ಬೆಳಗಾವಿ ಮೇಯರ್ ಮೊದಲ ಯಡವಟ್ಟುಗಳು...ಶಾಸಕರಿಗೆ ಎಚ್ಚರಿಕೆ ಕೊಟ್ರಾ ಆ ನಗರಸೇವಕರು?
ಯುವ ಭಾರತ ಸುದ್ದಿ ಬೆಳಗಾವಿ: ವಿಧಾನಸಭೆ ಚುನಾವಣೆ ಮತ್ತು ಮರಾಠಿ ಭಾಷಿಕರ ಗಮನದಲ್ಲಿಟ್ಟುಕೊಂಡು ಶಾಸಕದ್ವಯರು ಮರಾಠಿ ಭಾಷಿಕರನ್ನೇ ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ತಂದು ಕುಳ್ಳಿರಿಸಿದರು. ಆದರೆ ಆ ಘನತೆಯನ್ನು ಎತ್ತಿ ಹಿಡಿಯಬೇಕಾಗಿದ್ದ ಮೇಯರ್ ಶೋಭಾ ಸೋಮನಾಚೆ ಅವರು ಮೊದಲ ದಿನವೇ ಪಾಲಿಕೆಗೆ ಮತ್ತು ಆಯ್ಕೆಮಾಡಿದವರಿಗೆ ಶೋಭೆ ತರುವ ಕೆಲಸ ಮಾಡಲಿಲ್ಲ. ಸಂಪ್ರದಾಯದಂತೆ ಮೇಯರ್ ಹುದ್ದೆಗೆ ಆಯ್ಕೆಯಾದವರು ಅವರ ಆಸನದ ಹಿಂಭಾಗದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ, ಮಹಾತ್ಮಾ ಗಾಂಧಿಜಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳಿಗೆ ಗೌರವ ಅರ್ಪಿಸಿ ಕೊನೆಗೆ ಮೇಯರ ಆಸನಕ್ಕೆ ನಮಸ್ಕರಿಸಿ ಕುಳಿತುಕೊಳ್ಳುವುದು ಒಂದು ಸಂಪ್ರದಾಯ. ಆದರೆ ಇಲ್ಲಿ ಈ ಸಂಪ್ರದಾಯವನ್ನು ಗಾಳಿಗೆ ತೂರಿ ಆಸನಕ್ಕೂ ನಮಸ್ಕರಿಸದೇ ಕುಳಿತುಕೊಂಡಿದ್ದು ಬೆಳಗಾವಿಗರಿಗೆ ಮಾಡಿದ ಅವಮಾನ. ಅದರ ಜೊತೆಗೆ ಆ ಗಣ್ಯರಿಗೂ ಮಾಡಿದ ಅವಮಾನ ಎಂದು ಹೇಳಲಾಗುತ್ತದೆ.
ಈ ಸಂದರ್ಭದಲ್ಲಿ ಅಲ್ಲಿದ್ದ ಕೌನ್ಸಿಲ್ ಸೆಕ್ರೆಟರಿ ಅವರು ಹೇಳಿದರೂ ಅರ್ಥೈಸಿಕೊಳ್ಳದ ಮೇಯರ ಅವರು ಹಾಗೆ ಕುಳಿತುಕೊಂಡರು. ಇದು ಮರಾಠಾ ಅಂತ ಭಾವಿಸಿ ಆಯ್ಕೆ ಮಾಡಿದ ಶಾಸಕದ್ವಯರನ್ನು ಮರಾಠಾ ಸಮುದಾಯದವರೇ ಸಂಶಯದಿಂದ ನೋಡುವ ಪರಿಸ್ಥಿತಿ ಬಂದೊದಗಿದೆ.
ಶೋಭಾ ಆಯ್ಕೆ ಏಕಾಯಿತು?: ಗಮನುಸಬೇಕಾದ ಸಂಗತಿ ಎಂದರೆ ಇಲ್ಲಿ ಎರಡು ದಿನ ಮೊದಲೇ ಶಾಸಕರು ಹೈಕಮಾಂಡ ಆದೇಶ ಧಿಕ್ಕರಿಸಿ ಮರಾಠಾ ಭಾಷಿಕ ಅದರಲ್ಲೂ ಶೋಭಾ ಸೋಮನಾಚೆ ಹೆಸರನ್ನು ಅಂತಿಮಗೊಳಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಶೋಭಾ ಹೆಸರನ್ನು ಅಂತಿಮಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ನಗರಸೇವಕರಾದ ಜಯಂತ ಜಾಧವ, ನಿತಿನ್ ಜಾಧವ, ಮಂಗೇಶ ಪವಾರ, ಬಿಜೆಪಿಯ ಜಿತೇಂದ್ರ ದೇವಣ್ಣ ಮತ್ತು ದೀಪಕ ಸೋಮನ್ನಾಚೆ ಮುಂತಾದವರು ಶಾಸಕರಿಗೆ ಬೆದರಿಕೆ ರೀತಿ ಮಾತುಗಳ ಮೂಲಕ ಒತ್ತಡ ಹೇರಿದ್ದರು ಎನ್ನಲಾಗಿದೆ. ಶೋಭಾ ಅವರನ್ನು ಆಯ್ಕೆ ಮಾಡದಿದ್ದರೆ ನಿಮ್ಮ ಚುನಾವಣೆಯಲ್ಲಿ ನಾವು ಕೆಲಸ ಮಾಡಲ್ಲ ಎಂದು ಎಚ್ಚರಿಸಿದ್ದರಂತೆ. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ಸಾರಿಕಾ ಪಾಟೀಲರನ್ನು ನೇಮಕ ಮಾಡಬಾರದು ಎನ್ನುವ ಎಚ್ಚರಿಕೆ ಕೊಟ್ಟಿದ್ದರಂತೆ. ಈ ಮಾತನ್ನು ಆಯ್ಕೆ ಪ್ರಕ್ರಿಯೆ ಮುಗಿದ ನಂತರ ತಡರಾತ್ರಿ ಖುದ್ದು ಅವರೇ ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಶಾಸಕ ಅಭಯ ಪಾಟೀಲರು ಇವರ ಮಾತಿಗೆ ಹೆದರಿ ಬಿಜೆಪಿ ವರಿಷ್ಠರ ಮಾತನ್ನು ಧಿಕ್ಕರಿಸಿ ಶೋಭಾ ಸೋಮನಾಚೆ ಆಯ್ಕೆ ಘೋಷಿಸಿದರು ಎನ್ನಲಾಗಿದೆ.
ಇಲ್ಲಿ ಮೇಯರ್, ಉಪಮೇಯರ ಅಷ್ಟೇ ಅಲ್ಲ ಎಲ್ಲ ಸ್ಥಾಯಿಸಮಿತಿಗಳೂ ಮರಾಠರಿಗೆ ಕೊಡಬೇಕು ಎನ್ನುವ ಎಚ್ಚರಿಕೆಯನ್ನು ಶಾಸಕರಿಗೆ ನೀಡಿದ್ದೇವೆ ಎಂದು ಈ ನಗರಸೇವಕರು ತಮ್ಮವರ ಬಳಿ ಆಡಿಕೊಂಡಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ.