ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಯುವ ಭಾರತ ಸುದ್ದಿ ಬೆಂಗಳೂರು:
ತರಗತಿ ಅವಧಿಯಲ್ಲಿ ಹಾಜರಾತಿ ಕೊರತೆಯಿಂದ 2023ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದ ಕಲಾ ಮತ್ತು ವಾಣಿಜ್ಯ ವಿಭಾಗದ 12,385 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ಕಲ್ಪಿಸಿದೆ.
ದ್ವಿತೀಯ ಪಿಯುಸಿಗೆ ತರಗತಿ ವಿದ್ಯಾರ್ಥಿಗಳಾಗಿ ನೋಂದಣಿ ಮಾಡಿಕೊಂಡಿದ್ದ ಈ ವಿದ್ಯಾರ್ಥಿಗಳು ಹಾಜರಾತಿ ಕೊರತೆಯಿಂದ ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗೆ ಹಾಜರಾಗುವ ಅರ್ಹತೆ ಕಳೆದುಕೊಂಡಿದ್ದರು.
ಇಂತಹ ಮಕ್ಕಳ ಪೈಕಿ ಕಲಾ ವಿಭಾಗದಲ್ಲಿ 7,985 ಮತ್ತು ವಾಣಿಜ್ಯ ವಿಭಾಗದಲ್ಲಿ 4400 ಮಕ್ಕಳಿದ್ದಾರೆ. ಈ ಎರಡು ವಿಭಾಗದ ಒಟ್ಟು 12,385 ಮಕ್ಕಳಿಗೆ ಮೇ 23ರಿಂದ ನಡೆಯುವ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಆಸಕ್ತರು ಮೇ 20ರೊಳಗೆ ತಮ್ಮ ಕಾಲೇಜುಗಳಲ್ಲಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು.
ನೋಂದಾಯಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು ಪಿಯು ಎಕ್ಸಾಂ ಪೋರ್ಟಲ್ ಲಾಗಿನ್ ನಲ್ಲಿ ಕಡ್ಡಾಯವಾಗಿ ಮೇ 20ರಂದು ಸಂಜೆ 7 ಗಂಟೆಯೊಳಗೆ ನವೀಕರಿಸಬೇಕು. ವಿದ್ಯಾರ್ಥಿಗಳಿಂದ ಸ್ವೀಕರಿಸಿದ ಪರೀಕ್ಷಾ ಶುಲ್ಕವನ್ನು ಮೇ 22ರ ಒಳಗೆ ಖಜಾನೆ-2 ಚಲನ್ ಮೂಲಕ ಜಮೆ ಮಾಡಬೇಕು ಎಂದು ತಿಳಿಸಲಾಗಿದೆ.
YuvaBharataha Latest Kannada News