ಲಕ್ಷ್ಮೀ ಹೆಬ್ಬಾಳಕರಗೆ ಸೋಲಿನ ಭಯ
ಯುವ ಭಾರತ ಸುದ್ದಿ ಬೆಳಗಾವಿ :
ಕಾಂಗ್ರೆಸ್ ಪಕ್ಷದ 50 ಅಭ್ಯರ್ಥಿಗಳ ವಿರುದ್ಧ ಐಟಿ ಮತ್ತು ಲೋಕಾಯುಕ್ತ ದಾಳಿ ನಡೆಯಲಿದೆ ಎಂಬ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರ ಆರೋಪಕ್ಕೆ ಬಿಜೆಪಿ ಮುಖಂಡ ಮುರುಗೇಂದ್ರ ಗೌಡ ಪಾಟೀಲ ತಿರುಗೇಟು ನೀಡಿದ್ದು, ಈ ಹಿಂದೆ ಆಡಳಿತ ನಡೆಸಿದ್ದ ಅವಧಿಯಲ್ಲೂ ಕಾಂಗ್ರೆಸಿಗರು ವ್ಯವಸ್ಥೆಯನ್ನು ಈ ರೀತಿಯಾಗಿ ದುರುಪಯೋಗ ಮಾಡಿಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಬಾರಿ ಸೋಲಿನ ಭಯ ಕಾಡುತ್ತಿದೆ. ನಾನು ಸೋಲುವುದು ಖಚಿತ ಎಂಬ ಹತಾಶ ಭಾವನೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಂಪೂರ್ಣವಾಗಿ ಬಿಜೆಪಿಮಯವಾಗಿದೆ. ಹೀಗಾಗಿ ಹೆಬ್ಬಾಳಕರ ಈಗ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಮೂಲಕವಾಗಿ ಜನರಿಂದ ಅನುಕಂಪ ಪಡೆಯಲು ಹಾಗೂ ಜನರನ್ನು ಹಾದಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಬಿಜೆಪಿ ಎಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ. ಭ್ರಷ್ಟರು, ಕಳ್ಳರು ಇದ್ದರೆ ಅಂತವರನ್ನು ಸಹ ಬಿಜೆಪಿ ಬಿಡದು. ಕಾಂಗ್ರೆಸ್ ಪಕ್ಷ ಇಷ್ಟೊಂದು ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಆಗ ಅವರು ಲೋಕಾಯುಕ್ತ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.