ಕನ್ನಡ ಸಾಹಿತ್ಯ ಸಮ್ಮೇಳನ : ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮನಗೂಳಿ
ಬಸವನಬಾಗೇವಾಡಿ: ತಾಲ್ಲೂಕಿನ ಮನಗೂಳಿ ಪಟ್ಡಣದಲ್ಲಿ ಡಿ. 25 ರಂದು ನಡೆಯಲಿರುವ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ವಿಶಾಲ ವೇದಿಕೆ ಸಿದ್ದಗೊಂಡಿದೆ.
ಸಮ್ಮೇಳನದ ಯಶಸ್ವಿಗಾಗಿ ಕಸಾಪ ಪದಾಧಿಕಾರಿಗಳು, ಅಭಿನವ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಹಿರಿಯರು ವಿವಿಧ ಇಲಾಖೆ ಅಧಿಕರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಮ್ಮೇಳನದ ವಿವಿಧ ಸಮೀತಿ ಪದಾಧಿಕಾರಿಗಳು ಹಲವು ಸಭೆಗಳನ್ನು ನಡೆಸಿ ಸಮ್ಮೇಳನದ ಯಶಸ್ವಿಗಾಗಿ ಕಾರ್ಯಪ್ರವರತ್ತರಾಗಿದ್ದಾರೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ ರೇವುರಕರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಪ್ರಮುಖ ರಸ್ತೆ ಬದಿಯಲ್ಲಿನ ಗೋಡೆಗಳನ್ನು ಸುಣ್ಣ, ಬಣ್ಣದಿಂದ ಅಂದಗೊಳಿಸಿ ನಾಡ, ನುಡಿ ಮಹತ್ವ ಸಾರುವ ಬರಹಗಳನ್ನು ಬರೆಯಿಸಲಾಗಿದೆ. ಸ್ವಾಗತ ಕಮಾನುಗಳು, ನಾಡ ಧ್ವಜಗಳು, ಫ್ಲೆಕ್ಸ್ ಗಳು ಪಟ್ಟಣದಲ್ಲಿ ರಾರಾಜಿಸಿವ ಮೂಲಕ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಊಟ, ಕುಡಿಯುವ ನೀರು ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನಿಟ್ಟಿನಲ್ಲಿ ಕಾರ್ಯದಲ್ಲಿ ತಲ್ಲೀನರಾಗಿದ್ದು ಕಂಡು ಬಂದಿತು.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಾಭಿಮಾನಿಗಳು ಭಾಗವಹಿಸು ನಿಟ್ಟಿನಲ್ಲಿ ವಿವಿಧ ಗ್ರಾಮಗಳಲ್ಲಿ ಸಭೆ ನಡೆಸಿ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಹೋಬಳಿ ಘಟಕದ ಅಧ್ಯಕ್ಷ ಎಸ್.ಐ.ಬಿರಾದಾರ ತಿಳಿಸಿದರು.