ಶ್ರೀಶೈಲ ಪೀಠದಿಂದ ಶೀಘ್ರದಲ್ಲೇ ಮಹಿಳಾ ವೇದ ಗುರುಕುಲ ಆರಂಭ : ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು
ಯಡೂರ :
ಪ್ರಾಚೀನ ಕಾಲದಿಂದಲೂ ವೇದ, ಆಗಮಗಳ ಅಧ್ಯಯನದಲ್ಲಿ ಮಹಿಳೆಯರಿಗೆ ಅವಕಾಶ, ಪ್ರಾಮುಖ್ಯತೆ ಇದೆ. ವೀರಶೈವ ಧರ್ಮದಲ್ಲಿ ಮಹಿಳೆಯರಿಗೂ ಪುರುಷರಷ್ಟೆ ಸಮಾನ ಸ್ಥಾನವಿದೆ. ಶ್ರೀಶೈಲ ಪೀಠದಿಂದ ಶೀಘ್ರದಲ್ಲೇ ಮಹಿಳೆಯರಿಗಾಗಿಯೇ ಮಹಿಳಾ ವೇದ ಗುರುಕುಲವನ್ನು ಆರಂಭಿಸಲಾಗುವುದು ಎಂದು ಶ್ರೀಶೈಲ ಪೀಠದ ಗಿರಿರಾಜ ಸೂರ್ಯಸಿಂಹಾನಾಧೀಶ್ವರ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಚಿಕ್ಕೊಡಿ ತಾಲೂಕಿನ ಯಡೂರ ಗ್ರಾಮದ ಷಟಷ್ಥಲ ಬ್ರಹ್ಮ ಸಿದ್ದಲಿಂಗ ಶಿವಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಗುರುಕುಲದಲ್ಲಿ ಮೇ 1 ರಿಂದ 30 ರವರೆಗೆ ಆಯೋಜಿಸಿದ್ದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ, ಧರ್ಮದ ಪ್ರತೀಕವಾಗಿರುವ ವೇದಗಳು ಆರಂಭದಿಂದಲೂ ಮಹಿಳೆಯರಿಗೆ ಮುಖ್ಯ ಸ್ಥಾನವನ್ನು ನೀಡಿವೆ. ವೇದಗಳ ರಚನೆ, ವಿಸ್ತರಣೆಯಲ್ಲಿ ಮಹಿಳೆಯರ ಪಾಲು ಇದೆ ಎಂದು ಜಗದ್ಗುರುಗಳು ತಿಳಿಸಿದರು.
ಮಕ್ಕಳಿಗೆ ಆರಂಭಿಕ ಹಂತದಿಂದಲೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ. ಆಸಕ್ತ ಎಲ್ಲರಿಗೂ ವೇದ ಕಲಿಸುವ ಇಚ್ಚೆ ಶ್ರೀ ಪೀಠಕ್ಕಿದ್ದು, ಶೀಘ್ರದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಮಹಿಳಾ ಗುರುಕುಲವನ್ನು ಕೂಡಲಸಂಗಮ ಅಥವಾ ರಾಜ್ಯದ ಒಂದು ಸ್ಥಳದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲ ವಿದ್ಯೆಗಳಲ್ಲಿ ವೇದ ವಿದ್ಯೆ ಪರಮ ಶ್ರೇಷ್ಠವಾಗಿದೆ.
ವೇದಗಳು ಅಪೌರುಷವಾದವು. ಅವು ಪರಮಾತ್ಮನ ಸೃಷ್ಟಿ. ಶಿವನ ಶ್ವಾಸದಿಂದ ವೇದಗಳು ರೂಪಗೊಂಡಿವೆ. ಅನುಭಾವದಿಂದ ಅನುಭವಕ್ಕೆ ಬಂದ ವೇದಗಳನ್ನು ಋಷಿಮುನಿಗಳು ರಚಿಸಿ, ಸಮಾಜಕ್ಕೆ ನೀಡಿದ್ದಾರೆ ಎಂದು ಜಗದ್ಗುರು ಸನ್ನಿಧಿಯವರು ತಿಳಿಸಿದರು.
ಋಷಿಗಳು ವ್ಯಷ್ಟಿ ಪ್ರಜ್ಞೆ ಕಳೆದು, ಸಮಷ್ಟಿ ಪ್ರಜ್ಞೆ ಮೂಡಿಸಿಕೊಂಡಾಗ ವೇದಗಳು ಬರವಣಿಗೆ ಸ್ವರೂಪ ಪಡೆದಿವೆ.ಪ್ರಪಂಚದ ಎಲ್ಲ ಜ್ಞಾನವು ಪರಮಾತ್ಮನಿಂದ ಸೃಷ್ಟಿ ಆಗಿದೆ ಎಂದು ಅವರು ತಿಳಿಸಿದರು.
ಭಾರತವು ವೇದಶಾಸ್ತ್ರದಿಂದ ಜಗತ್ತಿನಲ್ಲಿ ವಿಶಿಷ್ಠವಾಗಿ ಗುರುತಿಸಿ, ಗೌರವಿಸಲ್ಪಡುತ್ತಿದೆ. ಅನೇಕ ಪಾಶ್ಚಿಮಾತ್ಯ ವಿದ್ವಾಂಸರು, ಸಂಶೋಧಕರು ಮತ್ತು ಆಧ್ಯಾತ್ಮಿಕ ಚಿಂತಕರು ವೇದಗಳ ಅಧ್ಯಯನಕ್ಕೆ ಆಸಕ್ತಿ ತೋರಿ, ಭಾರತಕ್ಕೆ ಬಂದಿದ್ದಾರೆ. ವೇದಗಳ ಶ್ರೇಷ್ಠತೆ ಅವರ ಅನುಭವಕ್ಕೂ ಬಂದಿದೆ ಎಂದು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯರು ಹೇಳಿದರು.
ಮಹಾರಾಷ್ಟ್ರದ ನೂಲ ಗ್ರಾಮದ ಗುರುಸಿದ್ದೇಶ್ವರ ಶಿವಾಚಾರ್ಯರು, ಬಾಗಲಕೋಟೆ ಜಿಲ್ಲೆಯ ಕೊಣ್ಣೂರ ಗ್ರಾಮದ ವಿಶ್ವಪ್ರಭುದೇವ ಶಿವಾಚಾರ್ಯರು ಮತ್ತು ಚಿಟಗುಪ್ಪಾದ ಮರುಳಾರಾದ್ಯ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ವೇದಪಾಠ ಶಾಲೆ, ಗುರುಕುಲದ ಪ್ರಾಚಾರ್ಯ ಶ್ರೀಶೈಲ ಹಿರೇಮಠ ಗುರುಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಡೂರ ವೀರಭದ್ರೇಶ್ವರ ದೇವಸ್ಥಾನದ ವ್ಯವಸ್ಥಾಪಕ ಅಡವಯ್ಯ ಅರಳಿಕಟ್ಟಿಮಠ ಉಪಸ್ಥಿತರಿದ್ದರು.
ಶಿಬಿರಾರ್ಥಿ ಪುಟ್ಟ ಬಾಲಕಿ ಸಮೃದ್ದಿ ಶಾಂತಾಪುರಮಠ ಪ್ರಾರ್ಥಿಸಿದಳು. ನಿಪ್ಪಾಣಿಯ ಶಿಬಿರಾರ್ಥಿ ಯಶಸ್ವಿನಿ ಹಿರೇಮಠ ಸ್ವಾಗತಿಸಿದಳು.
ಶಿಬರದ ಮಹಿಳಾ ನಿರ್ದೇಶಕಿ ಪ್ರೊ. ಶೀಲಾ ಚರಂತಿಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ವೈದಿಕ ಶಿಬಿರಾರ್ಥಿಗಳು, ಪಾಲಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳು ವೇದಗಳಲ್ಲಿ ಮಹಿಳೆಯರ ಹಕ್ಕುಗಳು ಕುರಿತು ಕಿರುನಾಟಕ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಪ್ರಸಕ್ತ ಸಾಲಿನ ವೈದಿಕ ಶಿಬಿರದಲ್ಲಿ ಪ್ರಥಮ ಬಾರಿಗೆ 50 ಕ್ಕೂ ಹೆಚ್ಚು ವಿದ್ಯಾರ್ಥಿನೀಯರಿಗೆ ಒಂದು ತಿಂಗಳ ಕಾಲ ವೀರಶೈವ ಧರ್ಮದ ಪೂಜಾ ವಿಧಿವಿಧಾನ, ಮಂತ್ರ, ಶ್ಲೋಕ ಸಮೇತ ರುದ್ರ, ನಮಕ, ಚಮಕಗಳನ್ನು ಕಲಿಸಿ ವೈದಿಕ ಸಂಸ್ಕಾರವನ್ನು ನೀಡಲಾಗಿದೆ.
ಒಂದು ತಿಂಗಳ ಕಾಲ ಜರುಗಿದ ವೈದಿಕ ಶಿಬಿರದಲ್ಲಿ ರಾಯಚೂರ, ಬೀದರ, ಕೊಪ್ಪಳ, ಧಾರವಾಡ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 380 ಕ್ಕೂ ಹೆಚ್ಚು ಗಂಡು ಮಕ್ಕಳಿಗೆ ತರಬೇತಿ ನೀಡಲಾಯಿತು.