Breaking News

ನಡಹಳ್ಳಿ ಹಟಾವೋ ಬಿಜೆಪಿ ಬಚಾವೋ ಅಭಿಯಾನ ಮೂಲಕ ನಡಹಳ್ಳಿಗೆ ಟಿಕೆಟ್ ನೀಡದಂತೆ ಒತ್ತಾಯ

Spread the love

ನಡಹಳ್ಳಿ ಹಟಾವೋ ಬಿಜೆಪಿ ಬಚಾವೋ ಅಭಿಯಾನ ಮೂಲಕ ನಡಹಳ್ಳಿಗೆ ಟಿಕೆಟ್ ನೀಡದಂತೆ ಒತ್ತಾಯ

ಹಕ್ಕೋತ್ತಾಯ ಮಾಡುತ್ತಿದ್ದೇವೆ ವಿನಹ ನಾವ್ಯಾರು ಬಿಜೆಪಿ ಪಕ್ಷ ಸರ್ಕಾರದ ವಿರೋಧಿಗಳಲ್ಲ: ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ಪಷ್ಟನೆ

ಯುವ ಭಾರತ ಸುದ್ದಿ ಮುದ್ದೇಬಿಹಾಳ : ಬಿಜೆಪಿ ಪಕ್ಷದ ಪ್ರತಿಯೊಬ್ಬ ಮೂಲ ಕಾರ್ಯಕರ್ತರ ಪರಿಶ್ರಮದಿಂದ ಗೆದ್ದು ಬಂದಿರುವ ಸ್ಥಳೀಯ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರು ಗೆದ್ದು ಬಂದ ಮೇಲೆ ಮೂಲ ಬಿಜೆಪಿ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಲ್ಲದೇ ಮತಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಮತ್ತು ಸರ್ಕಾರಕ್ಕೆ ತೀವ್ರ ಅಪಮಾನಕ್ಕಿಡಾಗುವಂತೆ ಮಾಡಿದ್ದಾರೆ. ನಡಹಳ್ಳಿ ಹಟಾವೋ ಬಿಜೆಪಿ ಬಚಾವೋ ಎನ್ನುವ ವಿನೂತ ಅಭಿಯಾನ ಹಮ್ಮಿಕೊಳ್ಳುವ ಮೂಲಕ ನಡಹಳ್ಳಿವರಿಗೆ ಬಿಜೆಪಿ ಟಿಕೆಟ್ ನೀಡದಂತೆ ವರಿಷ್ಠರಿಗೆ ಒತ್ತಾಯಿಸುತ್ತೇವೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ಹಂಡರಗಲ್ಲ ರಸ್ತೆ ಮಾರ್ಗದಲ್ಲಿರುವ ದೇಸಾಯಿಯವರ ತೋಟದ ಮನೆಯಲ್ಲಿ ಗುರುವಾರ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೭ ವರ್ಷಗಳಿಂದ ಮತಕ್ಷೇತ್ರದಲ್ಲಿ ಬಿಜೆಪಿ ಸಕ್ರೀಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಹಲವಾರು ಮುಖಂಡರಲ್ಲಿ ನಾನೂ ಕೂಡ ಒಬ್ಬನಿದ್ದೇನೆ. ೨೦೧೮ಕ್ಕಿಂತ ಮುಂಚೆ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಶಾಸಕರಾಗಿದ್ದರು. ಆಗ ನಾನು ಜಿಲ್ಲಾ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷನಾಗಿದ್ದೆ. ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ತಮ್ಮ ಆಪ್ತರ ಮೂಲಕ ನನ್ನ ಜಿಲ್ಲಾ ಪಂಚಾಯತಿ ಆಯ್ಕೆಯಲ್ಲಿ ಲೋಪವಿದೆಂದು ಬಣ್ಣಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಮುಂದೆ ನ್ಯಾಯಾಲಯ ನನಗೆ ನನ್ನ ಪರವಾಗಿ ತೀರ್ಪು ನಿಡಿ ನಿಧೋಷಿ ಎಂದು ಆದೇಶ ಮಾಡಿತು. ತದನಂತರ ೨೦೧೮ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಡಹಳ್ಳಿಯವರೇ ನಮ್ಮ ಬಿಜೆಪಿ ಪಕ್ಷವನ್ನು ಸೇರಿದರು. ಆಗ ನಮ್ಮ ಮೂಲ ಕಾರ್ಯಕರ್ತರಿಗೂ ಸ್ವಲ್ಪ ಅಸಧಾನವಿತ್ತು. ಆ ಸಮಯದಲ್ಲಿ ಎ.ಎಸ್.ಪಾಟೀಲ(ನಡಹಳ್ಳಿ)ಯವರ ಸಹೋದರ ಶಾಂತಗೌಡ ಪಾಟೀಲ ಮತ್ತು ಹಲವಾರು ಸ್ನೇಹಿರೊಂದಿಗೆ ನನ್ನ ಮನೆಗೆ ಬಂದು ಹಳೆ ವೈಷಮ್ಯಗಳನ್ನು ಮರೆತು ಇದೊಂದು ಸಲ ನಮ್ಮ ಸಹೋದರಿಗೆ ಬೆಂಬಲಿಸಿ, ಗೆಲ್ಲಿಸಿ ನಿಮ್ಮ ಸಹಕಾರ ಅತ್ಯಗತ್ಯವಾಗಿದೆ ಎಂದು ಕಳಕಳಿಯಿಂದ ಕೇಳಿಕೊಂಡರು.

ಹಾಗಾಗಿ ನಾನು ಮತ್ತು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಹೇಮರಡ್ಡಿ ಮೇಟಿಯವರು ಸೇರಿದಂತೆ ಅನೇಕ ಮುಖಂಡರು ಹಾಗೂ ನನ್ನ ಜೊತೆಗಿರುವ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಎಲ್ಲವನ್ನು ಮರೆತು ನಡಹಳ್ಳಿಯವರನ್ನು ಗೆಲ್ಲಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿ ಗೆಲ್ಲಿಸಿದ್ದೇವು. ಇದು ಕೇವಲ ನನಗೊಬ್ಬನಿಗೆ ಮಾತ್ರವಲ್ಲ, ಎಲ್ಲ ಕಾರ್ಯಕರ್ತರಿಗೂ ಈ ಕೀರ್ತಿ ಸಲ್ಲುತ್ತದೆ. ಮುಂದೆ ಗೆದ್ದ ನಂತರ ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೂಲ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ವಿವಿಧ ಮುಖಂಡರಿಗೆ ಯಾವುದೇ ಗೌರವ ಕೊಡದೇ, ಯಾವುದೇ ಸ್ಥಾನ-ಮಾನಗಳನ್ನು ನೀಡದೇ, ಅಪಮಾನ ಮಾಡುತ್ತಲೇ ಬಂದರು. ಎಲ್ಲವೂ ಗೊತ್ತಿದ್ದರೂ ಇಂದಲ್ಲ, ನಾಳೆ ಸುಧಾರಿಸಿಕೊಳ್ಳಬಹುದು ಎಂದು ಇಷ್ಟು ದಿನ ಮೌನವಹಿಸಿದ್ದೇವು. ಆದರೆ, ತಮ್ಮ ತಪ್ಪು ತಾವು ಸರಿಪಡಿಸಿಕೊಳ್ಳಲೇ ಇಲ್ಲ. ಜೊತೆಗೆ ನಮ್ಮ ಮೂಲ ಬಿಜೆಪಿ ಕಾರ್ಯಕರ್ತರ ಮೇಲೆ ಇಲ್ಲ, ಸಲ್ಲದ ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ದುರಾಡಳಿತ ಮತ್ತು ಭ್ರಷ್ಟಾಚಾರ ನಡೆಸುತ್ತಲೇ ಬಂದರು. ಇದನ್ನು ಗಮನಿಸಿದ ನಾನು ಮತ್ತು ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಅನಿವಾರ್ಯವಾಗಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಬಾರದು ಎಂದು ವರಿಷ್ಠರಿಗೆ ಹಕ್ಕೋತ್ತಾಯ ಮಾಡುತ್ತಿದ್ದೇವೆ ವಿನಹ ನಾವ್ಯಾರು ಬಿಜೆಪಿ ಪಕ್ಷ ಸರ್ಕಾರದ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬನ್ನಿ ಸವಾಲು; ಸದ್ಯ ಈ ಬಾರಿ ಪಕ್ಷ ನನಗೆ ಟಿಕೆಟ್ ಕೊಟ್ಟರೇ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಕೆಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಅರಿಷಿಣ, ಕುಂಕುಮ ಹಚ್ಚಿ ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಯಾರು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರನ್ನು ಕರೆದಿಲ್ಲ. ಎಲ್ಲ ಲಾಭವಿರುತ್ತದೆ ಅಲ್ಲಿ ಹಲವಾರು ರೀತಿ ನಾಟಕ ಮಾಡಿ ವಲಸೆ ಹೋಗುವುದು ಚಾಳಿಯಾಗಿದೆ. ಹಾಗಾಗಿ ತಾವೇ ಬಂದಿದ್ದಿರಿ, ಇಲ್ಲಿಯೇ ಇರಬೇಕೆಂದು ಯಾರೂ ಕೂಡ ಒತ್ತಾಯ ಮಾಡುತ್ತಿಲ್ಲ. ಒಂದು ವೇಳೆ ಜನಬೆಂಬಲ ನಿಮಗಿದ್ದರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬನ್ನಿ ನೋಡೋಣ ಎಂದು ಸವಾಲ ಎಸೆದರು.

ಆಸ್ಪತ್ರೆ ಏಕೆ ನಿರ್ಮಿಸಲಿಲ್ಲ?: ಮತಕ್ಷೇತ್ರದಲ್ಲಿ ಈ ಹಿಂದೆ ನಡಹಳ್ಳಿಯವರು ಸಾಮಾಜಿಕ ಸೇವೆ ಹೆಸರಲ್ಲಿ ರಾಜಕೀಯಕ್ಕೆ ಬಂದರು. ೨೦೦೫-೦೬ರಲ್ಲಿ ಮಾರುತಿ ನಗರ ಬಡಾವಣೆಗೆ ಹೊಂದಿಕೊಂಡಿರುವ ತಮ್ಮ ೧೬ ಎಕರೆ ಜಮೀನಿನಲ್ಲಿ ಬಡಹೆಣ್ಣುಮಕ್ಕಳ ಹೆರಿಗೆ ಆಸ್ಪತ್ರೆ ತೆರೆಯಲಾಗುವುದು ಎಂದು ಹೇಳಿ ತುಮಕೂರ ಸಿದ್ಧಗಂಗಾ ಶ್ರೀಗಳನ್ನು ಕರೆಯಿಸಿ ಜನರಿಗೆ ನಂಬಿಸಿ ನಾಟಕ ಮಾಡಿದರು. ಆದರೆ, ಸದ್ಯ ಅದೇ ಜಮೀನಿನಲ್ಲಿ ಬಹುದೊಡ್ಡ ವಿಲಾಸಿ ಐಶಾರಾಮಿ ಮನೆ ನಿರ್ಮಿಸಿಕೊಂಡಿದ್ದಾರೆ. ಆಸ್ಪತ್ರೆ ಏಕೆ ನಿರ್ಮಿಸಲಿಲ್ಲ? ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಿಸುವ ನೇಪದಲ್ಲಿ ಆಯಾ ಶಾಲಾ ಶಿಕ್ಷಕರಿಂದ ಖರ್ಚು ಮಾಡಿಸಿ ಶಾಲು ಸನ್ಮಾನ ಮಾಡಿಸಿಕೊಳ್ಳುವುದು ಪ್ರಚಾರ ಪಡೆದುಕೊಳ್ಳುವುದು ಖಯ್ಯಾಲಿ ಇವರದಾಗಿದೆ.

ಹಣ ಸುಲಿಗೆ ಮಾಡಿ ಕಿಟ್ ವಿತರಣೆ: ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳಿಂದ ಹಾಗೂ ವಿವಿಧ ಗುತ್ತಿಗೆದಾರರಿಂದ ಹಣವನ್ನು ಸುಲಿಗೆ ಮಾಡಿ ಕೊರೋನಾ ಸಂದರ್ಭದಲ್ಲಿ ಕಿಟ್ ವಿತರಣೆ ಮಾಡಿ ₹೨.೫- ₹೩ ಕೋಟಿ ಹಣವನ್ನು ಉಳಿತಾಯ ಮಾಡಿಕೊಂಡಿದ್ದಾರೆ ಎಂದು ನನಗೆ ಕೆಲ ಗುತ್ತಿಗೆದಾರರು ಸೂಕ್ಷ್ಮವಾಗಿ ತಿಳಿಸಿದರು. ನೋಟ್‌ಬುಕ್ ಮೇಲೆ ಆಹಾರ ಕಿಟ್‌ಗಳ ಮೇಲೆ ಕೇವಲ ತಮ್ಮ ಮಗನ ಹಾಗೂ ತಮ್ಮ ಕುಟುಂಬದ ಫೋಟೋಗಳನ್ನು ಬಳಸಿಕೊಂಡರೇ ವಿನಃ ಬಿಜೆಪಿ ಪಕ್ಷದ್ದಾಗಲಿ ಅಥವಾ ಮುಖಂಡರದ್ದಾಗಲಿ, ಯಾವ ಫೋಟೋಗಳನ್ನು ಬಳಸಿಕೊಳ್ಳಲಿಲ್ಲ. ಟೀಮ್ ಎಎಸ್‌ಪಿ ಎನ್ನುವ ಕಾರ್ಯಕರ್ತರಿಗೇ ಮಾತ್ರ ಗೌರವಿಸಿ, ಬಿಜೆಪಿ ಪಕ್ಷ ನಿಷ್ಠೆ ಹಾಗೂ ಸಿದ್ಧಾಂತ ಎನ್ನುವ ಕಾರ್ಯಕರ್ತರಿಗೆ ಸಂಪೂರ್ಣ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

೧೫ ವರ್ಷ ಶಾಸಕರಾಗಿದ್ದರೂ ಉದ್ಯೋಗ ಸೃಷ್ಟಿ ಏಕೆ ಮಾಡಲಿಲ್ಲ?: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲ ಮತಕ್ಷೇತ್ರಗಳಲ್ಲಿಯೂ ಗುಣಮಟ್ಟ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ವದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ. ಮಾತ್ರವಲ್ಲದೇ ಎಲ್ಲಡೆ ಸಿಸಿ ರಸ್ತೆಗಳನ್ನು ನಿರ್ಮಿಸಿದ ಕೀತಿ ಬಿಜೆಪಿ ಸರ್ಕಾರಕ್ಕೆ ಮತ್ತು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ. ಆದರೆ, ನಡಹಳ್ಳಿಯವರು ನಾನು ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೆ ನಾನು ಶಾಸಕನಾದರೇ ಮತಕ್ಷೇತ್ರದಲ್ಲಿ ₹೧೦ ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಜನರಲ್ಲಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ದೇವರಹಿಪ್ಪರಗಿಯಲ್ಲಿ ೨ ಬಾರಿ ಶಾಸಕರಾಗಿದ್ದರು. ಸದ್ಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೧ ಬಾರಿ ಅಂದರೆ ೧೫ ವರ್ಷ ಶಾಸಕರಾಗಿದ್ದರೂ ಏಕೆ ಇಷ್ಟು ದಿನ ಉದ್ಯೋಗ ಸೃಷ್ಟಿ ಮಾಡಲಿಲ್ಲ? ಜನರಿಗೆ ಹೀಗೆ ದಿನಕ್ಕೊಂದು ಸುಳ್ಳು ಭರವಸೆ ನೀಡುತ್ತಲೇ ದುರಾಲೋಚನೆಯಿಂದ ಕುತಂತ್ರದಿಂದ ಗೆದ್ದು ಬಂದಿದ್ದಾರೆ ವಿನಃ ನಿಜವಾಗಿಯೂ ಗೌರವದಿಂದ ಗೆದ್ದಿಲ್ಲ ಎಂದು ಕಿಡಿಕಾರಿದರು.

ಕಳೆದ ೫ ವರ್ಷಗಳಿಂದ ಶಾಸಕರ ಮನೆಯೇ ಬಿಜೆಪಿ ಪಕ್ಷದ ಕಚೇರಿ: ಚುನಾವಣೆಗಳು ಬಂದಾಗ ಮಾತ್ರ ನಡಹಳ್ಳಿಯವರು ಜನರಿಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಮರಳು ಮಾಡಿ ಶಾಸಕರಾಗಬೇಕು ಎನ್ನುವುದೊಂದೇ ಉದ್ದೇಶವಿದೆ ವಿನಃ ನಿಜವಾದ ಜನರ ಸೇವೆ ಮಾಡುವ ಯಾವುದೇ ಮನೋಭಾವವಾಗಲಿ ಅಥವಾ ಮನಸ್ಸು ಕೂಡ ಅವರದ್ದು ಇಲ್ಲ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಳೆದ ೫ ವರ್ಷಗಳಿಂದ ಶಾಸಕರ ಮನೆಯೇ ಬಿಜೆಪಿ ಪಕ್ಷದ ಕಚೇರಿಯಾಗಿತ್ತು. ಸದ್ಯ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿಯೇ ದಿಢೀರ್‌ನೇ ಹೊರಗಡೆ ಪಕ್ಷದ ಕಚೇರಿ ಸ್ಥಾಪಿಸಲಾಗಿದೆ. ಇದಕ್ಕಿಂತ ಗಿಮಿಕ್ ಬೇರೆ ಬೇಕಾ ಎಂದು ಪ್ರಶ್ನಿಸಿದರು.

ಮೂಲ ಬಿಜೆಪಿಗರಿಗೆ ಟಿಕೆಟ್ ನೀಡಿದರೇ ಗೆಲುವಿಗೆ ಶ್ರಮ: ಸದ್ಯ ಮತಕ್ಷೇತ್ರದಲ್ಲಿ ನಡೆದ ಬಹುತೇಕ ಎಲ್ಲ ಕಾಮಗಾರಿಗಳನ್ನು ಹೊರ ಜಿಲ್ಲೆ ಹಾಗೂ ಹೊರ ಮತಕ್ಷೇತ್ರದವರೇ ಕಾಮಗಾರಿ ನಡೆಸುವಂತೆ ಮಾಡಿದ್ದರಿಂದ ಮತಕ್ಷೇತ್ರದ ಬಹುತೇಕ ಎಲ್ಲ ಗುತ್ತಿಗೆದಾರರು ಯಾವುದೇ ಟೆಂಡರ್ ಇಲ್ಲದೇ, ಕೆಲಸವಿಲ್ಲದೇ ತೀವೃ ಸಂಕಷ್ಟದಲ್ಲಿದ್ದಾರೆ. ಹೀಗೇ ಹಲವಾರು ದುರಾಡಳಿತದಿಂದಾಗಿ ಮೂಲ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೇ ಇತರೇ ಸಾಮಾನ್ಯ ಜನರು ಕೂಡ ಬಿಜೆಪಿ ಪಕ್ಷದ ಬಗ್ಗೆ ಇರುವ ಗೌರವ ಮತ್ತು ಅಭಿಮಾನ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಎ.ಎಸ್.ಪಾಟೀಲ(ನಡಹಳ್ಳಿ)ಯವರಿಗೆ ಬಿಜೆಪಿ ಟಿಕೆಟ್ ನೀಡದೇ, ಮೂಲ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೇ ಬಿಜೆಪಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯತಿ ನಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಭಾಜಪ ಹಿರಿಯ ಮುಖಂಡರಾದ ಗೋಪಾಲ ಗದ್ದನಕೇರಿ, ತಾಳಿಕೋಟೆಯ ಮಂಜುನಾಥ ಶೆಟ್ಟಿ, ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ದೇವೇಂದ್ರ ವಾಲಿಕಾರ, ಢವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶಗೌಡ ಪಾಟೀಲ, ರಾಘವೇಂದ್ರ ಪತ್ತಾರ, ತಾಳಿಕೋಟೆ ಬಸನಗೌಡ ಪಾಟೀಲ, ಸುರೇಶ ಹಜೇರಿ, ರಾಮಣ್ಣ ಜಗತಾಪ, ರವಿ ಕಟ್ಟಿಮನಿ, ಬಸವರಾಜ ಮಾಲಿಪಾಟೀಲ, ಗಣ್ಯ ಉದ್ಯಮಿಗಳಾದ ಸುನೀಲ ಇಲ್ಲೂರ, ಶರಣು ಸಜ್ಜನ, ಬಾಪುಗೌಡ ಪಿರಾಪೂರ, ಶಿವು ದಡ್ಡಿ, ಮಹಾಂತೇಶ ಹಡಪದ ಸೇರಿದಂತೆ ಹಲವರು ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fourteen − 13 =