ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಸುಳ್ಳು ಸುದ್ದಿ !

ಯುವ ಭಾರತ ಸುದ್ದಿ ಬೆಂಗಳೂರು:
ಬಿಜೆಪಿ ಇದುವರೆಗೆ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿಲ್ಲ. ಆದರೆ ಇದೀಗ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ದೊಡ್ಡದೊಂದು ಪಟ್ಟಿ ಹರಿದಾಡುತ್ತಿದ್ದು ಸ್ವತಹ ಬಿಜೆಪಿ ನಾಯಕರೇ ಅಚ್ಚರಿ ಪಡುವಂತಾಗಿದೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದು ಸುಳ್ಳು ಅಭ್ಯರ್ಥಿಗಳ ಪಟ್ಟಿ: ಕಟೀಲ್ ಸ್ಪಷ್ಟನೆ
‘ನಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಿ, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಈ ಸಮಯದಲ್ಲಿ ಸುಳ್ಳು ಅಭ್ಯರ್ಥಿಗಳ ಪಟ್ಟಿ ಹರಿಬಿಟ್ಟು ಕುತ್ಸಿತ ಮನಸ್ಥಿತಿಗಳು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯಿಂದ ಇನ್ನೊಂದು ಫೇಕ್ ಸುದ್ದಿ ಹೊರಬಿದ್ದಿದೆ. ಆಂತರಿಕ ಪ್ರಜಾಪ್ರಭುತ್ವ ಜೀವಂತವಾಗಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಬಿಜೆಪಿ ನಾಯಕತ್ವ ನಡೆಸುತ್ತಿದೆ. ಪ್ರಜಾತಂತ್ರವೆಂದರೆ ಏನೆಂದು ತಿಳಿಯದ ಗುಲಾಮಿ ಮನಸ್ಥಿತಿಯ ಕಾಂಗ್ರೆಸ್ ಸುಳ್ಳು ಸುದ್ದಿಯನ್ನು ಹರಡುವುದೇ ರಾಜಕೀಯ ಎಂದುಕೊಂಡಿದೆ’ ಎಂದು ಸಿ.ಟಿ ರವಿ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
YuvaBharataha Latest Kannada News