Breaking News

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಉಟ್ಟಿದ್ದು ಕರ್ನಾಟಕದ ಸೀರೆ !

Spread the love

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಉಟ್ಟಿದ್ದು ಕರ್ನಾಟಕದ ಸೀರೆ !

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಧಾರವಾಡದ ಆರತಿ ಕ್ರಾಫ್ಟ್ ನಲ್ಲಿ ಸೀರೆಯನ್ನು ಖರೀದಿಸಿ ನಿರ್ಮಲಾ ಸೀತಾರಾಮನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ

ಧಾರವಾಡ :
ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ 2023 ಮಂಡಿಸಿದ್ದಾರೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಬಜೆಟ್ ನಲ್ಲಿ ಕರ್ನಾಟಕದ ಕೆಲ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿರುವುದು ಸಹ ಗೊತ್ತಾಗಿದೆ.

ನಿರ್ಮಲಾ ಸೀತಾರಾಮನ್ ಅವರು ಇಂದು ಉಟ್ಟಿದ್ದ ಸೀರೆ ಸಹ ಕರ್ನಾಟಕದ್ದು ಎನ್ನುವುದು ಇದೀಗ ಬಹಳ ಚರ್ಚೆಯ ವಿಷಯವಾಗಿದೆ. ಸೀರೆಗಳಿಗೆ ಪ್ರಖ್ಯಾತವಾಗಿರುವ ಇಳಕಲ್ ನಲ್ಲಿ ( Ilkal ) ಕೈಮಗ್ಗ ನೇಯ್ದೆ ಮತ್ತು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಕಸೂತಿ ಕೆಲಸ ಮಾಡಿಸಿದ ರೇಷ್ಮೆ ಸೀರೆ ಅದು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದ ಆರತಿ ಕ್ರಾಫ್ಟ್ ನಲ್ಲಿ ಸೀರೆಯನ್ನು ಖರೀದಿಸಿ ನಿರ್ಮಲಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬೋಟಿಕ್ ಮಾಲೀಕರು ಹೇಳುವಂತೆ ನಿರ್ಮಲಾ ಸೀತಾರಾಮನ್ ಅವರೇ ಈ ಸೀರೆಯ ಬಣ್ಣವನ್ನು ತಾವೇ ಸ್ವತಃ ಆಯ್ಕೆ ಮಾಡಿದ್ದಾರಂತೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5 ನೇ ಬಜೆಟ್ ಮಂಡನೆಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದರು.

ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ಧಾರವಾಡ ನಗರದ ನಾರಾಯಣಪುರದ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್‌ನ ಮಹಿಳಾಮಣಿಗಳು ಅನ್ನುವುದು ವಿಶೇಷ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯ್ಯಾರಿಗೆ ಸೂಚಿಸಿದ್ದರು.

ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿ ಕೊಂಡಿರುವ ಆರತಿ ಅವರು, ಸುಮಾರು 210 ಜನ ಮಹಿಳೆಯರ ತಂಡ ಕಟ್ಟಿಕೊಂಡು, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ.

ಗ್ರಾಹಕರಿಂದ ಕಸೂತಿ ಸೀರೆ, ಶಲ್ಯೆ, ಉಡುಗೆಗಳ ಬೇಡಿಕೆ ಪಡೆಯುವ ಆರತಿ ಹಿರೇಮಠ ಅವರು ಕಸೂತಿ ಮಾಡುವ ತಮ್ಮ ಮಹಿಳಾ ಸಿಬ್ಬಂದಿ ಮನೆಗೆ ತೆರಳಿ, ಪರಿಕರ ಪೂರೈಸುತ್ತಾರೆ ಮತ್ತು ಸಿದ್ದವಾದ ವಸ್ತುಗಳನ್ನು ತಾವೇ ಕಲೆಕ್ಟ್ ಮಾಡುತ್ತಾರೆ.

ನಿರ್ಮಲಾ ಸೀತಾರಾಮನ್ ಅವರಿಗೆ ಕಳುಹಿಸಿದ್ದ ಸೀರೆಗಳ ವಿಶೇಷತೆ: ನಿರ್ಮಲಾ ಸೀತಾರಾಮ್ ಅವರ ಆಸಕ್ತಿಯ ಬೇಡಿಕೆಯಂತೆ ಸೀರೆಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಇಂದು ಅವರು ತೊಟ್ಟಿರುವ ಕೇಂಪು(ಮರೂನ್) ಬಣ್ಣದ ಸೀರೆಯು ಸೇರಿದೆ.

ಸೀರೆ ವಿಶೇಷತೆ: ಕೈಮಗ್ಗದಲ್ಲಿ ನೇಯ್ದ ಇಳಕಲ್ಲ ರೇಷ್ಮೆ ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದುವರೇ ಮೀಟರ್ ಉದ್ದದ ಇಳಕಲ್ಲ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.

ನಿರ್ಮಲ ಸೀತಾರಾಮನ್ ಅವರು ಇಂದು 86 ನಿಮಿಷದಲ್ಲಿ ಯಾವುದೇ ವಿರಾಮವಿಲ್ಲದೆ ಬಜೆಟ್ ಓದಿದರು. ಕಳೆದ ವರ್ಷ ಅವರು 92 ನಿಮಿಷಗಳ ಕಾಲ ಬಜೆಟ್ ಓದಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × 3 =