ಪಠ್ಯ ಪರಿಷ್ಕರಣೆಗೆ ತಾತ್ಕಾಲಿಕ ಸಮಿತಿ ರಚಿಸಿ ಲೋಪದೋಷ ಸರಿಪಡಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು :
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ ವಿಚಾರವಾಗಿ ಉಂಟಾಗಿದ್ದ ಗೊಂದಲ ಬಗೆಹರಿಸುವಂತೆ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳ ಜೊತೆ ಮಂಗಳವಾರ ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಈ ಸಾಲಿನ ಮಟ್ಟಿಗೆ ವಿವಾದಿತ ಹಾಗೂ ಆಕ್ಷೇಪಣೆಗಳಿರುವ ಪಾಠಗಳ ಬೋಧನೆ, ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ತಾತ್ಕಾಲಿಕ ಪಠ್ಯ ಪರಿಷ್ಕರಣೆ ಸಮಿತಿ ರಚನೆ ಮಾಡುವಂತೆ ಸೂಚಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 1 ರಿಂದ 10ನೇ ತರಗತಿ ವರೆಗೆ ಪಠ್ಯ ಪರಿಷ್ಕರಣೆ ಮಾಡಲಾಗಿತ್ತು. ಈ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ ಉಂಟಾದ ಲೋಪದೋಷ ಹಾಗೂ ಗೊಂದಲ ಸರಿಪಡಿಸುವಂತೆ ಅವರು ತಾತ್ಕಾಲಿಕ ಸಮಿತಿಗೆ ಸೂಚನೆ ನೀಡಿದ್ದಾರೆ.
ಇನ್ನೊಂದು ವಾರದಲ್ಲಿ ಪಠ್ಯ ಪರಿಷ್ಕರಣೆ ಲೋಪದೋಷ ಸಂಬಂಧ ವರದಿ ಕೊಡುವಂತೆ ತಾತ್ಕಾಲಿಕ ಸಮಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಹೊಸ ಪಾಠಗಳ ಸೇರ್ಪಡೆ ಇಲ್ಲ, ಕಳೆದ ವರ್ಷ ಸೇರಿಸಲಾಗಿದ್ದ ಪಾಠಗಳಿಗೆ ಕೆಲವು ಪಾಠಗಳಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಈ ವಿಚಾರವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರವೇ ಅದನ್ನು ಪ್ರಕಟಿಸುವ ಸಾಧ್ಯತೆಯಿದೆ.