ಮುಂದಿನ ವಿಚಾರಣೆ ವರೆಗೆ ಜ್ಞಾನವಾಪಿ ಮಸೀದಿಯೊಳಗಿನ ʼಶಿವಲಿಂಗʼದ ರಚನೆಯ ಕಾರ್ಬನ್ ಡೇಟಿಂಗಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ :
ವಾರಾಣಸಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾದ ಶಿವಲಿಂಗದ ರೀತಿಯ ಆಕೃತಿಯನ್ನು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಕಾರ್ಬನ್ ಡೇಟಿಂಗ್ ಸಹಿತ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಅಲಹಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಮುಂದಿನ ವಿಚಾರಣೆಯವರೆಗೆ ಶಿವಲಿಂಗದ ರೀತಿಯ ಆಕೃತಿಯ ವೈಜ್ಞಾನಿಕ ಸಮೀಕ್ಷೆ ನಡೆಸದಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದೆ. ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪರ್ದಿವಾಲಾ ಪೀಠದ ಮುಂದೆ ಜ್ಞಾನವಾಪಿ ಮಸೀದಿ ವ್ಯವಸ್ಥಾಪಕ ಸಮಿತಿ ಮೇಲ್ಮನವಿ ಅರ್ಜಿ ಬಂದಾಗ ಅದು ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಷೆ ನೀಡಿತು.
ಭಾರತೀಯ ಪುರಾತತ್ವ ಸಮೀಕ್ಷೆ ಅಧಿಕಾರಿಗಳ ಮೂಲಕ ಅದು ಶಿವಲಿಂಗ ಹೌದೋ ಅಲ್ಲವೋ, ಹಾಗೇನಾದರೂ ಶಿವಲಿಂಗವೇ ಆಗಿದ್ದಲ್ಲಿ ಅದು ಎಷ್ಟು ವರ್ಷ ಹಳೆಯದು ಎಂಬ ಬಗ್ಗೆ ವೈಜ್ಞಾನಿಕ ತನಿಖೆ ಮಾಡಿ ಮಾಹಿತಿ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.
ʼಶಿವಲಿಂಗ’ ರಚನೆಯು, ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ 2022 ರಲ್ಲಿ ವೀಡಿಯೊಗ್ರಾಫಿಕ್ ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿದೆ. ಹಿಂದೂ ಪಕ್ಷಕಾರರು ಇದನ್ನು ಶಿವಲಿಂಗ ಎಂದು ಹೇಳಿದರೆ ಮಸೀದಿ ಸಮಿತಿಯವರು ಇದು ವಜೂಖಾನದ ಕಾರಂಜಿಯಾಗಿದೆ ಎಂದು ಪ್ರತಿಪಾದಿಸಿದ್ದರು.
ಉತ್ತರ ಪ್ರದೇಶದ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಕಾರ್ಬನ್ ಡೇಟಿಂಗ್ ಬದಲಿಗೆ ಇತರ ಕೆಲವು ವೈಜ್ಞಾನಿಕ ಪರೀಕ್ಷೆಗಳನ್ನು ಮಾಡಬೇಕೇ ಎಂದು ನಾವು ಕಂಡುಹಿಡಿಯಬೇಕಾಗಿದೆ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ ಅವರು, ಈ ವಿಷಯಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಈ ರಚನೆಯು ‘ಶಿವಲಿಂಗ’ವೇ ಅಥವಾ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್‌ನ ಆದೇಶಕ್ಕೆ ಪೀಠ ತಡೆ ನೀಡಲಾಗಿದೆ ಎಂದರು.ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 7 ಕ್ಕೆ ನಿಗದಿಪಡಿಸಲಾಗಿದೆ.