ಬೊಮ್ಮಾಯಿ ವಿರುದ್ಧ ಮತ್ತೆ ಕಿಡಿ ಕಾರಿದ ಮಹಾರಾಷ್ಟ್ರ ನಾಯಕರು
ಯುವ ಭಾರತ ಸುದ್ದಿ ನಾಗಪುರ : ಸೋಮವಾರದಂದು ಮಹಾರಾಷ್ಟ್ರ ಸರಕಾರ ನಾಗಪುರದಲ್ಲಿ ನಡೆದ ವಿಧಾನ ಮಂಡಲದಲ್ಲಿ ನಡೆದ ಅಧಿವೇಶನದಲ್ಲಿ ಮತ್ತೆ ಕರ್ನಾಟಕದ ವಿರುದ್ಧ ಕಿಡಿ ಕಾರಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಕರ್ನಾಟಕ ಸರಕಾರ ಗಡಿ ವಿವಾದ ಕುರಿತ ಠರಾವ್ ಅಂಗೀಕರಿಸಿದೆ, ತನ್ನ ರಾಜ್ಯದ ಒಂದಿಂಚು ಭೂಮಿಯನ್ನು ಬಿಟ್ಟುಕೊಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ. ಆದರೆ ಇದನ್ನು ಮಹಾರಾಷ್ಟ್ರ ಇಂದು ವಿರೋಧಿಸಿದೆ.
ಮರಾಠಿಗರು ಇರುವ ಪ್ರದೇಶದ ಒಂದಿಂಚು ಭೂಮಿ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಅದಕ್ಕೆ ಎಂಥ ಹೋರಾಟಕ್ಕೂ ಸಿದ್ಧ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಕರ್ನಾಟಕದಲ್ಲಿರುವ ಮರಾಠಿಗರ ಸಲುವಾಗಿ ನಾವು ಯಾವ ಹೋರಾಟಕ್ಕಾದರೂ ಸಿದ್ಧ. ಅವರ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ಅಜಿತ್ ಪವಾರ್ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ಇದುವರೆಗೆ ಕರ್ನಾಟಕದ ವಿರುದ್ಧ ಯಾವುದೇ ನಿರ್ಣಯ ಅಂಗೀಕರಿಸದಿರುವುದರ ವಿರುದ್ಧ ಹಿಡಿಕಾರಿದರು.
ಗಡಿ ವಿವಾದ ಸಂಬಂಧ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವವರೆಗೆ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಉದ್ದವ ಠಾಕ್ರೆ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಗಡಿ ವಿಷಯದಲ್ಲಿ ಆಕ್ರಮಣಕಾರಿಯಾಗಿ ನಿಲುವು ತಾಳಿದ್ದಾರೆ. ಆದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತ್ರ ಮೌನವಾಗಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು. ಮಹಾರಾಷ್ಟ್ರ ಗಡಿ ಠರಾವಿನ ಪ್ರಸ್ತಾವನೆಯಲ್ಲಿ ಇದನ್ನು ಸೇರಿಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ಸುಪ್ರೀಂ ಕೋರ್ಟ್ ನಲ್ಲಿ ಅಥವಾ ಕೇಂದ್ರದ ಬಳಿಯಾಗಲಿ ನಾವು ಪ್ರತಿ ಇಂಚು ಭೂಮಿಗಾಗಿ ನಾವು ಹೋರಾಡುತ್ತೇವೆ ಎಂದು ಹೇಳಿದರು.
ಇನ್ನೊಂದೆಡೆ ಬೆಳಗಾವಿಯಿಂದ ತೆರಳಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಕೊಲ್ಲಾಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಸರಕಾರ ವಿರುದ್ಧ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಸರ್ಕಾರದ ಗಮನ ಸೆಳೆದರು.