ಶ್ರೀರಾಮಸೇನೆಯ ರಮಾಕಾಂತ ಕೊಂಡುಸ್ಕರ ಈಗ ಎಂಇಎಸ್ ಅಭ್ಯರ್ಥಿ !
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಂಇಎಸ್ ಅಭ್ಯರ್ಥಿಯಾಗಿ ರಮಾಕಾಂತ ಕೊಂಡುಸ್ಕರ ಆಯ್ಕೆಯಾಗಿದ್ದಾರೆ.
ಶನಿವಾರ ನಗರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಮಾಕಾಂತ ಕೊಂಡುಸ್ಕರ ಅವರನ್ನು ಎಂಇಎಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ರಮಾಕಾಂತ ಕೊಂಡುಸ್ಕರ ಈ ಮೊದಲು ಪ್ರಮೋದ ಮುತಾಲಿಕ ಅವರ ಶ್ರೀರಾಮಸೇನೆಯಲ್ಲಿ ಗುರುತಿಸಿಕೊಂಡಿದ್ದರು. ನಂತರ ಅದರಿಂದ ಹೊರಬಂದು ಶ್ರೀರಾಮ ಸೇನೆ ಹಿಂದುಸ್ತಾನ ಹೆಸರಿನಲ್ಲಿ ತಮ್ಮದೇ ಆದ ಸಂಘಟನೆ ಅಸ್ತಿತ್ವಕ್ಕೆ ತಂದಿದ್ದರು. ಕನ್ನಡ ಹಾಗೂ ಮರಾಠಿ ಭಾಷಿಕರು ಈ ಸಂಘಟನೆಯಲ್ಲಿ ಇದ್ದರು. ಆದರೆ, ರಮಾಕಾಂತ ಕೊಂಡುಸ್ಕರ ಕೆಲ ತಿಂಗಳುಗಳ ಹಿಂದೆ ಎಂಇಎಸ್ ನಿಯೋಗದೊಂದಿಗೆ ಮುಂಬೈಗೆ ತೆರಳಿ ಶಿವಸೇನಾ ಬಾಳ ಸಾಹೇಬ್ ಠಾಕ್ರೆ ಬಣದ ಅಧ್ಯಕ್ಷ ಉದ್ದವ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಇದೀಗ ಅವರು ಕಟ್ಟಾ ಎಂಇಎಸ್ ಜೊತೆ ಸೇರಿಕೊಂಡಿರುವುದರಿಂದ ಈ ಹಿಂದೆ ಅವರೊಂದಿಗಿದ್ದ ಕನ್ನಡ ಭಾಷಿಕರು ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಭಯ ಪಾಟೀಲ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾವತಿ ಚಾವಡಿ ಕಣಕ್ಕಿಳಿದಿದ್ದಾರೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಸಂಭಾಜಿ ಪಾಟೀಲ ಎಂಇಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ, 2018 ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ತೀವ್ರವಾಗಿ ಪರಾಭವಗೊಂಡಿದ್ದರು.