ಹೂವಿನ ಹಿಪ್ಪರಗಿ : ಅಭಿವ್ಯಕ್ತಿ ಸಂಭ್ರಮ ಕಾರ್ಯಕ್ರಮ
ಯುವ ಭಾರತ ಸುದ್ದಿ ಬಸವನ ಬಾಗೇವಾಡಿ : ಮಕ್ಕಳನ್ನು ಬೆಳೆಸುವಲ್ಲಿ ತಾಯಂದಿರ ಪಾತ್ರ ಹಿರಿದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಶ್ರೇಷ್ಠ ಸಂಸ್ಕಾರ ನೀಡಿದರೆ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಯನ್ನು ನೀಡಬಹುದು ಎಂದು ಬಸವನಬಾಗೇವಾಡಿಯ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಚಿಂತಕ ಅಶೋಕ ಹಂಚಲಿ ಹೇಳಿದರು.
ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಆಶೀರ್ವಾದ ಶಿಕ್ಷಣ ಸಂಸ್ಥೆಯ ಆಶೀರ್ವಾದ ಪಬ್ಲಿಕ್ ಸ್ಕೂಲ್ ಮತ್ತು ಪರಿವರ್ತನ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭದಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಅಭಿವ್ಯಕ್ತಿ ಸಂಭ್ರಮ-೨೦೨೩ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ದಡ್ಡ ವಿದ್ಯಾರ್ಥಿಯೆಂದು ಮೂದಲಿಸುತ್ತಿದ್ದ ತನ್ನ ಮಗ ಥಾಮಸ್ ಆಲ್ವ ಎಡಿಸನ್ ಅವನಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಜಗತ್ತಿನಲ್ಲಿ ನೂರಾರು ಸಂಶೋಧನೆ ಮಾಡಿ ವಿeನ ಕ್ಷೇತ್ರದ ಶ್ರೇಷ್ಠ ವಿದ್ಯಾರ್ಥಿಯನ್ನಾಗಿ ರೂಪಿಸಿದ್ದು ಅವನ ತಾಯಿ. ಇದೇ ವಿದ್ಯಾರ್ಥಿ ವಿದ್ಯುತ್ ಬಲ್ಬ್ ಕಂಡುಹಿಡಿದಿರುವುದು. ಇಂತಹ ವಿದ್ಯಾರ್ಥಿಯನ್ನು ಜಗತ್ತಿಗೆ ನೀಡಿದ ತಾಯಿಯ ಪಾತ್ರ ಜಗತ್ತು ಎಂದಿಗೂ ಮರೆಯುವುದಿಲ್ಲ. ಇತಿಹಾಸದ ಪುಟದಲ್ಲಿ ಅನೇಕ ತಾಯಂದಿರು ನಾಡಿಗೆ ಶ್ರೇಷ್ಠ ವ್ಯಕ್ತಿಯನ್ನು ನೀಡಿದ್ದಾರೆ. ನರೇಂದ್ರ ಮೋದಿಯವರ ತಾಯಿ ಅವರಿಗೆ ಉತ್ತಮ ಸಂಸ್ಕಾರ ನೀಡಿದ ಫಲವಾಗಿಯೇ ಇಂದು ಭಾರತ ದೇಶ ಇಡೀ ಜಗತ್ತಿನಲ್ಲಿ ತನ್ನ ಶಕ್ತಿಯನ್ನು ತೋರಿಸುವಂತಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸಬೇಕೆಂದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವುದು ತುಂಬಾ ಮುಖ್ಯವಾಗಿದೆ. ಗುಣಾತ್ಮಕ ಶಿಕ್ಷಣದಿಂದ ಹೊಸ ಪ್ರತಿಭೆಗಳು ಸಮಾಜದಲ್ಲಿ ಕಂಗೊಳಿಸುವಂತಾಗಲು ಸಾಧ್ಯ. ಈ ದಿಶೆಯಲ್ಲಿ ಇಲ್ಲಿನ ಆಶೀರ್ವಾದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಯುವಕರಾಗಿದ್ದು. ಅವರು ಸಿದ್ದಗಂಗಾದ ಶಿವಕುಮಾರ ಸ್ವಾಮೀಜಿ, ವಿಜಯಪುರದ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಹಾಗೂ ಪಾಲಕರ ಸಹಕಾರದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಈ ಸಂಸ್ಥೆಯು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಗನಗೌಡ ಪಾಟೀಲ ಸಾಸನೂರ ಮಾತನಾಡಿ, ಈ ಶಾಲೆಯು ಸತತ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಯುಕ್ತವಾದ ಶಿಕ್ಷಣವನ್ನು ಕೊಡುವುದು ಮಾತ್ರವಲ್ಲದೇ ಉತ್ತಮವಾದ ಸಂಸ್ಕಾರ ನೀಡಿ ಅವನನ್ನು ಬುದ್ಧಿವಂತನನ್ನಾಗಿಸಿ ಉತ್ತಮ ನಾಗರಿಕನನ್ನಾಗಿಸಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಶಾಲೆಯು ಉತ್ತಮವಾದ ವೇದಿಕೆಯಾಗಿದೆ ಎಂದರು.
ಆಶೀರ್ವಾದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ವಿ.ಸಜ್ಜನ, ಗ್ರಾಮ ಪಂಚಾಯತ ಅಧ್ಯಕ್ಷ ಮುರಗೇಶ ತಾಳಿಕೋಟಿ, ಮಾಜಿ ಸೈನಿಕ ರಾಮನಗೌಡ ಬಿರಾದಾರ ಮಾತನಾಡಿದರು. ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ಆಶೀರ್ವಾದ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ವಿರುಪಾಕ್ಷಪ್ಪ ಸಜ್ಜನ ವಹಿಸಿದ್ದರು. ವಿಜಯಮಾಲಾ ಕೋರಿ ಸ್ವಾಗತಿಸಿದರು. ಸಿಂಚನಾ ಕಂಚನೂರ, ಸಿಂಚನಾ ಹೇರೂರ ನಿರೂಪಿಸಿದರು. ಬಿ.ಟಿ.ದೊಡ್ಡಮನಿ ವಂದಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.