Breaking News

BIG BREAKING ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಧಿವಶ

Spread the love

BIG BREAKING ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಧಿವಶ

ಯುವ ಭಾರತ ಸುದ್ದಿ ವಿಜಯಪುರ :
ಅಪ್ರತಿಮ ವಾಗ್ಮಿ, ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಇಂದು ರಾತ್ರಿ ನಿಧನರಾದರು.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾರ್ವಜನಿಕರಿಗೆ ದರ್ಶನ ನೀಡಿರಲಿಲ್ಲ.

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅವರ ಗುಣಗಳನ್ನು ವಿವರಿಸುವಲ್ಲಿ ಪದಗಳು ಕಡಿಮೆಯಾಗಬಹುದು. ಅವರ ಅನಿಸಿಕೆಗಳನ್ನು ಅನಕ್ಷರಸ್ಥರಿಂದಲೂ ಚೆನ್ನಾಗಿ ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳಬಹುದು. ಅವರು ಬಹಳ ಅರ್ಥಮಾಡಿಕೊಳ್ಳುವ ಮತ್ತು ಆನಂದಿಸುವ ರೀತಿಯಲ್ಲಿ ಬಹಳ ಕಠಿಣ ವಿಷಯಗಳನ್ನು ಬೋಧಿಸುತ್ತಾರೆ. ತಮ್ಮ ಸರಳ ನಡೆನುಡಿಗಳಿಂದ ಅವರು ನಾಡಿನೆಲ್ಲೆಡೆ ಮನೆ ಮಾತಾಗಿದ್ದರು.

ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ
ಜನನ 24ನೇ ಅಕ್ಟೋಬರ್ 1941 ಬಿಜ್ಜರಗಿ, ವಿಜಯಪುರ, ಕರ್ನಾಟಕದಲ್ಲಿ ಆಗಿದೆ. ಇವರ ಬಾಲ್ಯದ ಹೆಸರು ಸಿದ್ಧಗೊಂಡಪ್ಪ.

ಬಿಜ್ಜರಗಿ ಗ್ರಾಮದ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮೀಜಿಗಳ ಬಳಿ ಬಂದರು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಬಾಲಕ ಸಿದ್ದೇಶ್ವರರ ಚುರುಕುತನ ಮಲ್ಲಿಕಾರ್ಜುನ ಸ್ವಾಮೀಜಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ದೇಶ್ವರರನ್ನು ಕರೆದುಕೊಂಡು ಹೋಗ ತೊಡಗಿದರು. ಜತೆ ಜತೆಯಲ್ಲೇ ಅವರ ಶಾಲಾ- ಕಾಲೇಜುಗಳ ವಿದ್ಯಾಭ್ಯಾಸ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ, ಉನ್ನತ ವಿದ್ಯಾಭ್ಯಾಸಕ್ಕೆ ಕೊಲ್ಲಾಪುರಕ್ಕೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಎಂಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬಾ ಆಳವಾದ ಅಧ್ಯಯನ, ಚಿಂತನೆಗಳನ್ನು ನಡೆಸಿದರು. ಶ್ರೇಷ್ಠ ಅನುಭಾವಿಗಳು, ಮಧುರ ಸ್ವಭಾವದವರು ಆಗಿರುವ ಅವರು ಕನ್ನಡ, ಇಂಗ್ಲಿಷ್, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಅತ್ಯಂತ ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ. ನನ್ನದು ತನ್ನದೆಂಬ ಮಮಕಾರ ತೊರೆದ ಮಹಾಪುರುಷರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಇವರು ಸಂತರಷ್ಟೇ ಅಲ್ಲ. ಜ್ಞಾನೋಪಾಸಕರು ಆಗಿದ್ದಾರೆ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂತವರಲ್ಲೊಬ್ಬರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ವಿಜಯಪುರದ ಜ್ಞಾನ ಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂದು ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು. ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದರು. ಅವರ ಪ್ರವಚನ ಎಲ್ಲೇ ನಡೆದರೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸೂಜಿಗಲ್ಲಿನಂತಹ ಸೆಳೆತ ಅವರ ಭಾಷೆ ದಾಟಿ ಪದ ಪ್ರಯೋಗ ಉದಾಹರಣೆಗಳ ಮೂಲಕ ಪ್ರಚಲಿತ ಸಂಗತಿಗಳ ಜೊತೆಗೆ ಕಲ್ಲು, ಮಣ್ಣು, ಗಿಡ-ಮರ, ಹೂವು, ಪಕ್ಷಿ-ಪ್ರಾಣಿಗಳಲ್ಲಿ ಜೀವ ಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಭುತ. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಅಚ್ಚರಿ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fifteen + 18 =