ಜೈನಾಪುರ : ಕಾನೂನು ಅರಿವು ನೆರವು ಕಾರ್ಯಕ್ರಮ
ಯುವ ಭಾರತ ಸುದ್ದಿ ಬಸವನಬಾಗೇವಾಡಿ :
ದೇಶದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಜ್ಞಾನವಿರಬೇಕು ಎನ್ನುವ ಮಹದಾಸೆಯಿಂದ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಮಿತಿಗಳು ಇಂತಹ ಕಾನೂನು ಅರಿವು ನೆರವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಹೇಳಿದರು.
ತಾಲ್ಲೂಕಿನ ಜೈನಾಪೂರ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ವಕೀಲರ ಸಂಘ, ಕಂದಾಯ ಇಲಾಖೆ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಕೃಷಿಪ್ರಧಾನ ದೇಶವಾಗಿದೆ. ರೈತರು ತಾವು ಖರೀದಿಸುವ ವಸ್ತುಗಳಿಗೆ ಪಾವತಿ ಪಡೆಯಬೇಕು. ಖರೀದಿಸಿದ ವಸ್ತುಗಳು ಕಳಪೆಮಟ್ಟದ್ದಾಗಿದ್ದರೆ ಜಿಲ್ಲಾ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ವಕೀಲ ಬಿ.ಎಸ್.ಕಳ್ಳಿಗುಡ್ಡ ಮಾತನಾಡಿ, ಅಂಗವಿಕಲರಿಗೆ ಅನುಕಂಪ ತೋರಿಸುವ ಅಗತ್ಯವಿಲ್ಲ. ಬದಲಾಗಿ ಸರಿಯಾದ ಅವಕಾಶಗಳನ್ನು ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲ ವಿ.ಬಿ.ಮರ್ತುರ ಮಾತನಾಡಿ, ಗ್ರಾಹಕರನ್ನು ವ್ಯಾಪಾರಸ್ಥರು ದೇವರೆಂದು ತಿಳಯಬೇಕು. ಲಾಭದ ಮನಸ್ಥಿತಿ ಇದ್ದರೂ ಕೂಡ ಅತಿಯಾದ ದುರಾಸೆ ಹೊಂದಿರಬಾರದು. ಪ್ರತಿಯೊಬ್ಬರೂ ಹಿರಿಯ ನಾಗರಿಕರನ್ನು ಹಾಗೂ ಅಂಗವಿಕಲರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಅಧಿಕಾರಿ ಸಿದ್ಧಾರ್ಥ ಕಳ್ಳಿಮನಿ, ಶಿಕ್ಷಣ ಸಂಯೋಜಕಿ ಗುಬ್ಬಾ, ಬಿ.ಎಸ್.ನಿಲುಗಲ್ಲ ಇದ್ದರು.
ಎ.ಎಸ್.ಮೂರಮಾನ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಜಿ.ಐ.ಮಾಕೊಂಡ ನಿರೂಪಿಸಿದರು.