ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ವಿರುದ್ಧ ಗ್ರಾಮಸ್ಥರು ಬೀದಿಗಿಳಿದದ್ದು ಯಾಕೆ ?
ಗೋಕಾಕ :
ಗೋಕಾಕ ಮತಕ್ಷೇತ್ರದ ರಾಜನಗಟ್ಟಿ, ಕಡಬಗಟ್ಟಿ ಮತ್ತು ಗಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಪಪ್ರಚಾರ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಅವರ ವಿರುದ್ಧ ಈ ಗ್ರಾಮಗಳ ನಾಗರಿಕರು ಇದೀಗ ಸಿಡಿದೆದ್ದಿದ್ದಾರೆ. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಮಹಾಂತೇಶ ಕಡಾಡಿ ಅವರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಅಪಪ್ರಚಾರ ನಡೆಸಿದ್ದಾರೆ, ಈ ಮೂಲಕ ಊರಿನ ಹೆಸರು ಕೆಡಿಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎನ್ನುವುದೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿಯವರು ಮತ ಗಿಟ್ಟಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅಪಪ್ರಚಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಕೆಂಡ ಕಾರಿದ್ದಾರೆ.
ಮಹಾಂತೇಶ ಕಡಾಡಿ ಎಂಬ ವ್ಯಕ್ತಿ ಯಾರು ಎನ್ನುವುದು ನಮ್ಮ ಗ್ರಾಮಕ್ಕೆ ಇದುವರೆಗೂ ಗೊತ್ತಿಲ್ಲ. ಹಾಗಿರುವಾಗ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಸ್ವತಃ ಗ್ರಾಮಕ್ಕೆ ಬಂದು ಯಾರ ಬಳಿ ಬೇಕಾದರೂ ವಿಚಾರಿಸಲಿ. ಅದು ಬಿಟ್ಟು ಸುಳ್ಳು ಹೇಳುವುದನ್ನು ನಾವು ಸಹಿಸುವುದಿಲ್ಲ. ಒಂದು ವೇಳೆ ಅವರು ಈ ಬಗ್ಗೆ ಕ್ಷಮೆ ಯಾಚಿಸದೆ ಇದ್ದಲ್ಲಿ ಅವರನ್ನು ಗ್ರಾಮದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಅವರಿಗೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಹಾಂತೇಶ ಕಡಾಡಿ ಅವರು ನೀಡಿರುವ ಹೇಳಿಕೆ ಖಂಡನೀಯ. ಅವರು ತಕ್ಷಣ ಈ ಬಗ್ಗೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರ ಕಚೇರಿ ಹಾಗೂ ಮನೆಯ ಎದುರು ಉಗ್ರ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ರವಾನಿಸಿದ್ದಾರೆ.