ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್
ಯುವ ಭಾರತ ಸುದ್ದಿ ಹುಬ್ಬಳ್ಳಿ:
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಶನಿವಾರ(ಏಪ್ರಿಲ್ 15) ರಾತ್ರಿ ಜಗದೀಶ ಶೆಟ್ಟರ್ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಅದು ವಿಫಲವಾಗಿದ್ದು, ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದು, ಭಾನುವಾರ ಬೆಳಿಗ್ಗೆ ಶಿರಸಿಗೆ ತೆರಳಿ ಸ್ಪೀಕರ್ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸುತ್ತೇನೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಶನಿವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾದ ಬಳಿಕ ಮಾತನಾಡಿದ ಜಗದೀಶ ಶೆಟ್ಟರ್ ಅವರು, ನನ್ನನ್ನು ಬಿಜೆಪಿ ನಾಯಕರು ನಡೆಸಿಕೊಂಡಿರುವ ರೀತಿ ನನಗೆ ನೋವು ತಂದಿದೆ. ಓರ್ವ ಹಿರಿಯ ನಾಯಕನಿಗೆ ಹೀಗೆ ಮಾಡಿದರೆ ಏನು ಹೇಳಬೇಕು ಎಂಬುದು ನನಗೆ ತಿಳಿಯುತ್ತಿಲ್ಲ. ನಾನು ಯಾವುದೇ ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನ, ಉನ್ನತ ಸ್ಥಾನವನ್ನು ಕೇಳುವುದಿಲ್ಲ. ನನಗೆ ಕ್ಷೇತ್ರದ ಜನರ ಸೇವೆ ಮಾಡಲು ಕೇವಲ ಶಾಸಕನಾಗಿ ಇರುತ್ತೇನೆ ಎಂದು ಮನವಿ ಮಾಡಿದರೂ ಅವರು ಒಪ್ಪಿಗೆ ಸೂಚಿಸಿಲ್ಲ. ಇದು ನನ್ನ 40 ವರ್ಷಗಳ ರಾಜಕೀಯ ದಿನದಲ್ಲಿ ಕರಾಳ ದಿನವಾಗಿದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಈ ಬಗ್ಗೆ ರಾಜೀನಾಮೆ ಸಲ್ಲಿಸಿದ ನಂತರ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಿರಿಯರಾದ ಯಡಿಯೂರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಆಗಿದ್ದಾರೆ. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿಯಲ್ಲಿ ನಂತರದ ಹಿರಿಯ ನಾಯಕ ನಾನು. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಶೆಟ್ಟರಗೆ ಇಲ್ಲ ಎಂದು ಹೇಳುತ್ತಾರೆ. ಇದರ ಅರ್ಥ ಏನು ಎಂಬುದು ಅರ್ಥವಾಗಿಲ್ಲ. ಇದರ ಹಿಂದೆ ಯಾರ ಮಾಡಿದಾರೆ ಎಂಬುದನ್ನು ಈಗ ನಾನು ಹೇಳುವುದಿಲ್ಲ ಎಂದು ಹೇಳಿದರು. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ನಾನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ತಿಳಿಸಿದರು.