ಮತ ಎಣಿಕೆಯತ್ತ ಎಲ್ಲರ ಲೆಕ್ಕಾಚಾರ
ಯುವ ಭಾರತ ಸುದ್ದಿ ಬೆಂಗಳೂರು :
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಯಾರು ಗೆಲುವು ಪಡೆಯಬಹುದು ಎಂಬ ಚರ್ಚೆ ಈಗ ಎಲ್ಲೆಡೆ ನಡೆದಿದೆ.
ಮತಗಟ್ಟೆ ಸಮೀಕ್ಷೆಯ ಮಾಹಿತಿ ಹಾಗೂ ಮತ ಎಣಿಕೆ ಮೂಡಿಸಿರುವ ಕುತೂಹಲದ ಮಧ್ಯೆಯೇ, ಅಧಿಕಾರ ಹಿಡಿಯುವರು ಯಾರು? ಅತಂತ್ರ ಪರಿಸ್ಥಿತಿ ಎದುರಾದರೆ ಯಾರ ಜತೆಗೆ ಕೈ
ಜೋಡಿಸಬೇಕು? ಯಾರನ್ನು ಸೆಳೆಯಬೇಕು ಎಂಬ ಲೆಕ್ಕಾಚಾರ ವಿವಿಧ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ತುಸು ಚುರುಕುಗೊಂಡಿದೆ.
ಕರ್ನಾಟಕದ ಅತ್ಯಂತ ನಿರ್ಣಾಯಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರ ಬೀಳಲಿದೆ. ಆದ್ದರಿಂದ ಆ ಕ್ಷಣಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ತಮ್ಮ ಮತಕ್ಷೇತ್ರದ ಹೊಸ ಶಾಸಕರು ಯಾರಾಗಬಹುದು ಎಂಬ ಕಾತರ ಎಲ್ಲರಲ್ಲೂ ಇದೆ. ಆದ್ದರಿಂದ ಎಲ್ಲರ ಚಿತ್ತ ಇದೀಗ ಶನಿವಾರದ ಫಲಿತಾಂಶದತ್ತ ಹರಿದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿ ಇವುಗಳಲ್ಲಿ 13 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ. ಆದರೆ ಸದ್ಯದ ಬೆಳವಣಿಗೆಯಲ್ಲಿ ಇಷ್ಟು ಸ್ಥಾನಗಳನ್ನು ಮತ್ತೆ ಉಳಿಸಿಕೊಂಡಿತೇ ? ಬೆಳಗಾವಿ ಜಿಲ್ಲೆಯ ಫಲಿತಾಂಶ ಬಿಜೆಪಿ ಪಾಲಿಗೆ ಏನಾಗಲಿದೆಯೋ ನೋಡಬೇಕು. ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಮುಂದಾಗಿದೆ.
ರಾಜ್ಯ ರಾಜಕೀಯದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಹಲವು ಸಮೀಕ್ಷೆಗಳು ನುಡಿದಿವೆ. ಹೆಚ್ಚಿನ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಭವಿಷ್ಯ ನುಡಿದಿವೆ. ಆದರೆ ಬಿಜೆಪಿ ಮಾತ್ರ ಈ ಬಗ್ಗೆ ಯಾವುದೇ ತಲೆಕೆಡಿಸಿಕೊಂಡಿಲ್ಲ. ಈ ಬಾರಿಯೂ ಬಿಜೆಪಿಯ ಕಮಲ ಮತ್ತೆ ಅರಳಲಿದೆ ಎಂಬ ಆಶಾಭಾವ ನಾಯಕರಲ್ಲಿ ಇದೆ. ಕಾರ್ಯಕರ್ತರು ಮಾತ್ರ ಸಮೀಕ್ಷೆಯಿಂದ ಕಳವಳಗೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಬಗ್ಗೆ ಸಮೀಕ್ಷೆಗಳು ನುಡಿದಿದ್ದು ಶನಿವಾರದ ಮತ ಎಣಿಕೆಯತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ.