ಓದುವ ಸಂಸ್ಕೃತಿ ಬೆಳೆಸುವಲ್ಲಿ ಪುಸ್ತಕ ಕ್ಲಬ್‌ಗಳು ನಿರ್ಣಾಯಕ ಬುಕ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಜಿಐಟಿಯ ಆಡಳಿತ ಮಂಡಳಿ ಚೇರಮನ್ ರಾಜೇಂದ್ರ ಬೆಳಗಾಂವಕರ ಅಭಿಪ್ರಾಯ
ಬೆಳಗಾವಿ: ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯಲ್ಲಿ ಓದುವ ಸಂಸ್ಕೃತಿ ಬೆಳೆಸುವಲ್ಲಿ ಪುಸ್ತಕ ಕ್ಲಬ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಕೆಎಲ್‌ಎಸ್ ಸಂಸ್ಥೆಯ ಜಿಐಟಿಯ ಆಡಳಿತ ಮಂಡಳಿಯ ಚೇರಮನ್ ರಾಜೇಂದ್ರ ಬೆಳಗಾಂವಕರ ಹೇಳಿದರು.
ನಗರದ ಕೆಎಲ್‌ಎಸ್ ಗೋಗಟೆ ಇಂಜನಿಯರಿಂಗ್ ಕಾಲೇಜಿ (ಜಿಐಟಿ)ನ ಮುಖ್ಯ ಗ್ರಂಥಾಲಯದಲ್ಲಿ ಬೆಳಗಾವಿ ಬುಕ್ ಕ್ಲಬ್ ಸಹಯೋಗದೊಂದಿಗೆ ಶುಕ್ರವಾರ ನಡೆದ ಬುಕ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯ-ಪುಸ್ತಕಗಳನ್ನು ಮೀರಿ ಓದುವ ಹವ್ಯಾಸ ಬೆಳೆಸಬೇಕಾಗಿದೆ. ಬುಕ್ ಕ್ಲಬ್ ಮೂಲಕ ವ್ಯಕ್ತಿಗಳ ಬೌದ್ಧಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತವೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಬುಕ್ ಕ್ಲಬ್ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ದೃಷ್ಟಿಕೋನಗಳನ್ನು ವಿಸ್ತರಿಸುತ್ತದೆ ಮತ್ತು ಸಂವಹನ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ. ಇದು ಸೃಜನಶೀಲತೆ ಮತ್ತು ಸಾಹಿತ್ಯಕ್ಕಾಗಿ ಜೀವಮಾನದ ಪ್ರೀತಿಯನ್ನು ಸಹ ಪೋಷಿಸುತ್ತದೆ. ಪ್ರಾಧ್ಯಾಪಕರು ಅಂತರಶಿಸ್ತಿನ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಕಾಲೀನ ವಿಚಾರಗಳೊಂದಿಗೆ ನವೀಕೃತವಾಗಿರುವುದು ಮತ್ತು ಅನೌಪಚಾರಿಕ ವ್ಯವಸ್ಥೆಯಲ್ಲಿ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ನಡುವಿನ ಸಂಬಂಧಗಳನ್ನು ಬೆಳೆಸುವಲ್ಲಿ ಸಹಕಾರಿಯಾಗುವುದು ಎಂದು ವಿವರಿಸಿದರು.
ಸಾಹಿತ್ಯಿಕವಾಗಿ ಮತ್ತು ಸಹಯೋಗದ ಕಲಿಕೆಯ ಮನೋಭಾವ ಉತ್ತೇಜಿಸುವ ಮೂಲಕ ಬುಕ್ ಕ್ಲಬ್ ಸಹಾಯದಿಂದ ಜ್ಞಾನ ವಿನಿಮಯವಾಗುವುದು. ಹಾಗೆಯೇ ವೈಯಕ್ತಿಕ ಬೆಳವಣಿಗೆ ಮತ್ತು ಬೌದ್ಧಿಕ ಪ್ರಚೋದನೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂತಿಮವಾಗಿ ಶೈಕ್ಷಣಿಕ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬುಕ್ ಕ್ಲಬ್ ಪಾತ್ರ ಮಹತ್ವದ್ದು ಎಂದರು.
ಬೆಳಗಾವಿ ಬುಕ್ ಕ್ಲಬ್‌ನ ಕ್ಯುರೇಟರ್ ಅಭಿಷೇಕ್ ಬೆಂಡಿಗೇರಿ ಮಾತನಾಡಿ, ಸಮುದಾಯದೊಳಗೆ ಓದುವಿಕೆ, ಬರವಣಿಗೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು ಬೆಳಗಾವಿ ಬುಕ್ ಕ್ಲಬ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಕ್ಲಬ್‌ನ ಚಟುವಟಿಕೆಗಳು ಮತ್ತು ಉದ್ದೇಶಗಳ ಕುರಿತು ವಿವರಿಸಿದರು.
ಕೆಎಲ್‌ಎಸ್ ಜಿಐಟಿಯ ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯಿಕ ಉಪಕ್ರಮಗಳಿಗೆ ಅನುಕೂಲವಾಗುವಂತೆ ಕೆಎಲ್‌ಎಸ್ ಜಿಐಟಿ ಮತ್ತು ಬೆಳಗಾವಿ ಬುಕ್ ಕ್ಲಬ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸಮಾರಂಭದಲ್ಲಿ ಗ್ರಂಥಾಲಯ ಸಲಹಾ ಸಮಿತಿ ಚೇರಮನ್ ಡಾ.ಶ್ವೇತಾ ಗೌಡರ, ಡೀನ್ ಅಡ್ಮಿನ್ ದಿಗಂಬರ ಕುಲಕರ್ಣಿ, ಡೀನ್ ಸ್ಟೂಡೆಂಟ್ ಅಪೆರ್ಸ್ ಡಾ.ಸತೀಶ ದೇಶಪಾಂಡೆ, ಡೀನ್ ಅಕಾಡೆಮಿಕ್ ಡಾ.ವಿವೇಕ ಕುಲಕರ್ಣಿ, ವೈಶಾಲಿ ನೇಸರಕರ, ಪ್ರಿಯಾ ಜಾಧವ, ಮೇಧಾ ಕುಲಕರ್ಣಿ, ರಾಜೇಂದ್ರ ಕಣಗಾಂಕರ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಐಟಿಯ ಗ್ರಂಥಪಾಲಕ ಡಾ.ಬಸವರಾಜ ಕುಂಬಾರ ಸ್ವಾಗತಿಸಿದರು. ಪ್ರದೀಪ ಪಾಟೀಲ ವಂದರ್ನಾಪಣೆ ಮಾಡಿದರು. ಮಮತಾ ಪರ್ವತಿಕರ್ ಕಾರ್ಯಕ್ರಮ ನಿರೂಪಿಸಿದರು. ಕೋಟ್… ವಿದ್ಯಾರ್ಥಿಗಳು ಮತ್ತು ಪ್ರಾಧ್ಯಪಕರಿಗೆ ಶೈಕ್ಷಣಿಕ, ಬೌದ್ಧಿಕ ವಾತಾವರಣವನ್ನು ಉತ್ಕೃಷ್ಟಗೊಳಿಸುವಲ್ಲಿ ಬುಕ್ ಕ್ಲಬ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಓದುವ ಸಂಸ್ಕೃತಿ, ವಿಮರ್ಶಾತ್ಮಕ ಚಿಂತನೆ ಮತ್ತು ಅರ್ಥಪೂರ್ಣ ಚರ್ಚೆಗಳನ್ನು ಬೆಳೆಸುತ್ತದೆ, ಪಠ್ಯಕ್ರಮದ ಆಚೆಗೆ ವೈವಿಧ್ಯಮಯ ವಿಷಯಗಳ ಆಳವಾದ ತಿಳಿವಳಿಕೆಯನ್ನು ಪ್ರೋತ್ಸಾಹಿಸುತ್ತದೆ. -ರಾಜೇಂದ್ರ ಬೆಳಗಾಂವಕರ, ಕೆಎಲ್‌ಎಸ್ ಸಂಸ್ಥೆಯ ಜಿಐಟಿ ಆಡಳಿತ ಮಂಡಳಿಯ ಚೇರಮನ್.