ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ
ಮುಂಬೈ:
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಲಾಗಿದೆ.
ಶರದ್ ಪವಾರ್ ಅವರು 1999 ರಲ್ಲಿ ಪಿ.ಎ. ಸಂಗ್ಮಾ ಅವರ ಜೊತೆ ಸೇರಿ ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದಲ್ಲಿ ಈ ಘೋಷಣೆ ಮಾಡಲಾಯಿತು.
ಸುಪ್ರಿಯಾ ಸುಳೆ ಅವರನ್ನು ಎನ್‌ಸಿಪಿಯ ಕೇಂದ್ರ ಚುನಾವಣಾ ಸಮಿತಿಯ ಮುಖ್ಯಸ್ಥರನ್ನಾಗಿಯೂ ಮಾಡಲಾಗಿದೆ.
ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಮಹಿಳೆ, ಯುವಜನತೆ ಮತ್ತು ಲೋಕಸಭೆ ಸಮನ್ವಯದ ಜವಾಬ್ದಾರಿಯನ್ನು ನೀಡಲಾಗಿದ್ದು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗೋವಾವನ್ನು ಪ್ರಫುಲ್ ಪಟೇಲ್ ನೋಡಿಕೊಳ್ಳಲಿದ್ದಾರೆ. ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.
ಎನ್‌ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ತಟ್ಕರೆ ಅವರಿಗೆ ಒಡಿಶಾ, ಪಶ್ಚಿಮ ಬಂಗಾಳ, ರೈತರು ಮತ್ತು ಅಲ್ಪಸಂಖ್ಯಾತರ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ನಂದ ಶಾಸ್ತ್ರೀ ಅವರು ದೆಹಲಿ ಎನ್‌ಸಿಪಿ ಮುಖ್ಯಸ್ಥರು ಎಂದು ಶರದ್ ಪವಾರ್ ಘೋಷಿಸಿದೆ.
ಘೋಷಣೆಯ ನಂತರ, ಸುಪ್ರಿಯಾ ಸುಳೆ ಅವರು ಪಕ್ಷವು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಎಂದು ಹೇಳಿದರು.
ಎನ್‌ಸಿಪಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಾನು ಮತ್ತು ಪ್ರಫುಲ್ ಪಟೇಲ್ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದೇವೆ. ಇದಕ್ಕಾಗಿ ಪಕ್ಷ ಸಂಘಟನೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪಕ್ಷವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಎನ್‌ಸಿಪಿ ನಾಯಕರು, ಕಾರ್ಯಕರ್ತರು ಮತ್ತು ಹಿತೈಷಿಗಳು ಈ ಹಿಂದೆ ಉತ್ತಮ ಬೆಂಬಲವನ್ನು ಪಡೆದಿದ್ದೇನೆ ಮತ್ತು ಇದು ಭವಿಷ್ಯದಲ್ಲಿ ಮುಂದುವರಿಯುತ್ತದೆ. ಈ ಜವಾಬ್ದಾರಿಗಾಗಿ ಪವಾರ್ ಸಾಹೇಬ್, ಪದಾಧಿಕಾರಿಗಳು, ಹಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. .
ಶರದ್ ಪವಾರ್ ಕಳೆದ ತಿಂಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ಅದರ ನಂತರ ಪಕ್ಷದ ಸದಸ್ಯರು ಹಾಗೂ ಭಾವೋದ್ವೇಗಕ್ಕೆ ಒಳಗಾದ ಪಕ್ಷದ ಕಾರ್ಯಕರ್ತರು ಅವರ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರಿಂದ ಪವಾರ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದಿದ್ದರು. ಪವಾರ್ ಅವರ ಪ್ರಸ್ತಾಪವನ್ನು ಚರ್ಚಿಸಲು ರಚಿಸಲಾದ ಎನ್‌ಸಿಪಿ ಸಮಿತಿಯು ಮೇ 5 ರಂದು ಅವರ ರಾಜೀನಾಮೆಯನ್ನು ತಿರಸ್ಕರಿಸಿತು ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿತು.
ಶರದ್ ಪವಾರ್ ಅವರ ಅಣ್ಣನ ಮಗ ಅಜಿತ್ ಪವಾರ್ ಅವರಿಗೆ ಯಾವುದೇ ಜವಾಬ್ದಾರಿಯನ್ನು ವಹಿಸಲಾಗಿಲ್ಲ. ಆದರೆ, ಅಜಿತ್ ಪವಾರ್ ಈ ಘೋಷಣೆಯಿಂದ ಅಸಮಾಧಾನಗೊಂಡಿಲ್ಲ ಮತ್ತು ತನು ಮಹಾರಾಷ್ಟ್ರಕ್ಕಾಗಿ ಕೆಲಸ ಮಾಡಲು ಬಯಸಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಅಜಿತ್ ಪವಾರ್ ಅಭಿನಂದಿಸಿದ್ದಾರೆ.