Breaking News

ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ

Spread the love

ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ

(ಶ್ರೀ ಉಜ್ಜಯಿನಿ ಪೀಠದಲ್ಲಿ ೨೫-೦೪-೨೦೨೩ ರಂದು ಜರುಗುವ ಶ್ರೀ ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವದ ನಿಮಿತ್ತ ಲೇಖನ)

-ನಿರಂಜನ ದೇವರಮನೆ, ಚಿತ್ರದುರ್ಗ

ಈ ಜಗತ್ತಿನಲ್ಲಿ ಅನೇಕ ಧರ್ಮಗಳು ಉದಯಿಸಿ, ಅವುಗಳ ತತ್ವ-ಸಿದ್ಧಾಂತಗಳನ್ನು ಜನತೆಗೆ ಬೋಧಿಸಿ ಅವರು ತಮ್ಮ ಬದುಕನ್ನು ಬೆಳಗಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿವೆ. ಅಂಥ ಧರ್ಮಗಳಲ್ಲಿ ವೀರಶೈವ ಧರ್ಮವೂ ಸಹ ಒಂದಾಗಿ ತನ್ನ ಮಹತ್ವವನ್ನು ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿದೆ. ಪರಶಿವನ ಪಂಚಮುಖಗಳಿಂದ ಶ್ರೀ ಜಗದ್ಗುರು ಪಂಚಾಚಾರ್ಯರು ಭಾರತದ ಪ್ರಮುಖ ಪಂಚಜ್ಯೋರ್ತಿಲಿಂಗಗಳಲ್ಲಿ ದಿವ್ಯ ದೇಹಿಗಳಾಗಿ ಆವಿರ್ಭವಿಸಿ ತಮ್ಮ ವೀರಶೈವ ಧರ್ಮವನ್ನು ಸಂಸ್ಥಾಪಿಸಿ, ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಶ್ರೀ ಜಗದ್ಗುರು ಪಂಚಾಚಾರ್ಯರು ಯುಗ-ಯುಗಗಳ ಇತಿಹಾಸ ಹೊಂದಿ ಧಾರ್ಮಿಕ -ಸಾಮಾಜಿಕ ಮಹತ್ತರ ಸತ್ಕಾರ್ಯಗಳನ್ನು ಕೈಗೊಂಡು ಅವುಗಳನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯಗತಗೊಳಿಸಿದ ಕ್ರಿಯಾಶೀಲ ಯುಗ ಪ್ರವರ್ತಕರಾಗಿ ತಮ್ಮ ದೇದೀಪ್ಯಮಾನವನ್ನು ಬೆಳಗಿಸಿದ್ದಾರೆ.

ಪರಶಿವನ ವಾಮದೇವ ಮುಖಸಂಜಾತರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ಮಧ್ಯಪ್ರದೇಶದ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಶ್ರೀ ಸಿದ್ದೇಶ್ವರ ಮಹಾಲಿಂಗದಿಂದ ಉದ್ಭವಿಸಿ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠವನ್ನು ಅಲಂಕರಿಸಿದ ಮಹಾಮಹಿಮರಾಗಿದ್ದಾರೆ. ಕೃತಯುಗದಲ್ಲಿ ದ್ವ್ಯಯಕ್ಷರ ಶಿವಾಚಾರ್ಯ ಭಗವತ್ಪಾದರಾಗಿ, ತ್ರೇತಾಯುಗದಲ್ಲಿ ದ್ವಿವಕ್ತ್ರ ಶಿವಾಚಾರ್ಯ ಭಗವತ್ಪಾದರಾಗಿ, ದ್ವಾಪರ ಯುಗದಲ್ಲಿ ದಾರುಕಾಚಾರ್ಯ ಭಗವತ್ಪಾದರಾಗಿ ಮತ್ತೆ ಕಲಿಯುಗದಲ್ಲಿ ಮರುಳಾರಾಧ್ಯ ಶಿವಾಚಾರ್ಯ ಭಗವತ್ಪಾದರಾಗಿ ಅವತರಿಸಿ ಜಗತ್ತಿನ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ದೀವಿಗೆಯನ್ನು ಅರುಹಿದ ಆದ್ಯ ಆಚಾರ್ಯರಾಗಿದ್ದಾರೆ.

ಶ್ರೀ ಜಗದ್ಗುರು ದಾರುಕಾಚಾರ್ಯರು ವೀರಶೈವ ಧರ್ಮ ಪರಂಪರೆಯಂತೆ ಮುತ್ತುಗದ ದಂಡ, ತಾಮ್ರದ ಕಮಂಡಲ ಹಿಡಿದು, ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ ಜಲ ತತ್ವಾಧೀಶರಾಗಿ, ಪಂಚಾಕ್ಷರಿಯ ಮ ಕಾರ ಸ್ವರೂಪರಾಗಿ, ನಂದಿ ಗೋತ್ರಾಧಿಪತಿಯಾಗಿ, ಪಡ್ವಿಡಿ ಸೂತ್ರಾನುವರ್ತಿಯಾಗಿ ಯಜುರ್ವೇದ – ದೀಪ್ತಾಗಮದಲ್ಲಿ ನೆಲೆಗೊಂಡು ಇಡೀ ಭೂಮಂಡಲವನ್ನು ಸುತ್ತಿ ಸಂಚರಿಸುತ್ತ ಶ್ರೀ ಜಗದ್ಗುರು ಪಂಚಾಚಾರ್ಯರ ಆದ್ಯ ಆಚಾರ್ಯರಾದ ಶ್ರೀ ರೇಣುಕಾಚಾರ್ಯರು ಅಗಸ್ತ್ಯ ಮಹಾಮುನಿಗೆ ಬೋಧಿಸಿದ ಶಿವಾಧ್ವೈತ ಸಿದ್ಧಾಂತವನ್ನು ಮೊದಲು ಮಾಡಿಕೊಂಡು ದಧೀಚಿ ಮಹರ್ಷಿಗೆ ಉಪದೇಶಿಸಿ ಲಿಂಗದೀಕ್ಷಾ ಸಂಸ್ಕಾರವನ್ನು ಅನುಗ್ರಹಿಸಿದವರು.

ಉಜ್ಜಯಿನಿಯ ಅಂದಿನ ರಾಜ-ರಾಣಿಯರಿಗೆ ಪ್ರಜಾಪರಿಪಾಲನೆಯ ತತ್ವವನ್ನು ಬೋಧಿಸಿ ಅವರಿಗೂ ಲಿಂಗದೀಕ್ಷೆಯನ್ನು ಕರುಣಿಸಿ ವೀರಶೈವ ಸಿದ್ಧಾಂತದ ತ್ರಿವೇಣಿ ಸಂಗಮವಾದ ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳನ್ನು ಉಪದೇಶಿಸಿ, ಪ್ರಪ್ರಥಮವಾಗಿ ಪ್ರಜಾಪಾಲನೆಯ ಮಾನವಧರ್ಮ ಮತ್ತು ಸ್ತ್ರೀ ಸ್ವಾತಂತ್ರ್ಯ ಕ್ರಾಂತಿಗೆ ನಾಂದಿ ಹಾಡಿದ ಯುಗ ಕ್ರಾಂತಿಪುರುಷರಾಗಿದ್ದಾರೆ. ದೇವಪ್ರಿಯ, ವೇದಪ್ರಿಯ, ಸುಕೃತ, ಧರ್ಮವಾಹಿ ಮುಂತಾದ ವೈದಿಕ ಸಂತತಿಗೆ ಶಿವತತ್ವೋಪದೇಶದ ಮಹತ್ವ ಹಾಗೂ ಶಿವಯೋಗದ ಮಹಿಮೆಯನ್ನು ತಿಳಿಸಿ ಅವರನ್ನು ಕೃತಾರ್ಥರನ್ನಾಗಿಸಿದವರು. ಅವಂತಿ ನಗರದ ಚಂದ್ರಸೇನ ಮಹಾರಾಜನ ಆಸ್ಥಾನಕ್ಕೆ ಆಗಮಿಸಿ ಅಲ್ಲಿಯ ರಾಜ ಮತ್ತು ಪ್ರಜೆಗಳ ಸಮೂಹಕ್ಕೆ ಲಿಂಗಾಂಗ ಸಾಮರಸ್ಯದ ಶಿವಯೋಗ ಸಾಧನೆಯ ಸಿದ್ಧಿಯನ್ನು ತಿಳಿಸಿಕೊಟ್ಟು ಅದರ ಮುಖೇನ ದಯೆ, ಕರುಣೆ ಸಹನೆ ಹಾಗೂ ಕ್ಷಮಾಗುಣ ಮುಂತಾದ ಮಾನವೀಯ ಮೌಲ್ಯಗಳನ್ನು ಬಿತ್ತಿದ ಸಿದ್ಧಿ ಪುರುಷರಾಗಿದ್ದಾರೆ.

ಶ್ರೀ ದಾರುಕಾಚಾರ್ಯರು ಸಂಚಾರ ಹೊರಟು ಹೋದೆಡೆಗಳಲ್ಲೆಲ್ಲಾ ಜನರು ಆಚರಿಸುತ್ತಿದ್ದ ಹಿಂಸಾಕರ್ಮಕಾಂಡವನ್ನು ಖಂಡಿಸಿ ವೇದದ ಉತ್ತರ ಭಾಗವಾದ ಉಪನಿಷತ್ತುಗಳು ಮತ್ತು ಶಿವಾಗಮಗಳನ್ನು ನಿಷ್ಟಾ ಭಕ್ತಿಯಿಂದ ಆಚರಿಸಿ, ಜ್ಞಾನ ಸಂಪನ್ನರಾಗಿ ಮೋಕ್ಷ ಪಡೆಯುವ ಸನ್ಮಾರ್ಗದ ಸತ್ಪಥವನ್ನು ತೋರುತ್ತಿದ್ದವರು.

ಶ್ರೀ ದಾರುಕಾಚಾರ್ಯರು ಮಾನವ ಕುಲವೆಲ್ಲಾ ಒಂದೇ, ಎಂದು ಸಾರಿ, ವೀರಶೈವಧರ್ಮಕ್ಕೆ ಯಾವುದೇ ಜಾತಿ-ಮತ-ಲಿಂಗ ಭೇದವಿಲ್ಲವೆಂಬ ಸಂದೇಶವನ್ನು ಸಾರಿ ತಾವೇ ಆ ಸಂದೇಶಗಳನ್ನು ಪಾಲಿಸಿ ಲೋಕಕ್ಕೆ ಆದರ್ಶವನ್ನು ಅನಾವರಣಗೊಳಿಸಿದವರು. ತಮಗೆ ಶರಣಾದ ಹೊಲೆಯ, ಚಂಡಾಲ, ಶೂದ್ರ ಮೊದಲಾದ ಅಸ್ಪಶ್ಯರ ಬಲ ಹಾಗೂ ಪ್ರತಿಭೆಯನ್ನು ಗುರುತಿಸಿ ಅವರಿಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರವಿತ್ತು ಅವರೆನ್ನೆಲ್ಲಾ ಮಹೇಶ್ವರ ಮತ್ತು ಮಹಾದೇವಿಯರನ್ನಾಗಿಸಿದ ಹೆಗ್ಗಳಿಕೆ ಇವರದಾಗಿದೆ.

ಶ್ರೀ ದಾರುಕಾಚಾರ್ಯರು ಪ್ರತಿಯೊಂದು ಜೀವಿಯೂ ಕೂಡ ತನ್ನ ಜೀವಿತದಲ್ಲಿ ಕ್ರಿಯಾಶೀಲವಾಗಿ ಬದುಕಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಮುಖೇನ ಬದುಕನ್ನು ರೂಪಿಸಿಕೊಳ್ಳಬೇಕು. ಅಲ್ಲದೇ ಇತರರಿಗೆ ಪರೋಪಕಾರಿಯಾಗಿ ತನ್ನ ಮಾನವೀಯ ಗುಣಗಳನ್ನು ಬೆಳಸಿಕೊಂಡು ಬದುಕಿನ ಸಾರ್ಥಕತೆಯತ್ತ ಸಾಗಬೇಕು. ದುಡಿಮೆಗೆ ಯಾವುದೇ ಮೇಲೆ-ಕೀಳು ಎಂಬ ಭೇದವಿಲ್ಲ ಪ್ರತಿಯೊಬ್ಬರು ಯಾವುದಾದರೊಂದು ಕಾಯಕದಲ್ಲಿ ತೊಡಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು ಎಂಬ ವಿಚಾರವನ್ನು ಅರುಹಿ ತಾವೇ ಲೋಕೋಪಯೋಗಾರ್ಥವಾಗಿ ಕಾಯಕದಲ್ಲಿ ನಿರತರಾಗುತ್ತಿದ್ದರು. ದ್ವಾಪರಯುಗದಾದಿಯಲ್ಲಿಯೇ ಕಾಯಕ ತತ್ವವನ್ನು ಎತ್ತಿ ಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಭಾರತದಲ್ಲಿ ಅನಾದಿ ಕಾಲದಿಂದಲೂ ಆಚರಣೆಯಲ್ಲಿದ್ದ ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ಪರಂಪರೆಗಳು ಕಾಲಗತಿಗನುಗುಣವಾಗಿ ಸೊರಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಚೈತನ್ಯಗೊಳಿಸಲು ದೇಶದಾದ್ಯಂತ ಸಂಚರಿಸಿ ಜನತೆಯನ್ನು ಒಟ್ಟುಗೂಡಿಸಿ ಭೂ ರುದ್ರಭಕ್ತ ಸಂಘಗಳನ್ನು ಸ್ಥಾಪಿಸಿ ಅವುಗಳ ಮುಖೇನ ಸಮಾಜೋ-ಧಾರ್ಮಿಕ ಮೌಲ್ಯಗಳು ವೃದ್ಧಿಸುವಂತೆ ಮಾಡಿದ ಸಾಮಾಜಿಕ ಸಂಘಟನೆಯ ಸಂವರ್ಧಕರು.

ಶ್ರೀ ದಾರುಕಾಚಾರ್ಯರು ಮಠ ನಿರ್ಮಾಣ ಪರಿಕಲ್ಪನೆಯ ಮುಖೇನ ಗುರುಕುಲಗಳನ್ನು ಮಠಗಳನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ಶಿವಧರ್ಮ ಪ್ರಸಾರ, ಯೋಗಾನುಷ್ಟಾನ, ಜ್ಞಾನ-ಅನ್ನದಾಸೋಹ ಹಾಗೂ ಶಿವಜ್ಞಾನನುಭವ ಗೋಷ್ಠಿಗಳನ್ನು ಏರ್ಪಡಿಸಿ ಅವುಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಇಂಥ ಮಹಾನುಭಾವರು ಈ ದೇಶದ ಉದ್ಗಗಲಕ್ಕೂ ಸಂಚರಿಸಿ ನೆಲ-ಜಲ-ಜನತೆಯನ್ನು ಪಾವನ ಪುನೀತರನ್ನಾಗಿ ಮಾಡಿ ನಂತರ ಶ್ರೀ ಉಜ್ಜಯಿನಿಯ ಸದ್ಧರ್ಮ ಪೀಠಕ್ಕೆ ಯೋಗ್ಯ ಆಚಾರ್ಯನನ್ನು ನೇಮಿಸಿ ಅಲ್ಲಿಯ ಜ್ಯೋತಿರ್ಲಿಂಗವನ್ನು ಪ್ರವೇಶಿಸಿ ಅದರಲ್ಲಿಯೇ ಬೆರೆತು ಬಯಲಾದವರು. ನಂತರ ಅನೇಕ ಆಚಾರ್ಯರು ಶ್ರೀ ಉಜ್ಜಯಿನಿ ಸದ್ಧರ್ಮ ಪೀಠವನ್ನು ಅಲಂಕರಿಸಿ ಧರ್ಮದ, ಸತ್ಯದ ಮಾರ್ಗದಲ್ಲಿ ಜನತೆಯನ್ನು ಮುನ್ನೆಡೆಸಿ ತಮ್ಮ ಸಾರ್ಥಕತೆಯನ್ನು ವಿರಾಜಿಸಿದ್ದಾರೆ. ಅಲ್ಲಿನ ಧರ್ಮ ಸಂಘರ್ಷದ ಹಿನ್ನೆಲೆಯ ನಂತರ ಶ್ರೀ ಸದ್ಧರ್ಮ ಪೀಠವು ಈಗಿನ ವಿಜಯನಗರ ಜಿಲ್ಲೆಯ ಕೊಟ್ಟೂರು ಸೀಮೆಯ ಉಜ್ಜಯಿನಿ ಪ್ರದೇಶಕ್ಕೆ ಸ್ಥಳಾಂತರಗೊಂಡು ತನ್ನ ಧರ್ಮ ಪರಂಪರೆಯನ್ನು ಮುಂದುವರೆಸುತ್ತ ಬಂದಿದ್ದು, ಇಲ್ಲಿನ ಅನೇಕ ಪೀಠಾಚಾರ್ಯರು ಸಹ ಅನಂತ ಧರ್ಮ ಕಾರ್ಯಗಳ ಮುಖೇನ ಈ ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಶ್ರೀ ಜಗದ್ಗುರು ದಾರುಕಾಚಾರ್ಯರು ಜನಜಾಗೃತಿ ಮತ್ತು ವಿಶ್ವಶಾಂತಿಗಾಗಿ ನಾಡಿನ್ನೆಲ್ಲೆಡೆ ಸಂಚರಿಸಿ ಸಾವಿರಾರು ಮಠಗಳನ್ನು ಸ್ಥಾಪಿಸಿ ತನ್ಮೂಲಕ ವಿಶ್ವ ಸಮುದಾಯದಲ್ಲಿ ಸಾಮರಸ್ಯ, ಸೌಹಾರ್ದತೆ, ಸಮನ್ವಯ-ಸಹಬಾಳ್ವೆಯನ್ನು ಬಿತ್ತಿ ಬೆಳೆಸುವ ಮಹತ್ಕಾರ್ಯವನ್ನು ಮಾಡಿದ ದ್ಯೋತಕವಾಗಿ, ವೈಶಾಖ ಶುದ್ಧ ಪಂಚಮಿ ೨೫-೦೪-೨೦೨೩ ಮಂಗಳವಾರದಂದು ದೇಶದಾದ್ಯಂತ ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮಗಳಿಂದ ಆಚರಿಸಲಾಗುತ್ತದೆ.

ಶ್ರೀ ಮದುಜ್ಜಯಿನಿ ಜಗದ್ಗುರು ಸದ್ಧರ್ಮ ಸಿಂಹಾಸನಾ ಮಹಾಸಂಸ್ಥಾನದ ಪೀಠ ಪರಿಸರದಲ್ಲಿ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಇದೇ ದಿವಸ ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ಮರುಳಸಿದ್ಧಸ್ವಾಮಿ ಮಹಾರಥೋತ್ಸವ ಅತ್ಯಂತ ವೈಭವ ಹಾಗೂ ಅರ್ಥಪೂರ್ಣವಾಗಿ ನೆರವೇರುವುದು ಶ್ರೀ ಪೀಠದ ಇತಿಹಾಸ ಪರಂಪರೆಯಂತೆ ಮರುದಿವಸ ವೈಶಾಖ ಷಷ್ಠಿ ೨೬-೪-೨೦೨೩ ರಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ತೈಲಾಭಿಷೇಕ ಅತ್ಯಂತ ಶಾಸ್ತ್ರೋಕ್ತವಾಗಿ ಜರುಗುವುದು. ೩೦-೦೪-೨೦೨೩ ಭಾನುವಾರ ಶ್ರೀ ಜಗದ್ಗುರುಗಳ ಸಾನಿಧ್ಯದಲ್ಲಿ ಹತ್ತಾರು ಉಪಚಾರ್ಯರ ಸಮ್ಮುಖದಲ್ಲಿ ಹಾಗೂ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಉಚಿತ ಸಾಮೂಹಿಕ ವಿವಾಹಗಳು ಹಾಗೂ ಧರ್ಮ ಸಭೆ ಅತ್ಯಂತ ವೈಶಿಷ್ಟ್ಯಪೂಣವಾಗಿ ಜರುಗುವವು.

ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಶ್ರೀ ಪೀಠದ ಪರಿಸರವನ್ನು ಅತ್ಯಂತ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾಡಿ ಅಲ್ಲಿನ ಎಲ್ಲಾ ಧಾರ್ಮಿಕ-ಸಾಮಾಜಿಕ ಕಾರ್ಯಗಳು ಪ್ರಜಾಸತ್ತಾತ್ಮಕ, ಜಾತ್ಯಾತೀತ, ಸಮಾಜವಾದ ನಿಲುವುಗಳನ್ನು ಹೊಂದಿ ಅವುಗಳನ್ನು ಜನಮುಖಿಯಾಗಿ ಹೊರಹೊಮ್ಮಿಸಿ ನಾಡಿನ ಲಕ್ಷಾಂತರ ಭಕ್ತರು ಶ್ರೀ ಉಜ್ಜಯಿನಿ ಪೀಠದತ್ತ ಆಗಮಿಸಿ ತಮ್ಮ ಭಕ್ತಿ-ಭಾವಗಳನ್ನು ಸಲ್ಲಿಸಿ ಧನ್ಯತಾ ಭಾವವನ್ನು ಪಡೆಯುವಂತೆ ಮಾಡಿದ್ದಾರೆ.

ಶ್ರೀ ಪೀಠದಲ್ಲಿ ಜರುಗುವ ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ, ಮಹಾರಥೋತ್ಸವ, ತೈಲಾಭಿಷೇಕ ಹಾಗೂ ವಿವಿಧ ದಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಶ್ರೀ ಜಗದ್ಗುರು ಮರುಳಸಿದ್ದೇಶ್ವರಸ್ವಾಮಿಯ ಕೃಪೆಗೆ ಭಾಜನರಾಗಿ ಧನ್ಯ-ಮಾನ್ಯ-ಕೃತಾರ್ಥರಾಗೋಣ.

 

ನಿರಂಜನ ದೇವರಮನೆ
ಚಿತ್ರದುರ್ಗ
ಮೊ. ೯೪೪೯೦೨೨೦೬೯


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

nine − 6 =