ಭಾರೀ ವೈರಲ್ ಆಯ್ತು ಕಿಚ್ಚ-ನಡ್ಡಾ ಫೋಟೋ !

ಯುವ ಭಾರತ ಸುದ್ದಿ ಬೆಂಗಳೂರು :
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ದಾ ಹಾಗೂ ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರ ಸೆಲ್ಫಿ ಫೋಟೋ ಭಾರೀ ವೈರಲ್ ಆಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮತಕ್ಷೇತ್ರವಾಗಿರುವ ಶಿಗ್ಗಾವಿಯಲ್ಲಿ ಭಾಗವಹಿಸುವ ಕಾರ್ಯಕ್ರಮಕ್ಕೆ ಇಬ್ಬರು ಜೊತೆಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ತೆಗೆದ ಹೆಲಿಕಾಪ್ಟರ್ ಸೆಲ್ಫಿ ಫೋಟೋ ವೈರಲ್ ಆಗಿದೆ.
ನಮಸ್ಕಾರ ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೇ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ ಎಂದು ಟ್ವಿಟ್ ಮಾಡಿರುವ ಸುದೀಪ್ ಟ್ವೀಟ್ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗಿನ ಸೆಲ್ಫಿ ಹಂಚಿಕೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಸಿಎಂ ಬೊಮ್ಮಾಯಿ, ಜೆ.ಪಿ. ನಡ್ಡಾ ಹಾಗೂ ಸುದೀಪ್ ಶಿಗ್ಗಾವಿಯಲ್ಲಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.
ಸುದೀಪ್ ಮಾತನಾಡಿ, ಶಿಗ್ಗಾವಿಯಲ್ಲಿ ಪ್ರಚಾರ ಆರಂಭಿಸಿದ್ದಕ್ಕೆ ಬಹಳ ಖುಷಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸಿಎಂ ಬೊಮ್ಮಾಯಿಯವರು ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಭಾರತೀಯನಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೆಲಸವನ್ನು ಮೆಚ್ಚುತ್ತೇನೆ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆಯತನ ಎಂದು ಕಿಚ್ಚ ಸುದೀಪ್ ಹೇಳಿದರು.
YuvaBharataha Latest Kannada News