12 ಕೋಟಿ ರೂ. ವೆಚ್ಚದಲ್ಲಿ ಕೌಜಲಗಿಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ
ಶೀಘ್ರದಲ್ಲಿಯೇ ಬಹುನಿರೀಕ್ಷಿತ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ : ಬಾಲಚಂದ್ರ ಜಾರಕಿಹೊಳಿ
ಯುವ ಭಾರತ ಸುದ್ದಿ ಗೋಕಾಕ:
ಕೌಜಲಗಿ ಮತ್ತು ಸುತ್ತಲಿನ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಮೃತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಈ ಹೊಸ ಕಟ್ಟಡ ನಿರ್ಮಾಣಕ್ಕಾಗಿ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಭಾನುವಾರದಂದು ತಾಲೂಕಿನ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜರುಗಿದ ಅಮೃತ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ವರ್ಷದ ಒಳಗಾಗಿ ಹೊಸ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕು. ಅದರಲ್ಲೂ ರೋಗಿಗಳಿಗೆ ಗುಣಮಟ್ಟದ ಉಚಿತ ಸೇವೆ ಸೇರಿದಂತೆ ಇನ್ನೂ ಅನೇಕ ಆರೋಗ್ಯ ಸೇವೆಗಳು ಸಿಗಬೇಕೆನ್ನುವ ದೃಷ್ಟಿಕೋನದಿಂದ
ಕೌಜಲಗಿಯ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಒಟ್ಟು 30 ಹಾಸಿಗೆಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಮೊದಲು ಕೇವಲ 6 ಹಾಸಿಗೆಗಳ ವ್ಯವಸ್ಥೆಯನ್ನು ಈ ಆಸ್ಪತ್ರೆ ಹೊಂದಿದ್ದು, 1979ರಲ್ಲಿ ಪಿ.ಎಚ್.ಯುನಿಂದ ಆರಂಭಗೊಂಡಿರುವ ಈ ಸರ್ಕಾರಿ ಆಸ್ಪತ್ರೆಯನ್ನು ನಾನು ಈ ಭಾಗದ ಶಾಸಕನಾದ ನಂತರ 2008ರಲ್ಲಿ ಕೌಜಲಗಿ ಮತ್ತು ಹಳ್ಳೂರ ಇವುಗಳನ್ನು ಪಿ.ಎಚ್.ಸಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದನ್ನು ಸ್ಮರಿಸಿದ ಅವರು,ಇನ್ನು ಮುಂದೆ ಉತ್ತಮ ವೈದ್ಯಕೀಯ ಸೌಲಭ್ಯಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ. ಹೆರಿಗೆ, ಸಂತಾನಹರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳು ಸೇರಿದಂತೆ ಹಲವು ಸೌಲಭ್ಯಗಳು ರೋಗಿಗಳಿಗೆ ಉಚಿತವಾಗಿ ಸಿಗಲಿವೆ. ಜತೆಗೆ ಐವರು ಸ್ತ್ರೀ-ರೋಗ ತಜ್ಞರ ಸೇವೆಯು ಸಿಗಲಿದೆ ಎಂದು ಹೇಳಿದರು.
ಕೌಜಲಗಿ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಹುವರ್ಷದ ರೈತಾಪಿ ವರ್ಗದ ಪ್ರಮುಖ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ಉದ್ಘಾಟನೆಯೊಂದೇ ಬಾಕಿಯಿದೆ. ಇದನ್ನು ಸಹ ಆದಷ್ಟೂ ಬೇಗನೇ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಗುವುದು. ಸುಮಾರು 50 ವರ್ಷಗಳಿಂದ ಕೌಜಲಗಿ ತಾಲ್ಲೂಕು ರಚನೆ ಸಂಬಂಧ ಹೋರಾಟ ನಡೆಯುತ್ತಿದ್ದು, ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡಿದ್ದೇನೆ. ಇದರ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೌಜಲಗಿಯನ್ನು ಹೊಸ ತಾಲ್ಲೂಕು ಕೇಂದ್ರವನ್ನಾಗಿ ರಚಿಸುವಂತೆ ಮನವಿ ಮಾಡಿಕೊಂಡಿದ್ದೇನೆ. ಹೊಸ ತಾಲ್ಲೂಕು ಆಗುವುದರಿಂದ ಈ ಭಾಗದ ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾಗಿ ಅವರು ಹೇಳಿದರು.
ಹಿರಿಯ ಮುತ್ಸದ್ದಿ ಅನಂತ ನಾಯಿಕ, ಪ್ರಭಾ ಶುಗರ್ಸ ನಿರ್ದೇಶಕ ಎಂ.ಆರ್. ಭೋವಿ, ಜಿ.ಪಂ.ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ಶಂಕರ ಜೋತಿನವರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಅಡಿವೆಪ್ಪ ದಳವಾಯಿ, ಜಿ.ಎಸ್. ಲೋಕನ್ನವರ, ನಾರಾಯಣ ಅರಮನಿ, ಮಹೇಶ ಪಟ್ಟಣಶೆಟ್ಟಿ, ಅರ್ಬನ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಎಸ್.ಬಿ.ಲೋಕನ್ನವರ, ಬಿ.ಎ.ಲೋಕನ್ನವರ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಂ.ಡಿ ಖಾಜಿ, ಎಸ್.ಬಿ. ಹಳ್ಳೂರ, ರಾಯಪ್ಪ ಬಳೋಲದಾರ, ನೀಲಪ್ಪ ಕೇವಟಿ, ಜಾಕೀರ ಜಮಾದಾರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ಸುಭಾಸ ಕೌಜಲಗಿ, ಹಾಸೀಮಸಾಬ ನಗಾರ್ಚಿ, ಶಾಂತಪ್ಪ ಹಿರೇಮೇತ್ರಿ, ಬಸಪ್ಪ ದಳವಾಯಿ, ಡಿ.ಜೆ. ಮುಲ್ತಾನಿ, ಮಹಾದೇವ ಬುದ್ನಿ, ಅಕ್ಬರ ಮುಲ್ತಾನಿ, ಅಲ್ಲಾಭಕ್ಷ ಹುನ್ನೂರ, ಬಸು ತಳವಾರ, ಚಿಕ್ಕೋಡಿ ಎಡಿಎಚ್‍ಓ ಡಾ.ಎಸ್.ಎಸ್. ಗಡೇದ, ಗೋಕಾಕ ಟಿಎಚ್‍ಓ ಡಾ.ಎಮ್.ಎಸ್. ಕೊಪ್ಪದ, ಶ್ರೀಶೈಲ ಗಾಣಿಗೇರ, ಬಸವರಾಜ ಜೋಗಿ, ಮೆಹಬೂಬ ಮುಲ್ತಾನಿ, ಡಾ. ಪ್ರಶಾಂತ ಸಣ್ಣಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.