ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ -ಶಾಹಿ ಈದ್ಗಾ ವಿವಾದ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ಯುವ ಭಾರತ ಸುದ್ದಿ ಅಲಹಾಬಾದ್ :
ಮಥುರಾ ಕೃಷ್ಣ ಜನ್ಮ ಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಶಾಹಿ ಈದ್ಗಾ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಸಿವಿಲ್ ನ್ಯಾಯಾಧೀಶರ ತೀರ್ಪಿನ ವಿರುದ್ಧ ಮತ್ತೊಮ್ಮೆ ವಿಚಾರಣೆ ನಡೆಸಿದ ನಂತರ ಆದೇಶ ನೀಡುವಂತೆ ಮಥುರಾದ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ ಸೂಚಿಸಿದೆ.
ಮಥುರಾದ ಜಿಲ್ಲಾ ನ್ಯಾಯಾಧೀಶರ ಮುಂದೆ ಎಲ್ಲಾ ಪಕ್ಷಗಳು ಈಗ ತಮ್ಮ ವಾದಗಳನ್ನು ಹೊಸದಾಗಿ ಮಂಡಿಸಬೇಕಾಗುತ್ತದೆ. ಶಾಹಿ ಈದ್ಗಾ ಮಸೀದಿಯನ್ನು ಕತ್ರಾ ಕೇಶವದೇವ ದೇವಸ್ಥಾನದ ಸಂಕೀರ್ಣದಿಂದ ತೆಗೆದುಹಾಕಲು 2020 ರಲ್ಲಿ ಕೆಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಸೇರಿದ 13.37 ಎಕರೆ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಮಸೀದಿಯನ್ನು ಅಲ್ಲಿಂದ ತೆಗೆಯಬೇಕು ಮತ್ತು ಭೂಮಿಯನ್ನು ಟ್ರಸ್ಟ್‌ಗೆ ಹಿಂತಿರುಗಿಸಬೇಕು ಎಂದು ಮನವಿ ಮಾಡಿದ್ದರು. ಆದಾಗ್ಯೂ, ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗವು ಸೆಪ್ಟೆಂಬರ್ 30, 2020 ರಂದು ದಾವೆಯನ್ನು ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿತು. ಸಿವಿಲ್ ದೂರನ್ನು ವಜಾಗೊಳಿಸಿದ ಸಿವಿಲ್ ನ್ಯಾಯಾಲಯದ ತೀರ್ಪನ್ನು ಪರಿಶೀಲಿಸುವಂತೆ ಶ್ರೀಕೃಷ್ಣ ವಿರಾಜಮಾನವರು ಈ ಹಿಂದೆ ಜಿಲ್ಲಾ ನ್ಯಾಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಬಹುದು ಎಂದು ತೀರ್ಪು ಪ್ರಕಟಿಸಿದ್ದರು.
ಜಿಲ್ಲಾ ನ್ಯಾಯಾಧೀಶರ ತೀರ್ಪನ್ನು ಈದ್ಗಾ ಟ್ರಸ್ಟ್ ಕಮಿಟಿ ಮತ್ತು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ವಿವಾದಿತ ಶಾಹಿ ಈದ್ಗಾ ರಚನೆಯ ಸಮೀಕ್ಷೆಗಾಗಿ ಈ ಹಿಂದೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತ್ತು. ಶಾಹಿ ಈದ್ಗಾ ಪರ ವಕೀಲರಾದ ತನ್ವೀರ್ ಅಹ್ಮದ್ ಮತ್ತು ನೀರಜ್ ಶರ್ಮಾ ಅವರು ಹಿಂದೂ ಸೇನಾ ಅಧ್ಯಕ್ಷರು ಸಲ್ಲಿಸಿದ ಮನವಿಯ ವಿರುದ್ಧ ಅರ್ಜಿ ಸಲ್ಲಿಸಿದ ನಂತರ ಸಮೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಮಥುರಾ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಮುಸ್ಲಿಂ ಪಕ್ಷಗಳ ಅರ್ಜಿಯನ್ನು ತಿರಸ್ಕರಿಸಿದೆ. ಹಾಗೂ ಈ ಪ್ರಕರಣದ ಸಂಪೂರ್ಣ ವಿಷಯವನ್ನು ಮಥುರಾ ಜಿಲ್ಲಾ ನ್ಯಾಯಾಧೀಶರಿಗೆ ಹಿಂತಿರುಗಿಸಿದೆ, ಪ್ರಕರಣದ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕಿದೆ ಮತ್ತು ಎಲ್ಲಾ ಕಡೆಯ ವಿಚಾರಣೆಯನ್ನು ಹೊಸದಾಗಿ ಆಲಿಸಲು ಸೂಚಿಸಿದೆ.
1973 ರಲ್ಲಿ ಮಸೀದಿ ಟ್ರಸ್ಟ್ ಮತ್ತು ದೇವಾಲಯದ ಆಡಳಿತದ ನಡುವಿನ ಆರಂಭಿಕ ಒಪ್ಪಂದದೊಂದಿಗೆ ಎರಡೂ ಪಕ್ಷಗಳಿಗೆ ಭೂಮಿಯನ್ನು ಹಂಚಿಕೆ ಮಾಡುವ ಮೂಲಕ ವಿವಾದವು ಹಲವಾರು ವರ್ಷಗಳಿಂದ ನಡೆಯುತ್ತಿದೆ. ಆದಾಗ್ಯೂ, 1973 ರ ನಿರ್ಧಾರವನ್ನು ವಿರೋಧಿಸಲು 2016 ರಲ್ಲಿ ದೇವರ ಪರವಾಗಿ ಹೊಸ ಅರ್ಜಿಯನ್ನು ಸಲ್ಲಿಸಲಾಯಿತು. ಸಿವಿಲ್ ನ್ಯಾಯಾಲಯವು (ಹಿರಿಯ ವಿಭಾಗ) ಸೆಪ್ಟೆಂಬರ್ 25, 2020 ರಂದು ಸಿವಿಲ್ ದೂರನ್ನಾಗಿ ನೋಂದಾಯಿಸಲು ನಿರಾಕರಿಸಿತು.
ನಂತರ ಇದರ ವಿರುದ್ಧ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಕಳೆದ ವರ್ಷದ ಮೇ ತಿಂಗಳಲ್ಲಿ, ಮಥುರಾ ಜಿಲ್ಲಾ ನ್ಯಾಯಾಧೀಶರು ಸಿವಿಲ್ ನ್ಯಾಯಾಧೀಶರ ನಿರ್ದೇಶನವನ್ನು ರದ್ದುಗೊಳಿಸಿದರು ಮತ್ತು ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಪ್ರಕಟಿಸಿದರು. ಮುಸ್ಲಿಂ ಕಡೆಯವರು ಈ ತೀರ್ಪನ್ನು ಪ್ರಶ್ನಿಸಿ 1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.