ಕ್ಯಾನ್ಸರ್ ಪತ್ತೆ ಮಾಡಲು ವಿಳಂಬವಾಗುತ್ತಿರುವ ಕಾರಣ ಸಾವು ಅಧಿಕ
ಯುವ ಭಾರತ ಸುದ್ದಿ ಬೆಳಗಾವಿ :
ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ ಹೆರಿಗೆ ಸಂದರ್ಭದಲ್ಲಿ ಮರಣ ಆಗುತ್ತಿದ್ದು, ಅದನ್ನು ತಡೆಗಟ್ಟಲು ಈಗಿರುವ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಲ್ಲಿಯೂ ಸರ್ವೈಕಲ್ ಕ್ಯಾನ್ಸರ್ ನಿಂದ ಭಾರತದಲ್ಲಿ ಅತೀ ಹೆಚ್ಚು ಮಹಿಳೆಯರ ಸಾವು ಅತ್ಯಂತ ಕಳವಳಕಾರಿ ಎಂದು ಅಹ್ಮದಾಬಾದ್ ನ ಹಿರಿಯ ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞವೈದ್ಯ ಡಾ. ಅಲ್ಫೇಶ ಗಾಂಧಿ ಕಳವಳ ವ್ಯಕ್ತಪಡಿಸಿದರು.
ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ವೈಜ್ಞಾನಿಕ ಸಂಸ್ಥೆಯ ೪೧ ನೇ ಮುಂದುವರೆದ ವೈದ್ಯಕೀಯ ಶಿಕ್ಷಣ (ಸಿಎಂಇ) ದಿ. ೮ ಏಪ್ರೀಲ್ ೨೦೨೩ರಂದು ಏರ್ಪಡಿಸಲಾದ” ಮಹಿಳೆಯರ ಆರೋಗ್ಯ: ಹೊಸ ದೃಷ್ಟಿಕೋನ” ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಹಾಗೂ ಸರ್ವೈಕಲ್ ಕ್ಯಾನ್ಸರ್ ಸಾಮಾನ್ಯವಾಗಿ ಕಂಡು ಬರುತ್ತಿವೆ. ಅದರಲ್ಲಿಯೂ ಮಹಿಳೆಯರು ಚಿಕಿತ್ಸೆ ಪಡೆಯುವಲ್ಲಿ ವಿಳಂಬ ಮಾಡುತ್ತಿರುವುದು ಸಾವು ಹೆಚ್ಚದಾಗಲು ಕಾರಣ. ಸ್ತನ ಕ್ಯಾನ್ಸರನ್ನು ಗುಣಪಡಿಸಬಹುದು. ಅದು ಬಹುಬೇಗ ಕಂಡು ಬರುತ್ತದೆ. ಆದರೆ ಮಹಿಳೆಯರಲ್ಲಿ ಸರ್ವೈಕಲ್ ಕ್ಯಾನ್ಸರ್ ಪತ್ತೆ ಮಾಡಲು ವಿಳಂಬವಾಗುತ್ತಿರುವ ಕಾರಣ ಸಾವು ಅಧಿಕಗೊಳ್ಳುತ್ತಿವೆ. ಸರಿಯಾದ ಚಿಕಿತ್ಸೆ ನೀಡಿ ಸಾವು ಕಡಿಮೆ ಮಾಡಲು ಕಾರ‍್ಯ ಚಟುವಟಿಕೆ ತೀವ್ರಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಸ್ತ್ರಿಯರು ತಮ್ಮ ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ನಮ್ಮ ಜನಸಂಖ್ಯೆಯ ಅರ್ಧದಷ್ಟು ಸ್ತ್ರೀ ಇದ್ದರೂ ಕೂಡ, ಲಿಂಗ ಅಸಮಾನತೆಗಳಿಂದಾಗಿ ನಿರ್ಲಕ್ಷಿಸಲ್ಪಟ್ಟು ಸಮಯಕ್ಕೆ ಸರಿಯಾಗಿ ಸಲಹೆ, ಚಿಕಿತ್ಸೆ ಪಡೆಯುವುದಿಲ್ಲ. ಆದ್ದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಹದಿಹರೆಯದವರು, ಲೈಂಗಿಕ ಸಮಸ್ಯೆಗಳು, ಬಂಜೆತನ, ದೀರ್ಘಕಾಲದ/ಅನಿಯಮಿತ ಮುಟ್ಟಿನ ಚಕ್ರಗಳು, ಅಧಿಕ ರಕ್ತಸ್ರಾವ, ಪಾಲಿಸಿಸ್ಟಿಕ್ ಓವೇರಿಯನ್ ಸಿಸ್ಟ್ ಸಿಂಡ್ರೋಮ್‌ನಿಂದ ಬಳಲುತ್ತಿರುವವರಿಗೆ ಸರಿಯಾದ ಚಿಕಿತ್ಸೆಯೊಂದಿಗೆ ಆಪ್ತಸಮಾಲೋಚನೆ ನಡೆಸಬೇಕು ಎಂದು ಕರೆ ನೀಡಿದರು.
ಕೆಎಲ್‌ಇ ಅಕಾಡೆಮಿಕ್ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸರ್ಚ್ (ಕಾಹೆರ)ನ ಉಪಕುಲಪತಿ ಡಾ. ನಿತಿನ ಗಂಗಾನೆ ಮಾತನಾಡಿ, ಬೆಳಗಾವಿ ಸುತ್ತಮುತ್ತಲಿನ ಪ್ರದೇಶದ ಗರ್ಭಿಣಿ ಮಹಿಳೆಯರ ಆರೋಗ್ಯ ರಕ್ಷಣೆ ಕಾರ‍್ಯಕ್ಕೆ ಸದಾ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮುಂದಿದ್ದು, ಎಲ್ಲ ರೀತಿಯ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಸಾಮಾನ್ಯವಾಗಿ ಮಹಿಳೆಯರು ಚಿಕಿತ್ಸೆಗೆ ಹಿಂಜರಿಯುತ್ತಾರೆ. ಆರೋಗ್ಯ ಸಮಸ್ಯೆಯನ್ನು ಹೇಳಿಕೊಳ್ಳಲಾಗದೇ ತಡವಾಗಿ ಆಸ್ಪತ್ರೆಗೆ ಬರುತ್ತಾರೆ. ಇದರಿಂದ ರೋಗಪತ್ತೆ ವಿಳಂಬವಾಗುತ್ತದೆ. ಅದರಲ್ಲಿಯೂ ಕ್ಯಾನ್ಸರ್ ಇದ್ದರೆ ತೊಂದರೆ. ಆದ್ದರಿಂದ ಮಹಿಳೆಯರು ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಬೇಕು. ಕ್ಯಾನ್ಸರ್ ಗುಣಮುಖಪಡಿಸುವ ರೋಗ. ಮಹಿಳೆಯರ ಮೇಲೆ ಸಾಮಾಜಿಕ ಜವಾಬ್ದಾರಿ ಅತ್ಯಧಿಕವಾಗಿದ್ದು, ಮಹಿಳೆಯರು ಆರೋಗ್ಯವಾಗಿದ್ದರೆ ಸಮಾಜವೂ ಆರೋಗ್ಯಯುತವಾಗಿರುತ್ತದೆ ಎಂದು ತಿಳಿಸಿದರು.
ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ ಮಾತನಾಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ, ಡಾ. ವಿ ಎಂ ಪಟ್ಟಣಶೆಟ್ಟಿ, ಸ್ತ್ರಿ ರೋಗ ಮತ್ತು ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ಅನಿತಾ ದಲಾಲ, ಡಾ. ಎಂ ವಿ ಜಾಲಿ, ಡಾ. ಶಾಂತಲಾ ಹೆರಲೇಕರ ಉಪಸ್ಥಿತರಿದ್ದರು. ಡಾ. ಸ್ವಪ್ನೀಲ್ ಪಟ್ಟಣಶೆಟ್ಟಿ ವಂದಿಸಿದರು.