್ರತಿನಿಧಿಸುವ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠವು ಶ್ರಾವಣ ಮಾಸದ ಹುಣ್ಣಿಮೆಯಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ನೂಲುಗಂಧ ಧಾರಣೆ ಮಾಡುವ ಮುಖೇನ ಭಕ್ತರಿಗೆ ತಮ್ಮ ನಿತ್ಯ ಕಾರ್ಯನುಷ್ಠಾನಗಳಿಗೆ ಆಧಾರವಾಗಿ ಅಯುಷ್ಯ, ಬಲ, ತೇಜಸ್ಸು, ಸಂವರ್ಧಿಸಲೆಂದು ಸಂಕಲ್ಪಿಸಿ, ನಂತರ ಆ ನೂಲನ್ನು ಶ್ರೀ ಜಗದ್ಗುರುಗಳು ಯುವಕರ ಬಲಗೈಗೆ ಕಟ್ಟುವ ಮೂಲಕ ಅವರ ಭವಿಷ್ಯ ಭವ್ಯವಾಗಲೆಂದು ಆಶೀರ್ವದಿಸುತ್ತಾರೆ.
ಆದಿಮೂಗಣ್ಣನ ಜಾತ್ರೆ ಅಮವಾಸ್ಯೆ ವಿಶೇಷ ಪೂಜೆ ಶ್ರೀ ಗಣೇಶ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ಉತ್ಸವಗಳೊಂದಿಗೆ 77ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸುವ ಮುಖೇನ ನಾಡಿಗೆ ಸುಖ-ಶಾಂತಿ ಸಮೃದ್ಧಿ, ನೆಮ್ಮದಿ ನೆಲೆಗೊಳ್ಳಲಿ, ಭಕ್ತರ ಇಷ್ಟಾರ್ಥ ಸಿದ್ಧಿಯಾಗಲಿ ಎಂಬ ಆಶಯವನ್ನು ಸಂಕಲ್ಪಿಸಿ ಅದನ್ನು ಶ್ರಾವಣ ಮಾಸದಲ್ಲಿ ಸಾಕಾರಗೊಳಿಸುವುದು ಶ್ರೀ ಉಜ್ಜಯಿನಿ ಸದ್ಧರ್ಮ ಪೀಠ ಹಾಗೂ ಪೀಠಾಚಾರ್ಯರ ಕಾರ್ಯ ಬಹು ವೈಶಿಷ್ಟ್ಯವಾಗಿರುತ್ತದೆ.