Breaking News

ಬಲ್ಲಿರೇನಯ್ಯ ಮುನ್ನುಡಿಯ ನಲ್ನುಡಿಯಿಂದ…

Spread the love

ಬಲ್ಲಿರೇನಯ್ಯ ಮುನ್ನುಡಿಯ ನಲ್ನುಡಿಯಿಂದ….

ದಿನೇಶ ಉಪ್ಪೂರರ ಈ ಪುಸ್ತಕ ಯಕ್ಷಗಾನದ ಲೋಕವನ್ನು ಬಲ್ಲವರಿಗೆ ಮತ್ತೆ
ಮತ್ತೆ ಮೆಲ್ಲುವ ಕಜ್ಜಾಯ. ಓದಿಗೊಂದು ಹಾಸ್ಯದ ಮೆರಗು, ಮತ್ತೆ ಆಲೋಚಿಸಿದರೆ
ಇಣುಕುವ ಲೋಕ ವಿವೇಕ. ಕಲೆಯ ಲೋಕ, ವಿಸ್ಮಯದ ಪ್ರಪಂಚ. ಕಲಾವಿದನನ್ನು
ಸಾಮಾನ್ಯನಂತೆ ನಡೆಸಿಕೊಳ್ಳುವುದು ರಸಿಕರಿಗೆ ಒಪ್ಪುವ ಮಾತಲ್ಲ. ಕಲ್ಪನೆ,
ಭ್ರಮೆಗಳಿಲ್ಲದಿದ್ದರೆ ಅದ್ಭುತ ರಮ್ಯವಾದ ಕಲೆಯನ್ನು ಅನುಭವಿಸಲಾಗುವುದಿಲ್ಲ.
ಕಲಾವಿದನಿಗೂ ಸಹೃದಯನಿಗೂ ಸಮಾನವಾದ ಸಂಭ್ರಮ-ಸಮಸ್ಯೆ ಇದು. ಈ ವಿಸ್ಮಯದ ವಿಭಿನ್ನ ಮಗ್ಗುಲುಗಳು ತೆರೆದುಕೊಂಡಿವೆ ಈ ಪುಸ್ತಕದಲ್ಲಿ. ಬಲ್ಲವರಿಂದೆಲ್ಲ
ಸಂಗ್ರಹಿಸಿದ `ಬಲ್ಲಿರೇನಯ್ಯ’ ಲೋಕಸಂಗ್ರಹದ ಹೊಸಪರಿಯಾಗಿದೆ. ಯಕ್ಷಗಾನದ
ಕವಿ, ಕಲಾವಿದ, ಅರ್ಥಧಾರಿ, ಸಂಘಟಕ, ಪ್ರೇಕ್ಷಕರೆಲ್ಲರ ಸ್ವಾರಸ್ಯದ ನಡೆನುಡಿಗಳ
ವಿವರದ ಗುಚ್ಛ.


ಕಲೆ ಸೌಂದರ್ಯವನ್ನು ಸೃಷ್ಟಿಸುತ್ತದೆ. ಸೌಂದರ್ಯ ಆನಂದಕ್ಕೆ ಕಾರಣವಾಗುತ್ತದೆ. ಸಿಟ್ಟು, ದುಃಖ, ಸಮಸ್ಯೆಗಳೆಲ್ಲ ಸೌಂದರ್ಯವಾಗುವ,
ರಸವಾಗುವ ಸಾಧ್ಯತೆ ಕಲೆಯಲ್ಲಿ. ಆ ಕಲೆಯೊಡನೆ ಗುರುತಿಸಿಕೊಂಡಿರುವವರ
ರಂಗದ ನಡೆಯೊಡನೆ ರಂಗದಾಚೆಯ ನಡೆನುಡಿಗಳಲ್ಲೂ ಸಹೃದಯನಿಗೆ
ಸೌಂದರ್ಯಾನುಭವವಾಗುವುದಿದೆಯಲ್ಲ ಅದು ವಿಶೇಷ. ಶಿರೂರು
ಫಣಿಯಪ್ಪಯ್ಯನವರಿಗೆ ನಲವತ್ತು ಪ್ರಸಂಗಗಳ ಪದ್ಯಗಳು ಬಾಯಿಪಾಠವಾಗಿದ್ದವು
ಎಂದರೆ ಒಂದು ಕಲೆಯ ಸಂಸ್ಕಾರ ಎಷ್ಟು ಎತ್ತರದ್ದು ಎಂದು ಅಚ್ಚರಿಯಾಗುತ್ತದಲ್ಲವೇ!
ಕಲೆ ಆಸಕ್ತಿಯಾಗಿ, ಹವ್ಯಾಸವಾಗಿ, ಪ್ರವೃತ್ತಿಯಾಗಿ, ವೃತ್ತಿಯಾಗಿ, ಹುಚ್ಚಾಗಿ ಅನೇಕರನ್ನು
ಕಾಡುತ್ತದೆ. ಎಲ್ಲೋ ಕೆಲವರಿಗೆ ಪ್ರಸಾದವಾಗಿ ಒದಗುತ್ತದೆ. ಆ ಪ್ರಸಾದಗುಣ ಅವರ
ಬದುಕಿಗೂ ಸುತ್ತಲಿನವರ ಬದುಕಿಗೂ ನೆಮ್ಮದಿಯನ್ನು ನೀಡುತ್ತದೆ. ಇಂತಹ ಎಲ್ಲ
ರೀತಿಯ ಸಂಗತಿಗಳನ್ನು ಮೆಲುಕು ಹಾಕುವುದಕ್ಕೆ ಬೇಕಾದ ಸರಕು ಈ ಪುಸ್ತಕದಲ್ಲಿದೆ.


ಯಕ್ಷಗಾನ ಕಲೆ ಸರ್ವಸ್ಪರ್ಶಿಯಾದದ್ದು. ಎಲ್ಲ ಸಮಾಜದ ಜನ, ಎಲ್ಲ ಸ್ತರದ
ಜನ, ಪಂಡಿತರು-ಪಾಮರರು ಎಲ್ಲರೂ ಈ ನದಿಯಲ್ಲಿ ಮಿಂದೆದ್ದಿದ್ದಾರೆ. ಅದೆಷ್ಟು
ಜನರಿಗೆ ಬದುಕಿನ ಬವಣೆಗಳನ್ನು ಸಹಿಸುವ ಶಕ್ತಿ ನೀಡಿದ; ಭಕ್ತಿಯ ನೆಲೆ, ಆಧ್ಯಾತ್ಮದ
ಸೆಲೆ ಎನ್ನುವುದನ್ನು ಊಹಿಸುವುದು ಕಷ್ಟ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eleven + 3 =