ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿ: ಉದ್ಧವ್ ಠಾಕ್ರೆ

ಯುವ ಭಾರತ ಸುದ್ದಿ ಮುಂಬೈ : ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಮತ್ತೆ ಮಹಾರಾಷ್ಟ್ರದ ರಾಜ್ಯ ವಿಧಾನ ಪರಿಷತ್ತಿನಲ್ಲಿ ಸೋಮವಾರ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ , “ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ” ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿವಾದಿತ ಪ್ರದೇಶದ ನಿವಾಸಿಗಳು ಮರಾಠಿ ಮಾತನಾಡುವ ಜನರು ಎಂದು ಠಾಕ್ರೆ ಹೇಳಿದ್ದಾರೆ. ‘ಪ್ರಾದೇಶಿಕ ಭಾಷೆಗಳನ್ನಾಧರಿಸಿ ರಾಜ್ಯಗಳು ರಚನೆಯಾದ ಕಾಲದಿಂದಲೂ ಗಡಿಯಲ್ಲಿ ಮರಾಠಿ ಭಾಷೆ ಬೇರೂರಿದೆ. ಹಲವು ವರ್ಷಗಳಿಂದ ಅಲ್ಲಿ ವಾಸಿಸುವ ನಾಗರಿಕರು ಮರಾಠಿ ಭಾಷೆ ಮಾತನಾಡುತ್ತಾರೆ. ವಿವಾದದ ಕುರಿತು ಸುಪ್ರೀಂಕೋರ್ಟ್ ತನ್ನ ಆದೇಶವನ್ನು ನೀಡುವವರೆಗೆ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯ ವಿವಾದಿತ ಪ್ರದೇಶಗಳನ್ನು “ಕೇಂದ್ರಾಡಳಿತ ಪ್ರದೇಶ” ಎಂದು ಘೋಷಿಸಬೇಕು ಎಂದು ಠಾಕ್ರೆ ಒತ್ತಾಯಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ (ಏಕನಾಥ್ ಶಿಂಧೆ) ಅವರು ಈ ವಿಷಯದ ಬಗ್ಗೆ ಒಂದು ಮಾತು ಹೇಳಿದ್ದಾರಾ ಮತ್ತು ಅದರ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎಂದು ಠಾಕ್ರೆ ಪ್ರಶ್ನಿಸಿದರು. ಗಡಿ ವಿವಾದ ಕೇವಲ ಭಾಷೆ ಮತ್ತು ಗಡಿಯ ಪ್ರಕರಣವಲ್ಲ, ಇದು ಮಾನವೀಯತೆಯ ವಿಷಯವಾಗಿದೆ” ಎಂದು ಹೇಳಿದರು.
ಗಡಿ ಸಮಸ್ಯೆ ಇತ್ಯರ್ಥವಾಗಿದ್ದು, ನೆರೆ ರಾಜ್ಯಕ್ಕೆ ಒಂದು ಇಂಚು ಭೂಮಿ ನೀಡುವುದಿಲ್ಲ ಎಂಬ ನಿಲುವನ್ನು ಕರ್ನಾಟಕ ವಿಧಾನಸಭೆ ಪುನರುಚ್ಚರಿಸಿದೆ. ಗಡಿ ವಿಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಕ್ರಮಣಕಾರಿಯಾಗಿದ್ದರೂ ಮಹಾರಾಷ್ಟ್ರದ ಮುಖ್ಯಮಂತ್ರಿ ಶಿಂಧೆ ಮೌನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರದ ಪಾತ್ರವನ್ನು ಪ್ರಶ್ನಿಸಿದರು.
YuvaBharataha Latest Kannada News