2 ಸಾವಿರದ ನೋಟು ವಿತರಣೆ ನಿಲ್ಲಿಸಲು ಬ್ಯಾಂಕ್‌ಗಳಿಗೆ ಸೂಚನೆ
ನವದೆಹಲಿ: ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಘೋಷಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ₹ 2 ಸಾವಿರದ ನೋಟು ವಿತರಣೆ ನಿಲ್ಲಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.
ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಮೇ 23ರಿಂದ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ. ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಆರ್‌ಬಿಐ 2016ರ ನವೆಂಬರ್‌ನಲ್ಲಿ ಚಲಾವಣೆಗೆ ತಂದಿತ್ತು.
₹2,000 ನೋಟು ವಿನಿಮಯಕ್ಕೆ ಇರುವ ನಿಯಮಗಳು?
* ಸಾರ್ವಜನಿಕರು ಒಮ್ಮೆ ₹20,000 ಮೊತ್ತದ ನೋಟುಗಳನ್ನು ವಿನಿಯಮ ಮಾಡಿಕೊಳ್ಳಲು ಅವಕಾಶ ಇದೆ. ಅಂದರೆ ₹2,000 ಮುಖಬೆಲೆಯ 10 ನೋಟುಗಳನ್ನು ಮಾತ್ರ ಬದಲಾವಣೆ ಮಾಡಬಹುದು.
* ಬ್ಯಾಂಕ್ ಖಾತೆ ಹೊಂದಿಲ್ಲದಿದ್ದವರೂ ಕೂಡ ಯಾವುದೇ ಬ್ಯಾಂಕ್‌ನಲ್ಲಿ ಏಕಕಾಲದಲ್ಲಿ ₹2,000 ಮುಖಬೆಲೆಯ 10 ನೋಟುಗಳನ್ನು ವಿನಿಯಮ ಮಾಡಿಕೊಳ್ಳಬಹುದು.
* ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಯಾವುದೇ ಮಿತಿ ಇಲ್ಲ. ₹2,000 ಮುಖಬೆಲೆಯ ಎಷ್ಟು ನೋಟುಗಳನ್ನು ಬೇಕಾದರೂ ಅಕೌಂಟ್ಗೆ ಡೆಪಾಸಿಟ್ ಮಾಡಬಹುದು.