Breaking News

ಶ್ರೀರಾಮನೆಂಬ ಆದರ್ಶ ಪುರುಷ

Spread the love

ಶ್ರೀರಾಮನೆಂಬ ಆದರ್ಶ ಪುರುಷ

ಮಾನವೀಯ ಮೌಲ್ಯಗಳೇ ವಿರಳವಾದ ಪ್ರಸ್ತುತ ಸಾಮಾಜಿಕ ಜೀವನದಲ್ಲಿ ನಮ್ಮ ಮನಸ್ಸುಗಳಲ್ಲಿ ರಾಮನನ್ನು ಪ್ರತಿಷ್ಠಿತಗೊಳಿಸಿಕೊಳ್ಳಲು ಸಾಧ್ಯವಾದರೆ, ರಾಮರಾಜ್ಯವೆಂಬ ರಮ್ಯ ಲೋಕವನ್ನು ದಕ್ಕಿಸಿಕೊಳ್ಳಬಹುದೇನೋ….

ಎಂತಹ ಆದರ್ಶ ವ್ಯಕ್ತಿತ್ವ ,ಅದ್ವಿತೀಯ ಪುತ್ರ , ಅನುರೂಪ ಪತಿ , ಆದರ್ಶ ಸಹೋದರ, ಕರುಣಾಳು ಸ್ವಾಮಿ. ಒಬ್ಬ ಸಾಮಾನ್ಯ ಮನುಷ್ಯ ಶ್ರೀ ರಾಮನ ಕೇವಲ ಒಂದು ಗುಣವನ್ನು ಜೀವನದಲ್ಲಿ ಚಾಚೂ ತಪ್ಪದೇ ಪಾಲಿಸುವುದು ಕಷ್ಟ ಸಾಧ್ಯ; ಅಂತಹ ಗುಣಗಳ ಗಣಿ ಮೇರು ವ್ಯಕ್ತಿತ್ವದ ಶ್ರೀರಾಮನನ್ನು ಆರಾಧಿಸಿ, ಪರಿಪಾಲಿಸುವುದು ಒಂದು ತಪಸ್ಸೇ ಸರಿ. ಅಂತಹ ಜೀವನ ಧನ್ಯ.

ಪಿತೃ ವಾಕ್ಯ ಪರಿಪಾಲನೆಗಾಗಿ ಸರ್ವ ಸಂಪತ್ತು, ಸುಖ-ಭೋಗಗಳನ್ನು ತ್ಯಾಗ ಮಾಡಿ ನಾರು ಮುಡಿಯುಟ್ಟು ಕಾಡಿಗೆ ಹೊರಡಲು ಅನುವಾಗಿ ಕ್ಷಣಮಾತ್ರ ವಿಚಲಿತನಾಗದ ರಾಮ, ತಮ್ಮ ಸುಖ ಭೋಗಗಳಿಗೆ ಅಡೆತಡೆಯಾದರೆಂದು ಮಾತಾಪಿತರನ್ನು ವೃದ್ಧಾಶ್ರಮಗಳ ಹಾದಿ ತೋರಿಸುವ ಇಂದಿನ ಸುಶಿಕ್ಷಿತ ಸುಪುತ್ರರಿಗೆ ಆದರ್ಶವಾಗಿ ಕಾಣಬಹುದೇ ಹಾಗಾದಲ್ಲಿ ಇಂದಿನ ಮಾತಾಪಿತರು ಜೀವನದ ಇಳಿಸಂಜೆಯಲ್ಲಿ ನೆಮ್ಮದಿಯನ್ನು ಕಾಣಬಹುದು.

ಸಹೋದರ ವಾತ್ಸಲ್ಯ ದ ಬಗ್ಗೆ ಚಿಂತನೆ ಮಾಡಲು ಇಡೀ ಜಗತ್ತಿನಲ್ಲಿ ರಾಮ – ಲಕ್ಷ್ಮಣ – ಭರತ- ಶತ್ರುಘ್ನರಂಥ ಉದಾಹರಣೆ ಕಣ್ಣಿಗೆ ಬೀಳಬಹುದೇ? ಆಸ್ತಿ ಅಂತಸ್ತಿಗಾಗಿ ಒಬ್ಬರನ್ನೊಬ್ಬರು ಕೊಲೆ ಮಾಡಿ ಜೈಲು ಪಾಲಾದ ನೂರಾರು ಉದಾಹರಣೆಗಳು ಎಲ್ಲಾ ಕಡೆಯೂ ಕಾಣ ಸಿಗುತ್ತವೆ. ಅಂತೆಯೇ ಪತಿಯನ್ನು ಅವನ ಮನೆಯ ಇತರ ಸದಸ್ಯರನ್ನೂ ಕಾನೂನಿನ ಹಾಗೂ ತನ್ನ ಸ್ವಾರ್ಥದ ಕೈಗೊಂಬೆಯಾಗಿ ಕುಣಿಸುವ ಯಾವ ಹೇಯ ಕೃತ್ಯಕ್ಕೂ ಹೇಸದ ಕೆಲವು ರಾಕ್ಷಸಿ ಪ್ರವೃತ್ತಿಯ ನವಯುಗದ ಮಹಿಳಾ ಮಣಿಗಳಿಗೆ ರಾಮ – ಸೀತೆಯ ದಾಂಪತ್ಯದ ಅರ್ಥ ರುಚಿಸಬಹುದೇ ? ತ್ಯಾಗದಲ್ಲಿಯೇ ಪ್ರೇಮದ ಪರಾಕಾಷ್ಠೆಯನ್ನು ಕಂಡ , ಪಾವಿತ್ರ್ಯತೆಯಲ್ಲಿ ಜೀವನದ ಅರ್ಥವನ್ನು ಅರಸಿದ ಸಾಧ್ವಿ ಮಹಾರಾಣಿಯಾದರೂ ಕಷ್ಟಕೊಟಲೆಗಳನ್ನು ಅನುಭವಿಸಿ, ಪತಿಯ ನೆರಳಾಗಿ ವನವಾಸಕ್ಕೆ ತೆರಳಿ ಅಲ್ಲಿಯೂ ಅವನಿಂದ ದೂರಾಗಿ, ಅಪಹರಣಕ್ಕೊಳಗಾಗಿ, ಆತಂಕದಲ್ಲಿಯೇ ಹಲವಾರು ವರ್ಷಗಳನ್ನು ಕಳೆದು, ರಾವಣನ ಮೋಕ್ಷಕ್ಕೆ ಕಾರಣಳಾದ ಸೀತೆಯನ್ನು ನೆನೆದಾಗ , ರಾವಣ ತನ್ನ ಕಾಮದಾಹಕ್ಕೆ ಸರ್ವನಾಶ ಹೊಂದಿದ್ದಾದರೆ ಸೀತೆಯಂತಹ ಮುಗ್ಧ ಸ್ತ್ರೀ ರತ್ನಗಳಿಗೆ ಯಾವ ತಪ್ಪಿಗಾಗಿ, ಅಪಹರಣ, ಅಪನಿಂದೆ ಅಮಾನುಷ ಕಷ್ಟ ಕೋಟಲೆಗಳು?

ರಾಮನ ಆದರ್ಶ ಗುಣಗಳು ವಿಚಾರ ಮಾಡಿದಷ್ಟು ಉದಾತ್ತ ವಾಗುವ ಅಷ್ಟೇ ಆಳಕ್ಕಿಳಿದು ಮನಸ್ಸಿಗೆ ನಾಟುವ ರೀತಿಯಲ್ಲಿ ಇರುವುದರಿಂದಲೇ ಅವನು ಮರ್ಯಾದೆ ಪುರುಷೋತ್ತಮನೆನಿಸಿದ್ದು. ದಯೆ, ಕರುಣೆ, ನಿರ್ಲಿಪ್ತಭಾವ, ನಿಷ್ಕಾಮ ಪ್ರೇಮ, ನರ – ವಾನರ – ರಾಕ್ಷಸರಾದಿಯಾಗಿ ಎಲ್ಲರೊಡನೆಯೂ ಅವನು ನಡೆದುಕೊಂಡ ರೀತಿ, ಉಳಿಸಿದ ಹೆಜ್ಜೆ ಗುರುತುಗಳು‌ ಕಲ್ಲದ ಅಹಲ್ಯೆಯನ್ನು ಉದ್ಧರಿಸಿದ ರೀತಿ, ಇಂದಿನ ಪುರುಷರ – ಪುರುಷಾಹಂಭಾವಕ್ಕೆ ಅಕ್ಷರಶಃ ಪಾಠವೇ ಸರಿ, ಅಂದರೆ, ಅಬಲೆಯಾದ ಅಹಲ್ಯೆಯನ್ನು ಕೇವಲ ಸ್ಪರ್ಶ ಮಾತ್ರದಿಂದ ಅವಳ ಪಾಪ ಕಳೆದು ಅವಳ ಜೀವನ ಪಾವನಗೊಳಿಸಿ ಮುಂದೆ ಸಾಗುವ ಮನಸ್ಥಿತಿಯನ್ನು ಪುರುಷ ಸಮೂಹ ಬೆಳೆಸಿಕೊಂಡರೆ , ಅಹಲ್ಯೆಯಂಥ ಎಷ್ಟೋ ಮಹಿಳೆಯರು ಯಾವುದೇ ಹಿಂಜರಿಕೆಗಳಿಲ್ಲದೇ, ಪುರುಷರ ಸಹಾಯ ಪಡೆದು, ಬದುಕು ಹಸನಾಗಿಸಿಕೊಳ್ಳಬಲ್ಲರು.

ಶಬರಿಯ ಕಾಯುವಿಕೆಗೆ, ತನ್ಮೂಲಕ ಅವಳ ಭಕ್ತಿಯ ಉತ್ಕಟ ಭಾವದ ಪರಾಕಾಷ್ಠೆಗೆ ಅರ್ಥ ಕಲ್ಪಿಸಿ ಅವಳನ್ನು ಅಜರಾಮರಳನ್ನಾಗಿ ಮಾಡಿದ ಮಹನೀಯನು ಅವಳಿಗೆ ಜೀವನದಲ್ಲಿ ದಯಪಾಲಿಸಿದ್ದು ಒಂದೇ ಸಲ ದರ್ಶನ ಭಾಗ್ಯ.

ಶ್ರೀ ಮನ್ನಾರಾಯಣನ ಅವತಾರದ ಶ್ರೀ ರಾಮನಿಗೆ, ರಾವಣನ ಇರುವು – ಸೀತೆಯ ಸುಳಿವು ತಿಳಿಯದ ವಿಷಯವಲ್ಲ, ಮಾನವ ರೂಪದಲ್ಲಿ ಅವತಾರವೆತ್ತಿದ ಕಾರಣವೇ ಮಾನವ ಪ್ರಯತ್ನದ ವಿಶೇಷತೆಯನ್ನು ಜಗತ್ತಿಗೆ ಪ್ರಚುರಪಡಿಸುವುದಕ್ಕೆ ಇರಬೇಕೆಂದು ತೋರುತ್ತದೆ.

ಪುಟ್ಟ ಅಳಿಲಿನ ಸೇವೆಯನ್ನು ಗಮನಿಸಿ, ಗುರುತಿಸಿ ಅದರ ಜೀವನಕ್ಕೆ ದೈವಿಕ ಸ್ಪರ್ಶ ನೀಡಿದ ಮಹಾನುಭಾವ ಶ್ರೀರಾಮ ರಾಮಾಯಣ ಮಹಾಕಾವ್ಯವನ್ನು ಹಲವು ಜನ ಶ್ರೇಷ್ಠರು ಹಲವು ಕಾಲಗಳಲ್ಲಿ ಸಾಕಷ್ಟು ರೀತಿಯ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಭಾರತೀಯರಾದ ನಮ್ಮೆಲ್ಲರಿಗೂ ನಮ್ಮ ನೆಲದ ಮಹಾ ಕಾರ್ಯಗಳೆಲ್ಲೊಂದಾದ ರಾಮಾಯಣ ಪ್ರತಿಯೊಬ್ಬರಿಗೂ ಚಿರಪರಿಚಿತ, ರಾಮ, ರಾವಣ, ಸೀತೆ, ಲಕ್ಷ್ಮಣ, ಹನುಮಂತ, ಜಾಂಬವಂತ, ಮಾರೀಚ, ಸುಬಾಹು, ವಿಭೀಷಣ, ಮಂಡೋದರಿಯ ಪಾತ್ರಗಳ ಸುತ್ತ ಹೆಣೆದ ಕಥೆಯನ್ನು ಕಥೆಯ ಕಾವ್ಯದ ರೀತಿಯಲ್ಲಿ ಹೊರಗಿಟ್ಟು ನೋಡಿ, ಹೇಳಿ ಆನಂದಿಸಿ ಮರೆಯುವುದಕ್ಕಿಂತಲೂ ಶ್ರೀ ರಾಮನ ಸೀತೆಯರ ಹಾಗೂ ಉಳಿದೆಲ್ಲ ಪಾತ್ರಗಳ ಗುಣ ಉದ್ದೇಶ ಪರಿಣಾಮಗಳ ಚಿಂತನೆಯ ಮೂಲಕ ನಮ್ಮ ದೈನಂದಿನ ಜೀವನದಲ್ಲಿ, ವಿಚಾರಧಾರೆಗಳಲ್ಲಿ, ಬದುಕಿನ ಧಾಪುಗಳಲ್ಲಿ ಹಿಡಿದಿಟ್ಟುಕೊಂಡರೆ ಶ್ರೀರಾಮನಂತಹ ಮಹಾಪುರುಷ ಅವತರಿಸಿದ ನಾಡಿನಲ್ಲಿ ಹುಟ್ಟಿದ ನಮ್ಮೆಲ್ಲರ ಜೀವನಕ್ಕೂ ಒಂದು ಅರ್ಥ ಬರಬಹುದು… ಏನಂತೀರಿ…. ಎಲ್ಲರಿಗೂ ಶ್ರೀ ರಾಮನವಮಿ ಶುಭಾಶಯಗಳು.

# ಡಾ. ಶ್ರೀದೇವಿ ಆನಂದ ಪೂಜಾರಿ


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × two =