ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ : ಪ್ರಾಚಾರ್ಯ ಡಾ. ಆಶಾಲತಾ ತೇರದಾಳ
ಯುವ ಭಾರತ ಸುದ್ದಿ ಬೆಳಗಾವಿ : ಮಹಿಳೆಯರ ಸ್ಥಿತಿ ಉತ್ತಮಗೊಂಡಲ್ಲದೆ ಉತ್ತಮ ಸಮಾಜದ ನಿರೀಕ್ಷೆ ಅಸಾಧ್ಯ. ಮಹಿಳೆಯ ಏಳ್ಗೆಯಲ್ಲಿ ದೇಶದ ಭವಿಷ್ಯವಿದೆ ಎಂದು ಗೋಕಾಕಿನ ಜೆಎಸ್ಎಸ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆಶಾಲತಾ ತೇರದಾಳ ಆಶಯ ವ್ಯಕ್ತಪಡಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ವೇದಗಳ ಕಾಲದಲ್ಲಿ ಮಹಿಳೆಯರ ಸ್ಥಿತಿಗತಿ ಚೆನ್ನಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮಹಿಳೆಯನ್ನು ಕೇಂದ್ರದಿಂದ ಅಂಚಿನೆಡೆಗೆ ತಳ್ಳಲ್ಪಟ್ಟಿತು. ಪ್ರತಿಯೊಬ್ಬ ವ್ಯಕ್ತಿಯು ಜನ್ಮತಃ ಸ್ವಾತಂತ್ರ್ಯರು. ಆದರೆ, ಮಹಿಳೆಯನ್ನು ಮಾತ್ರ ಅನೇಕ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತಿದೆ. ಹುಟ್ಟಿನೊಂದಿಗೆ ತನ್ನ ಆಂತರಿಕ ಮತ್ತು ಭೌತಿಕ ವಿಕಾಸದ ಸಾಧ್ಯತೆಯನ್ನು ಪಡೆದುಕೊಂಡೇ ಬಂಧಿರುವ ಇವಳ ಮೇಲೆ ಶಾಸ್ತ್ರ, ಸಂಪ್ರದಾಯ, ಧರ್ಮ ಇನ್ನಿತರ ಅಂಶಗಳನ್ನು ಹೇರುತ್ತಲೇ ಇದ್ದಾರೆ. ಸಮಸಮಾಜದ ವಿರೋಧದ ನಿಲುವ ಅವಳನ್ನು ಸರ್ವರೀತಿಯಲ್ಲಿ ಬೆಳೆಯದಿರಲು ಬಂಧಿಸಿದೆ. ಎಲ್ಲಾ ಬಂಧನಗಳ ಮುಕ್ತಿಯಲ್ಲಿ ಅವಳ ನಿಜವಾದ ಸ್ವಾತಂತ್ರ್ಯ, ಬದುಕು ಅಡಗಿದೆ. ಅಂಥ ಸ್ವಾತಂತ್ರ್ಯದ ಬದುಕನ್ನು ರೂಪಿಸಿಕೊಳ್ಳಲು ಸಮಾಜ ನೆರವಾಗಬೇಕು. ಮಹಿಳೆಯರ ಕುರಿತು ಇತ್ತೀಚೆಗೆ ಪಾಶ್ಚಿಮಾತ್ಯರಗಿಂತಲೂ ಭಾರತದಲ್ಲಿ ದೃಷ್ಟಿಕೋನ ಬದಲಾಗುತ್ತಿದೆ. ಭಾರತ ಇಂದು ಮಹಿಳೆಯು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸುದೃಢವಾಗಲು ಅನೇಕ ಭೂಮಿಕೆಗಳನ್ನು ಸೃಷ್ಟಿಸಿದೆ. ಅದನ್ನು ತಿಳಿದರುವ ಮಹಿಳೆ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ತಿಳಿಯದವರಿಗೂ ತಿಳಿಸಿಕೊಡಬೇಕು. ಆಗ ನಿಜವಾದ ಮಹಿಳಾ ಸಬಲೀಕರಣವಾಗಲಿದೆ ಎಂದರು.
ಬೆಳಗಾವಿಯ ಪಟ್ಟೇದ ಫರ್ಟಿಲಿಟಿ ಮತ್ತು ರೀಸರ್ಚ್ ಕೇಂದ್ರದ ನಿರ್ದೇಶಕಿ ಡಾ. ಶೋಭನಾ ಪಟ್ಟೇದ್ ಮಾತನಾಡಿ, ಬದಲಾವಣೆ ಎಂಬುದು ತಕ್ಷಣವಾಗುವುದಲ್ಲ. ಅದು ನಿರಂತರ ಹೋರಾಟದಿಂದ ಕೂಡಿರುವಂತದ್ದು. ಮಹಿಳೆ ಪುರುಷನಿಗಿಂತ ಶಾರೀರಿಕವಾಗಿ ಬಿನ್ನವಾಗಿದ್ದಾಳೆ. ಮಗುವಿನ ಜನನದಿಂದ ಹೆಣ್ಣು ಮಗುವೊಂದು ಶಾರೀರಿಕ ಬದಲಾವಣೆಯಾಗುವ ಹಂತಗಳನ್ನು ವಿವರಿಸಿದರು. ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಅತೀ ಕಡಿಮೆಯಿದೆ. ಹದಿನೆಂಟು ವರ್ಷಗಳ ಕೆಳಗೆ ಮದುವೆಯಾಗುವ ಹೆಣ್ಣುಮಕ್ಕಳು ಮುಂದೆ ಅನೇಕ ಶಾರೀರಿಕ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಇದನ್ನು ವಿಶೇಷವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎಸ್. ತೇರದಾಳ, ಒಂದು ಸಮಾಜ ಅಂದರೆ ಕೇವಲ ಪುರುಷನ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಯಲ್ಲ. ಅದು ಗಂಡು -ಹೆಣ್ಣಿನ ಬೆಳವಣಿಗೆ. ಸರಕಾರ, ಸಮಾಜ, ಸಂಘ ಸಂಸ್ಥೆಗಳಲ್ಲಿ ಸ್ತ್ರೀಪರವಾದ ಅನೇಕ ಯೋಜನೆ, ಕಾರ್ಯಕ್ರಮಗಳಿವೆ. ಹೆಣ್ಣು ಅವುಗಳನ್ನು ಬಳಸಿಕೊಂಡು ತನ್ನಲ್ಲಿರುವ ಅಗಾಧವಾದ ಶಕ್ತಿ- ಸಾಮರ್ಥ್ಯಗಳ ಮೂಲಕ ತನ್ನ ಸರ್ವತೋಮುಖ ಬೆಳವಣಿಗೆಗೆ ಸಿದ್ಧಳಾಗಬೇಕು ಎಂದರು.
ಡಾ. ಸುಮನ ಮುದ್ದಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಶೋಭಾ ನಾಯಕ ಸ್ವಾಗತಿಸಿದರು. ಡಾ. ಮಧುಶ್ರೀ ಕಳ್ಳಿಮನಿ ಪರಿಚಯಿಸಿದರು. ಡಾ. ಮಂಜುಳಾ ಕೆ. ವಂದಿಸಿದರು. ವಿದ್ಯಾರ್ಥಿನಿ ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಡಾ. ದೀಪಾ ಅಂಟಿನಿ ನಿರೂಪಿಸಿದರು. ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.