Breaking News

ರಾಣಿ ಚನ್ನಮ್ಮ ವಿವಿ 11 ನೇ ಘಟಿಕೋತ್ಸವ :‌ ದಿ.ಸುರೇಶ ಅಂಗಡಿ ಸೇರಿ ಇಬ್ಬರಿಗೆ ಗೌರವ ಡಾಕ್ಟರೇಟ್

Spread the love

ರಾಣಿ ಚನ್ನಮ್ಮ ವಿವಿ 11 ನೇ ಘಟಿಕೋತ್ಸವ :‌ ದಿ.ಸುರೇಶ ಅಂಗಡಿ ಸೇರಿ ಇಬ್ಬರಿಗೆ ಗೌರವ ಡಾಕ್ಟರೇಟ್

ಯುವ ಭಾರತ ಸುದ್ದಿ ಬೆಳಗಾವಿ :
ಕಲಿತ ವಿದ್ಯೆಯು ಬದುಕಿನಲ್ಲಿ ಶಾಶ್ವತವಾಗಿರುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಗತ್ಯ ಕೌಶಲವನ್ನು ಗಳಿಸಬೇಕು. ಯಾವುದೇ ಕ್ಷೇತ್ರವಿರಲಿ ಕೌಶಲದಿಂದ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಆದ್ದರಿಂದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕರೆ ನೀಡಿದರು.

ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ (ಮಾ.20) ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯೆಯು ನಮ್ಮ ಹಾಗೂ ಸಮಾಜದ ಏಳ್ಗೆಗೆ ಬಳಕೆಯಾಗಬೇಕು. ಸಹೋದರತೆ ಭಾವದೊಂದಿಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆಯಬೇಕು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವು ಪ್ರಪ್ರಥಮವಾಗಿ ಅನುಷ್ಠಾನಗೊಳಿಸಿದೆ. ದೇಶದ ಯುವಸಮುದಾಯದ ಅಭಿವೃದ್ಧಿಗೆ ಪೂರಕವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಸ್ವಾತಂತ್ರ್ಯದ ಶತಮಾನೋತ್ಸವ ‌ವೇಳೆಗೆ ಭಾರತವನ್ನು ಜಗತ್ತಿನ ಅತ್ಯಂತ ಬಲಿಷ್ಠ ದೇಶವಾಗಿ ಹೊರಹೊಮ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.

ಸರಕಾರದ ಯೋಜನೆಗಳ ಸಹಭಾಗಿತ್ವದಿಂದ ಮಾತ್ರ ಅಭಿವೃದ್ಧಿ ಸಾಧ್ಯ.‌ ಕಳೆದ 75 ವರ್ಷಗಳಲ್ಲಿ ಇದು ಸಾಬೀತಾಗಿದೆ. ಕೋವಿಡ್ ಸಮಸ್ಯೆಯನ್ನು ದೇಶವು ಪರಿಣಾಮಕಾರಿಯಾಗಿ ನಿಭಾಯಿಸಿದೆ. ಇಡೀ ಜಗತ್ತಿಗೆ ಕೋವಿಡ್ ಲಸಿಕೆಯನ್ನು ಒದಗಿಸಿದೆ.

ನವ ಪದವೀಧರರು ಮುಂಬರುವ ದಿನಗಳಲ್ಲಿ ಕ್ರೀಡೆ ಮತ್ತು ಕಲಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಇರಬೇಕು.
ಪರಿಸರ ಮಾಲಿನ್ಯ ಮತ್ತು ಅಸಮತೋಲನ ನಿರ್ವಹಣೆಗಾಗಿ ನಿರಂತರ ಪ್ರಯತ್ನ ಮಾಡಬೇಕು.

ರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಅತೀ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ವಿವಿ ತನ್ನ ಮೂಲ ಉದ್ಧೇಶದ ಈಡೇರಿಕೆ ನಿಟ್ಟಿನಲ್ಲಿ ಫಲಪ್ರದ ಹೆಜ್ಜೆಗಳನ್ನು ಇಡುತ್ತಿದೆ.
ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರನ್ನು ಅಭಿನಂದಿಸಿದ ಅವರು, ಮುಂಬರುವ ದಿನಗಳಲ್ಲಿ ತಮ್ಮ ಸೇವೆಯನ್ನು ಇದೇ ರೀತಿ ಮುಂದುವರಿಸಬೇಕು ಎಂದರು.
ಪದವೀಧರರನ್ನು ಕೂಡ ಅಭಿನಂದಿಸಿದ‌ ಅವರು, ಶಿಕ್ಷಣ ಮತ್ತು ನೈತಿಕಮೌಲ್ಯವು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲಿ ಎಂದು ಹಾರೈಸಿದರು.

ವಿವಿ ಧ್ಯೇಯವಾಕ್ಯ ಗಮನದಲ್ಲಿಟ್ಟುಕೊಂಡು ಜೀವನಪರ್ಯಂತ ವಿದ್ಯಾರ್ಥಿಯಾಗಿ ಜ್ಞಾನಾರ್ಜನೆ ಮಾಡುವುದರ ಜತೆಗೆ ಗಳಿಸಿದ ಜ್ಞಾನವನ್ನು ಧಾರೆಯರಿಯುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.

ಘಟಿಕೋತ್ಸವ ಭಾಷಣ ಮಾಡಿದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ ಅವರು, ಆಯಾ ಕಾಲಕ್ಕೆ ಎದುರಾಗುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ಬದುಕುವ ಕಲೆಯನ್ನು ಕಲಿಸುವುದೇ ಶಿಕ್ಷಣದ ಗುರಿಯಾಗಿದೆ” ಎಂದು ಹೇಳಿದರು.

ಯಶಸ್ಸಿಗೆ‌ ಯಾವುದೇ ಶಾರ್ಟ್ ಕಟ್ ದಾರಿಗಳಿಲ್ಲ; ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸುವುದು ಸಾಧ್ಯ. ಬರೀ ತಾವು ಕಲಿತ ವಿಷಯದ ಜ್ಞಾನವಿದ್ದರೆ ಸಾಲದು, ಸಂದರ್ಭಕ್ಕೆ ಅನುಗುಣವಾಗಿ ಅದನ್ನು ಬಳಕೆ ಮಾಡುವುದು ಗೊತ್ತಿರಬೇಕು. ಅಂದಾಗ ಮಾತ್ರ ಶಿಕ್ಷಣದ ಉದ್ಧೇಶ ಈಡೇರುತ್ತದೆ.
ಕ್ಷಣ ಕ್ಷಣಕ್ಕೂ ಬದಲಾಗುವ ಈ ಜಗದಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಗಳಿಸುವುದಕ್ಕೆ ಅಪರಿಮಿತ ಅವಕಾಶಗಳಿವೆ. ಆದ್ದರಿಂದ ಕಾಲಕ್ಕೆ ತಕ್ಕಂತೆ ನಾವು ಜ್ಞಾನಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಡಾ.ತಿಮ್ಮೇಗೌಡ ಅವರು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಇಂಧನ, ಪರಮಾಣು, ಕೈಗಾರಿಕೆ ಸೇರಿದಂತೆ ಸೀಮಿತ ಸಂಪನ್ಮೂಲ ಹೊಂದಿರುವ ಭಾರತ ದೇಶದಲ್ಲಿ ಮಾನವ ಸಂಪನ್ಮೂಲವೇ ದೊಡ್ಡ ಆಸ್ತಿಯಾಗಿದೆ. ಇಲ್ಲಿನ ಯುವ ಸಂಪನ್ಮೂಲವನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಳ್ಳಲು ಸೂಕ್ತ ತರಬೇತಿಯ ಅವಶ್ಯಕತೆಯಿದೆ ಎಂದು ಅವರು ಪ್ರತಿಪಾದಿಸಿದರು.

ಆಧುನಿಕ ವಿಜ್ಞಾನ-ತಂತ್ರಜ್ಞಾನದ ಪ್ರಗತಿಯು ನಾಗಾಲೋಟದಲ್ಲಿ ಮುಂದುವರಿದಿದೆ. ಅಕುಶಲ ಕಾರ್ಮಿಕರ ಬಹುಪಾಲು ಕೆಲಸವನ್ನು ಯಂತ್ರೋಪಕರಣಗಳು ಕಸಿದುಕೊಂಡಿವೆ.
ಪ್ರಸ್ತುತ ಸನ್ನಿವೇಶದಲ್ಲಿ ವೈಯಕ್ತಿಕ ಏಳ್ಗೆಯ ಜತೆಗೆ ದೇಶ ಮತ್ತು ಜಗತ್ತಿನ ಸರ್ವತೋಮುಖ ಪ್ರಗತಿಗೆ ಪೂರಕವಾದ ಶಿಕ್ಷಣವನ್ನು ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಡಾ.ತಿಮ್ಮೇಗೌಡ ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮಚಂದ್ರಗೌಡ ಅವರು, ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ ಎಂದು ವಿವರಿಸಿದರು.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅಕಾಡೆಮಿಕ್ ಸಾಧನೆ ಹಾಗೂ ಕ್ರೀಡಾಸಾಧನೆಯನ್ನು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ 27 ಪಿಎಚ್.ಡಿ; 2611 ಸ್ನಾತಕೋತ್ತರ ಮತ್ತು 44,498 ಸ್ನಾತಕ ಪದವಿಗಳನ್ನು ನೀಡಲಾಗುತ್ತಿದೆ‌ ಇದರೊಂದಿಗೆ 11 ಬಂಗಾರದ ಪದಕಗಳು ಮತ್ತು 149 ರ್ಯಾಂಕ್ ಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರೊ.ಮಲ್ಲೇಪುರಂ ವೆಂಕಟೇಶ್ ಹಾಗೂ ದಿ.ಸುರೇಶ್ ಅಂಗಡಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ:

ಸಮಾಜಸೇವೆಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರಿಗೆ (ಮರಣೋತ್ತರ)
“ಡಾಕ್ಟರ್ ಆಫ್ ಲೆಟರ್ಸ್” ಗೌರವ ಡಾಕ್ಟರೇಟ್ ಪದವಿ ಹಾಗೂ ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ “ಡಾಕ್ಟರ್ ಆಫ್ ಲೆಟರ್ಸ್” ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಸಂಸದರೂ ಆಗಿರುವ ಮಂಗಳ ಸುರೇಶ್ ಅಂಗಡಿ ಅವರು ದಿ.ಸುರೇಶ್ ಅಂಗಡಿ ಅವರಿಗೆ ವಿಶ್ವವಿದ್ಯಾಲಯ ವತಿಯಿಂದ ಘೋಷಿಸಲಾದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

11 ಸ್ವರ್ಣ ಪದಕ; 27 ಪಿಎಚ್.ಡಿ ಪ್ರದಾನ:

ಘಟಿಕೋತ್ಸವದಲ್ಲಿ ಒಟ್ಟು 47,185 ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ 11 ಸ್ವರ್ಣ ಪದಕಗಳು, 27 ಪಿಹೆಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಯಿತು.

ಸ್ನಾತಕೋತ್ತರ ವಿದ್ಯಾರ್ಥಿಗಳಾದ ಬಾಗಲಕೋಟೆ ಬಸವೇಶ್ವರ ಕಲಾ ಕಾಲೇಜಿನ ಕಲಾ ವಿಭಾಗದ ವಿಧ್ಯಾರ್ಥಿನಿ ಶಶಿಕಲಾ ಅವರಿಗೆ ನಿಗರಿ 3 ಚಿನ್ನದ ಪದಕ, ಪದವಿ ಪ್ರದಾನ ಮಾಡಲಾಯಿತು.

ಅದೇ ರೀತಿಯಲ್ಲಿ ಬೆಳಗಾವಿಯ ಕೆ.ಎಲ್.ಎಸ್ ಗೋಗಟೆ ಕಾಲೇಜಿನ ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ಶ್ವೇತಾ ಪಾಟೀಲ್, ತೊರವಿ ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ಸಮಾಜ ಕಾರ್ಯ ವಿಭಾಗದ ಶುಭಾ ಹತ್ತಳ್ಳಿ, ಜಮಖಂಡಿ ತುಂಗಲ್ ಬೇಸಿಕ್&ಅಪ್ಲಿಕೇಶನ್ ಕಾಲೇಜಿನ ಬಿ,ಎಸ್.ಸಿ ವಿಭಾಗದ ಶ್ರೀದೇವಿ ಅರಕೇರಿ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಲಕ್ಷ್ಮಿ ಮಗದುಮ, ಬಾಗಲಕೋಟೆ ಬಿ.ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ ಕಾಲೇಜಿನ ಎಂಬಿಎ ವಿಭಾಗದ ಗುರಮ್ಮಾ ಬಳೆಗಾರ, ಜಮಖಂಡಿ ಬ್ಲೆಡ್ಸ ವಾಣಿಜ್ಯ, ಕಲಾ ಆ್ಯಂಡ್ ಸೈನ್ಸ್ ಕಾಲೇಜಿನ ಪ್ರಿಯಾಂಕ ಮಗದುಮ, ರಾಮದುರ್ಗದ ಸಿ.ಎಸ್.ಬಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಸ್ಕಾನ್ ಮುಲ್ಲಾ, ಹಾರೂಗೇರಿ ಎಸ್.ಪಿ.ಎಂ ಕಾಲೇಜಿನ ಕಲಾ ವಿಭಾಗದ ಸವಿತಾ ಕೊಳ್ಳೆನ್ನವರ, ಶ್ರೀ ಸಿದ್ದೇಶ್ವರ ಕಲಾ, ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಕ್ರಾಂತಿ ಪೂಜೇರಿ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಮಾಸ್ಟರ್ ಆಫ್ ಕಾಮರ್ಸ್ ವಿಭಾಗದ ಪೂಜಾ ಪರಸನ್ನವರ ವಿದ್ಯಾರ್ಥಿನಿಗೆ, ಪದವಿ ಪ್ರಧಾನ, ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವೆ ರಾಜಶ್ರೀ ಜೈನಾಪುರ, ಕುಲಸಚಿವರು(ಮೌಲ್ಯಮಾಪನ) ಪ್ರೊ.ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ. ಎಸ್.ಬಿ.ಆಕಾಶ, ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಡೀನ್, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಪಾಲಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 − four =