Breaking News

ವಿದ್ಯಾರ್ಥಿಗೆ ಸಹಾಯ ಮಾಡಿದ ಕೆ.ಎಲ್.ರಾಹುಲ್

Spread the love

ವಿದ್ಯಾರ್ಥಿಗೆ ಸಹಾಯ ಮಾಡಿದ ಕೆ.ಎಲ್.ರಾಹುಲ್

ಬಾಗಲಕೋಟೆ : ಮಹಾಲಿಂಗಪುರದ ಬಡ ವಿದ್ಯಾರ್ಥಿ ಅಮೃತ ಮಾವಿನಕಟ್ಟಿ ವಿದ್ಯಾಭ್ಯಾಸಕ್ಕೆ ಭಾರತೀಯ ತಂಡದ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಅವರು ಸಹಕಾರ ನೀಡುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಮಹಾಲಿಂಗಪುರದ ಅಯೋಧ್ಯ ನಗರದ ನಿವಾಸಿ ಅಮೃತ ದಾನಪ್ಪ ಮಾವಿನಕಟ್ಟಿ ಹಾಗೂ ಮತ್ತೊರ್ವ ಸಹೋದರ ಅಮಿತ್‌ ದಶಕದ ಹಿಂದೆ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದರು. ಆಗ ದೊಡ್ಡಪ್ಪ ಶ್ರೀಶೈಲ ವೀರಸಂಗಪ್ಪ ಸಬರದ ಮತ್ತು ಧರ್ಮಪತ್ನಿ ಶೋಭಾ ಎರಡು ಮಕ್ಕಳ ಶಿಕ್ಷಣದ ಜೊತೆಗೆ ಅವರ ಬದುಕಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಅದರಂತೆ ಅವರಿಗೆ ತಮಗೆ ದೊರಕುವ ಅಲ್ಪ ಸಂಬಳದಲ್ಲಿ ಪಿಯುಸಿ ಎರಡನೇ ವರ್ಷದವರೆಗೆ ಶಿಕ್ಷಣವನ್ನು ಕೊಡಿಸುತ್ತಾರೆ. ಆತ ಎಸ್‌ಆರ್‌ಎ ಕಾಲೇಜ್‌ನಲ್ಲಿ ಕಾಮರ್ಸ್‌ ದ್ವಿತೀಯ ವರ್ಷವನ್ನು ಪೂರೈಸಿ 600 ಅಂಕಗಳ ಪೈಕಿ 571 ಅಂಕ ಪಡೆಯುತ್ತಾನೆ.

 

ಇವನ ಸಾಧನೆಯನ್ನು ಗಮನಿಸಿದ ಪೋಷಕರು ಹೆಚ್ಚಿನ ವ್ಯಾಸಂಗ ಮಾಡಿಸುವ ನಿಟ್ಟಿನಲ್ಲಿ ಯೋಚಿಸುತ್ತಾರೆ. ಮುಂದಿನ ಬಿಕಾಂ ಜೊತೆ ಸಿಎ ಅಧ್ಯಯನವಿರುವ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಭೂಮರೆಡ್ಡಿ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಅಣಿಯಾದಾಗ ಅಲ್ಲಿಯ ಶಿಕ್ಷಣ ಶುಲ್ಕ ಹೊರೆ ಎನಿಸುತ್ತದೆ. ಆಗ ಕೈಯಲ್ಲಿರುವ ಅಲ್ಪ ಹಣವನ್ನು ತೆಗೆದುಕೊಂಡು ಮತ್ತೆ ಊರಿಗೆ ಮರಳುತ್ತಾರೆ.

ಆಗ ಸಹೋದರನ ಗೆಳೆಯ ನಿತೀನ ಸಹಕಾರದಿಂದ ಹುಬ್ಬಳ್ಳಿಯಲ್ಲಿರುವ ಸಮಾಜ ಸೇವಕ ರಾಜಕೀಯ ಧುರೀಣರಾದ ಮಂಜುನಾಥ ಹೆಬ್ಸೂರ್‌ ಮೂಲಕ ಭಾರತೀಯ ತಂಡದ ಖ್ಯಾತ ಕ್ರಿಕೆಟಿಗರಾದ ಕೆ ಎಲ್‌. ರಾಹುಲ್‌ ಅವರನ್ನು ಸಂಪರ್ಕ ಮಾಡಿದಾಗ ರಾಹುಲ್‌ ಸ್ಪಂದಿಸಿ ವಿದ್ಯಾರ್ಥಿಯ ಶಿಕ್ಷಣಕ್ಕೆ .75 ಸಾವಿರ ನೀಡಿ, ಮುಂದಿನ ಮೂರು ವರ್ಷದ ಶುಲ್ಕ ಭರಿಸುವ ವಾಗ್ದಾನ ಮಾಡಿದ್ದಾರೆ.

 

ಹುಬ್ಬಳ್ಳಿಯ ಮಂಜುನಾಥ್ ಹೆಬ್ಸೂರ್‌ ಸಾಮಾಜಿಕವಾಗಿ ನೊಂದ ಜೀವಗಳಿಗೆ ಆಸರೆಯಾಗುವಂತ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಕೊರೋನಾ ಕಾಲದಲ್ಲಿ ಸ್ವತಃ .8 ಲಕ್ಷ ಮತ್ತು ಇನ್ನಿತರ ದಾನಿಗಳಿಂದ ಬಂದ ಹಣದಿಂದ 38 ದಿವಸಗಳವರೆಗೆ ಹುಬ್ಬಳ್ಳಿ ಮತ್ತು ಧಾರವಾಡ ತಾಲೂಕು ಭಾಗಗಳ ಪ್ರದೇಶಗಳಲ್ಲಿ ಆಹಾರ ಮತ್ತು ಔಷಧಿ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯದಿಂದ ಪ್ರಖ್ಯಾತಿ ಪಡೆದ ಇವರಿಗೆ ಭಾರತೀಯ ತಂಡದ ಅನೇಕ ಖ್ಯಾತನಾಮ ಕ್ರಿಕೆಟ್‌ ಆಟಗಾರರಾದ ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ, ಮಹಿಳಾ ತಂಡದ ವೇದಾ ಕೃಷ್ಣಮೂರ್ತಿ ಕೂಡ ಚಿರಪರಿಚಿತರಾಗಿ ಇಂತಹ ಪುಣ್ಯ ಕಾರ್ಯದಲ್ಲಿ ಅವರೂ ಹಣ ಒದಗಿಸಿದ್ದಾರೆ.

ನಾನು ಎಸ್ಸೆಸ್ಸೆಲ್ಸಿನಲ್ಲಿ ಶೇ.96 ಅಂಕ ಪಡೆದುಕೊಂಡಿದ್ದೇನೆ. ಉತ್ತಮ ರೀತಿಯಲ್ಲಿ ಓದಬೇಕು ಎಂಬ ಹಂಬಲದಿಂದ ಹುಬ್ಬಳ್ಳಿಯ ಕೆಎಲ್‌ಇ ಭೂಮರೆಡ್ಡಿ ಕಾಲೇಜಿನಲ್ಲಿ ಬಿಕಾಂಗೆ ಪ್ರವೇಶ ಬಯಸಿದ್ದೆ. ಆದರೆ, ಶಾಲೆಯ ಅಷ್ಟು ಶುಲ್ಕ ತುಂಬಲು ಸಾಧ್ಯವಾಗಿರಲಿಲ್ಲ. ಈ ಮಾಹಿತಿಯನ್ನು ಅಣ್ಣನಿಗೆ ತಿಳಿಸಿದಾಗ ಅಣ್ಣನ ಸ್ನೇಹಿತರು ಕೆ.ಎಲ್‌.ರಾಹುಲ್‌ ಅವರನ್ನು ಸಂಪರ್ಕಿಸಿದ್ದಾರೆ. ಕೆ.ಎಲ್‌.ರಾಹುಲ್‌ ಅವರು ನನ್ನ ಬ್ಯಾಂಕ್‌ ಖಾತೆ .75 ಸಾವಿರ ಹಣ ಸಂದಾಯ ಮಾಡಿದ್ದಾರೆ. ಹೀಗಾಗಿ ರಾಹುಲ್‌ ಹಾಗೂ ಅಣ್ಣನ ಸ್ನೇಹಿತರಿಗೂ ನಾನು ಆಭಾರಿ ಎಂದು ಕೆ.ಎಲ್‌.ರಾಹುಲ್‌ರಿಂದ ಸಹಾಯ ಪಡೆದ ವಿದ್ಯಾರ್ಥಿ ಅಮೃತ ಪ್ರತಿಕ್ರಿಯಿಸಿದ್ದಾರೆ.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

4 × one =