ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ
ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ
ಗೋಕಾಕ :
ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹೊಸಪೇಟ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ೩ ಮತಗಟ್ಟೆ ೧೩೧ ರಲ್ಲಿ ಬುಧವಾರ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಸಿಎಂ ಬೊಮ್ಮಾಯಿ ಅವರು ಈಗಾಗಲೇ ಈ ಬಾರಿ ನಿರ್ಧಾರ ಬಿಜೆಪಿ ಸರ್ಕಾರವೆಂದು ಹೇಳಿದ್ದಾರೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುವುದರೊಂದಿಗೆ ಮತ್ತೊಮ್ಮೆ ನಮ್ಮದೇ ಸರ್ಕಾರ ಬರುತ್ತದೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಬಿಸಿಲು ಹೆಚ್ಚಿಗೆ ಇದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಖುಷಿ ಪಡುವಂತಹ ವಿಷಯ. ಇನ್ನೂ ಹೆಚ್ಚೆಚ್ಚು ಜನರು ಬಂದು ವೋಟ್ ಮಾಡಬೇಕೆಂದು ನಾವೆಲ್ಲರೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ಚೆನ್ನಾಗಿ ಆಗುತ್ತಿದೆ. ಒಳ್ಳೆಯದು ಆಗುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ಗೋಕಾಕ, ಅರಭಾವಿ ಸೇರಿದಂತೆ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುತ್ತದೆ. ಒಳ್ಳೆಯ ಮತದಾನ ಆಗುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿಗೆ ಒಳ್ಳೆಯ ಸ್ಪಂದನೆ ಇದ್ದು, ಹೆಚ್ಚಿನ ಸೀಟುಗಳು ಬಿಜೆಪಿಗೆ ಬರುತ್ತವೆ ಎಂದರು.
ಅರಭಾಂವಿ ಮತಕ್ಷೇತ್ರದಲ್ಲಿ ಒನ್‌ಸೈಡೆಡ್ ಫಲಿತಾಂಶ ಆಗುತ್ತದೆ. ರಾಜ್ಯದಲ್ಲಿ ಅರಭಾವಿ ಮತಕ್ಷೇತ್ರದಿಂದ ಬಾಲಚಂದ್ರ ಅವರು ಅತೀ ಹೆಚ್ಚು ಲೀಡ್‌ನಿಂದ ಆಯ್ಕೆಯಾಗಿ ಬರುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒನ್‌ಸೈಡೆಡ್ ಅಂತ ಅನ್ನಲಿಕ್ಕೆ ಬರುವುದಿಲ್ಲ. ಇದು ಚುನಾವಣೆಯಲ್ಲಿ ವಿರೋಧ ಪಕ್ಷದವರು ಇದ್ದೇ ಇರುತ್ತಾರೆ. ಒಳ್ಳೆ ಮತದಾನ ನಡೆದಿದೆ. ವಿರೋಧ ಪಕ್ಷದವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಮ್ಮ ಕಾರ್ಯಕರ್ತರು, ಬಿಜೆಪಿ ಮುಖಂಡರು ಸೇರಿದಂತೆ ಜನರು ಕೂಡ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕೆಂದು ಪ್ರಯತ್ನ ಮಾಡಿದ್ದಾರೆ. ನೋಡೋಣ ಜನರ ಆಸೆಯಂತಾಗಲಿ ಎಂದು ನಾವು ಕೂಡ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
——-
ಕೋಟ್..
ಪ್ರತಿ ಬಾರಿಯೂ ನಮಗೆ ನಾವು ವೋಟ್ ಹಾಕಿಕೊಳ್ಳಲು ಅವಕಾಶ ಸಿಕ್ಕಿಲ್ಲ. ಗೋಕಾಕಿನಲ್ಲಿ ವೋಟ್ ಹಾಕುತ್ತಿದ್ದೇನೆ. ಸ್ಪರ್ಧೆ ಮಾಡಿದ ಅರಭಾವಿ ಕ್ಷೇತ್ರಕ್ಕೆ ಹೋಗುತ್ತೇನೆ. ಜನರ ಪ್ರೀತಿ ಇರುವವರೆಗೂ ರಾಜಕಾರಣ ಮಾಡುವುದು. ಬೇಡ ಅಂದಾಗ ಸುಮ್ಮನೆ ಇರಬೇಕಾಗುತ್ತೆ. ಈ ಬಾರಿ ಗೆಲುವಿನೊಂದಿಗೆ ಡಬಲ್ ಹ್ಯಾಟ್ರಿಕ್ ಆಗುತ್ತದೆ.
– ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ, ಅರಭಾಂವಿ ಮತಕ್ಷೇತ್ರ.