ಶಕ್ತಿ ಯೋಜನೆಯಡಿ ಮುಂಗಡ ಆಸನ ಕಾಯ್ದಿರಿಸಲು ಅವಕಾಶ

ಬೆಂಗಳೂರು :
ರಾಜ್ಯಾದ್ಯಂತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ ಯೋಜನೆ’ಗೆ ಭಾನುವಾರ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಶಕ್ತಿ ಯೋಜನೆಯ ಸೌಲಭ್ಯವನ್ನು ಪ್ರತಿನಿತ್ಯ 41.81 ಲಕ್ಷ ಮಹಿಳೆಯರು (11.58 ಲಕ್ಷ ಪಾಸ್ ಪ್ರಯಾಣಿಕರು ಸೇರಿದಂತೆ) ಪಡೆಯಲಿದ್ದಾರೆ ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ.
ಮುಂಗಡ ಬುಕಿಂಗ್ ಸೌಲಭ್ಯವಿರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸುವ ಅವಕಾಶವನ್ನು ಸಾರಿಗೆ ಇಲಾಖೆ ಕಲ್ಪಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕೆಎಸ್ ಆರ್‌ಟಿಸಿ ಮುಂಗಡ ಬುಕ್ಕಿಂಗ್ ಸೌಲಭ್ಯವಿರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಿ, ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ.
ಸೇವಾಸಿಂಧು ತಂತ್ರಾಂಶದ ಮೂಲಕ ಜೂನ್ 15ರಿಂದ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಮುಂದಿನ ಮೂರು ತಿಂಗಳೊಳಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.
ಯೋಜನೆಯ ಪ್ರಮುಖ ಅಂಶಗಳು :
ರಾಜ್ಯದೊಳಗೆ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯ, ಅಂತರರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಆದಾಗ್ಯೂ ಅಂತಾರಾಜ್ಯ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳಲ್ಲಿ ರಾಜ್ಯದ ಗಡಿವರೆಗೂ ಪ್ರಯಾಣಿಸಹುದು.
ರಾಜ್ಯದ 6308 ನಗರ, 5958 ಸಾಮಾನ್ಯ ಹಾಗೂ 6343 ವೇಗದೂತ ಬಸ್ಸುಗಳಲ್ಲಿ (ಒಟ್ಟು 18,609 ಬಸ್ಸುಗಳಲ್ಲಿ) ಪ್ರಯಾಣಿಸಬಹುದು. ಐಷಾರಾಮಿ ಸಾರಿಗೆಗಳಲ್ಲಿ ಈ ಸೌಲಭ್ಯವಿಲ್ಲ.
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆವರೆಗೂ ಗುರುತಿನ ಚೀಟಿ ತೋರಿಸಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.
ಗುರುತಿನ ಚೀಟಿ ಪರಿಶೀಲಿಸಿ, ಶೂನ್ಯ ಟಿಕೆಟ್ ವಿತರಿಸಲಾಗುತ್ತದೆ. ಈ ವೇಳೆ ಇಟಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ಮ್ಯಾನ್ಯುವಲ್ ರೀತಿ ಟಿಕೆಟ್ ವಿತರಿಸಲಾಗುತ್ತದೆ.
ಇಟಿಎಂ ತಂತ್ರಾಂಶದಲ್ಲಿ ಉಚಿತ ಟಿಕೆಟ್ ವಿತರಿಸಲು ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಪ್ರಸಕ್ತ ವರ್ಷದಲ್ಲಿ ನಾಲ್ಕೂ ನಿಗಮಗಳು ಸೇರಿ ಒಟ್ಟು 1894 ಹೊಸ ವಾಹನಗಳನ್ನು ಸೇರ್ಪಡೆ ಮಾಡಲು ಸರ್ಕಾರ ಯೋಜಿಸಿದೆ.
ಕೆಲವೊಂದು ಮಾರ್ಗಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದಲ್ಲಿ ಬಸ್ಸುಗಳ ಬೇಡಿಕೆ ಅಧಿಕವಾಗುವ ಸಾಧ್ಯತೆ ಮನಗಂಡು, ಅಂತಹ ವೇಳೆ ಬಸ್ಸುಗಳ ಕೊರತೆ ನೀಗಿಸಲು ಅನುಸೂಚಿತ ವೇಳಾಪಟ್ಟಿ/ಮಾರ್ಗ ಪರಿಷ್ಕರಣೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
YuvaBharataha Latest Kannada News