ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಈಗ ಟೆಕ್ಸಾಸ್ ನಲ್ಲಿ ನ್ಯಾಯಾಧೀಶ !
ಕಾಸರಗೋಡು/ಟೆಕ್ಸಾಸ್:
ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. ಅಮೆರಿಕದ ಟೆಕ್ಸಾಸ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಕೀಲ ಸುರೇಂದ್ರನ್ ಪಟ್ಟೆಲ್ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಮನಸ್ಸಿದ್ದರೆ ಮಾರ್ಗ , ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಒಂದು ಸಮಯದಲ್ಲಿ ಕೇರಳದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟು , ಬೀಡಿ ಕಟ್ಟುತ್ತಿದ್ದ ಬಾಲಕನೊಬ್ಬ ಇದೀಗ ಅಮೆರಿಕದ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಧೀಶರಾಗಿದ್ದು , ಈ ಸಾಧನೆಯು ಎಲ್ಲರೂ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ ಪಟ್ಟೆಲ್ ನ್ಯಾಯಾಧೀಶರಾಗಿದ್ದಾರೆ. ಜನವರಿ 1 ರಂದು ಟೆಕ್ಸಾಸ್‌ನ ಫೋರ್ಟ್ ಬೆಂಡ್ ಕೌಂಟಿಯಲ್ಲಿರುವ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕಾಸರಗೋಡಿನಲ್ಲಿ ದಿನಗೂಲಿ ನೌಕರರ ದಂಪತಿಗೆ ಜನಿಸಿದ್ದರು . ಶಾಲಾ , ಕಾಲೇಜು ದಿನಗಳಲ್ಲಿ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ತಾನೂ ಕೆಲಸ ಮಾಡುತ್ತಿದ್ದರು . ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಇದೀಗ ನ್ಯಾಯಾಧೀಶರಾಗಿರುವುದು ಹೆಮ್ಮೆಯ ವಿಚಾರ.
ಅವರು 10 ನೇ ತರಗತಿ ಬಳಿಕ ಶಿಕ್ಷಣಕ್ಕೆ ತೆರೆ ಎಳೆದು ಬೀಡಿ ಕಟ್ಟಲು ಆರಂಭಿಸಿದ್ದರು . ಆದರೆ ಆ ಕಠಿಣ ಸಂದರ್ಭವು ಅವರ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತ್ತು . ಒಂದು ವರ್ಷದ ಬಳಿಕ ಮತ್ತೆ ಓದುವ ಬಯಕೆ ವ್ಯಕ್ತಪಡಿಸಿದ್ದರು. ಬಳಿಕ ಹಂತ ಹಂತವಾಗಿ ಬೆಳೆಯುತ್ತಾ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ . ಸುರೇಂದ್ರನ್ ಅವರು , ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜಿಗೆ ಸೇರಿದರೂ ಕೆಲಸವನ್ನು ಮುಂದುವರಿಸಬೇಕಾಯಿತು. ಇದರಿಂದ ಹಾಜರಾತಿಗೆ ತೊಂದರೆಯಾಗಿ ಅವರನ್ನು ಪರೀಕ್ಷೆಗೆ ಕೂರಲು ಬಿಡಲಿಲ್ಲವಂತೆ , ಆದರೆ ಪಟ್ಟೆಲ್ ಅವರು ವಕೀಲರಾಗಲು ಬಯಸಿದ್ದು , ತನಗೆ ಒಂದೇ ಒಂದು ಅವಕಾಶ ನೀಡುವಂತೆ ಬೇಡಿಕೊಂಡಿದ್ದರು.
1995 ರಲ್ಲಿ ಕಾನೂನು ಪದವಿ ಪಡೆದು , 1996 ರಲ್ಲಿ ಕೇರಳದ ಹೊಸದುರ್ಗದಲ್ಲಿ ಪ್ರಾಕ್ಟಿಸ್ ಮಾಡಲು ಶುರುಮಾಡಿದ್ದರು. ಕ್ರಮೇಣವಾಗಿ ಪ್ರಸಿದ್ಧ ವಕೀಲರಾದರು . ಸುಮಾರು 1 ದಶಕದ ನಂತರ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಾಕ್ಟಿಸ್ ಆರಂಭಿಸಿದ್ದರು. 2007 ರಲ್ಲಿ ಅವರ ಕುಟುಂಬಕ್ಕೆ ಅಮೆರಿಕಕ್ಕೆ ಹೋಗುವ ಅವಕಾಶ ಸಿಕ್ಕಿತ್ತು , ಬಳಿಕ ನರ್ಸ್ ಆಗಿದ್ದ ಅವರ ಪತ್ನಿಯನ್ನು ಅಮೆರಿಕದ ಪ್ರಮುಖ ವೈದ್ಯಕೀಯ ಸೌಲಭ್ಯವೊಂದರಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಅವರು ತಮ್ಮ ಮಗಳೊಂದಿಗೆ ಅಲ್ಲಿ ನೆಲೆಸಿದರು, ಅಮೆರಿಕಕ್ಕೆ ತೆರಳಿದ ಎರಡು ವರ್ಷಗಳ ನಂತರ , ಪಟ್ಟೆಲ್ ಟೆಕ್ಸಾಸ್ ಬಾರ್ ಪರೀಕ್ಷೆಗೆ ಹಾಜರಾದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಪಾಸ್ ಕೂಡ ಆದರು. ನಾನು ಉತ್ತಮ ಸ್ಕೋರ್ ಮಾಡದಿದ್ದರೆ ಓದುವುದನ್ನೇ ನಿಲ್ಲಿಸುತ್ತೇನೆ ಎಂದು ಹೇಳಿದ್ದ ಅವರು , ಟಾಪರ್ ಆಗಿ ಹೊರಹೊಮ್ಮಿದ್ದರು.
ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ಓದನ್ನು ಮುಂದುವರೆಸಿದ್ದರು . ನಂತರ ಟೆಕ್ಸಾಫ್ ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿದರು. ಜನವರಿ ಒಂದರಂದು ಟೆಕ್ಸಾಸ್ ಕೌಂಟಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ.