ವಿದ್ಯುತ್ ಬಳಕೆ ಕುರಿತು ಮಾಹಿತಿ ಪಡೆಯಿರಿ
ಯುವ ಭಾರತ ಸುದ್ದಿ ಬೆಂಗಳೂರು :
ಪ್ರತಿ ತಿಂಗಳು ವಿದ್ಯುತ್ ಬಿಲ್ ನೋಡಿದಾಗೆಲ್ಲ ಅನೇಕರು ಟೆನ್ಷನ್ ಆಗುವುದು ಸಾಮಾನ್ಯ. ಬಿಲ್ ಬರುವವರೆಗೆ ಎಷ್ಟು ವಿದ್ಯುತ್ ಬಳಸಲಾಗಿದೆ ಎಂಬುದನ್ನು ನೀವು ತಿಳಿಯಬೇಕೆ ?
ಇನ್ಮುಂದೆ ಎಷ್ಟು ವಿದ್ಯುತ್ ಬಳಸಿದ್ದೀರ ಎಂಬುದನ್ನು ಪ್ರತಿದಿನ ಚೆಕ್ ಮಾಡಬಹುದು.
ಕರ್ನಾಟಕದಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಇರೋದ್ರಿಂದ ರಾಜ್ಯದ ಜನರಿಗೆ ಇದರಿಂದ ತುಂಬಾನೆ ಸಹಾಯವಾಗಬಹುದು.
ಜಗತ್ತು ವೇಗವಾಗಿ ಬದಲಾಗುತ್ತಿರುವಾಗ ಎಲ್ಲವೂ ಸ್ಮಾರ್ಟ್ ತಂತ್ರಜ್ಞಾನದೊಂದಿಗೆ ಬರುತ್ತಿದೆ. ವಿದ್ಯುತ್ ಬಳಕೆಯ ವಿಷಯದಲ್ಲಿ, ರಾಜ್ಯ ಸರ್ಕಾರಗಳು ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್‌ಗಳನ್ನು ತರುತ್ತಿವೆ. ಇದು ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವುದರಿಂದ ಅಂರ್ತಜಾಲದ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್ ಅಳವಡಿಸಿಕೊಂಡವರು ಸ್ಮಾರ್ಟ್ ಮೊಬೈಲ್‌ನಲ್ಲಿ ನಿಮ್ಮ ಮನೆಯಲ್ಲಿ ಅಥವಾ ಆಫೀಸ್‌ನಲ್ಲಿ ಎಷ್ಟು ವಿದ್ಯುತ್ ಬಳಸಿದ್ದಾರೆ ಮತ್ತು ಬಳಕೆಗೆ ಎಷ್ಟು ವಿದ್ಯುತ್ ಉಳಿದಿದೆ, ಪ್ರಿಪೇಯ್ಡ್ ಬ್ಯಾಲೆನ್ಸ್ ಎಷ್ಟು ಎಂಬುದರ ಬಗ್ಗೆ ತಿಳಿಯಲು ಸಾಧ್ಯವಾಗುವಂತೆ ಮಾಡಲು ಕೇಂದ್ರ ವಿದ್ಯುತ್ ಇಲಾಖೆ ನಿರ್ಧರಿಸಿದೆ.
ಕೇಂದ್ರ ವಿದ್ಯುತ್ ಇಲಾಖೆ ಈ ಕುರಿತು ಗುರುವಾರ ಅಧಿಸೂಚನೆ ಹೊರಡಿಸಿದ್ದು, ಅದರನ್ವಯ ಡಿಸ್ಕಾಂಗಳು ಸ್ಮಾರ್ಟ್ ಮೀಟರ್ ಗಳನ್ನು ಪ್ರತಿದಿನ ರಿಮೋಟ್ ಮೂಲಕ ಪರಿಶೀಲಿಸುವಂತೆ ಮಾಡಿದೆ. ಆದ್ದರಿಂದ ಡಿಸ್ಕಾಂಗಳ ಬಳಿ ಇರುವ ಸ್ಮಾರ್ಟ್ ಮೀಟರ್‌ಗಳ ಡೇಟಾವನ್ನು ಪ್ರತಿದಿನ ನವೀಕರಿಸಲಾಗುತ್ತದೆ. ಆ ಡೇಟಾವನ್ನು ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಇರಿಸಬಹುದು ಇಲ್ಲವೇ SMS ಮೂಲಕ ಕಳುಹಿಸಬೇಕು. ಡಿಸ್ಕಾಂಗಳು ಹೀಗೆ ಮಾಡಿದರೆ ಗ್ರಾಹಕರು ಪ್ರತಿದಿನ ಎಷ್ಟು ವಿದ್ಯುತ್ ಬಳಸಿದ್ದಾರೆ, ಇನ್ನೂ ಎಷ್ಟು ಬಳಸಬಹುದು, ಎಷ್ಟು ಬ್ಯಾಲೆನ್ಸ್ ಉಳಿದಿದೆ, ದಿನಕ್ಕೆ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಮುಂತಾದ ಸಂಪೂರ್ಣ ವಿವರಗಳನ್ನು ಗ್ರಾಹಕರು ತಿಳಿದುಕೊಳ್ಳಬಹುದು.
ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್ ಫ್ರೀ ಎಂದು ಘೋಷಣೆ ಮಾಡಿರುವುದರಿಂದ ಇನ್ನುಂದೆ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಲು ಈ ತಂತ್ರಜ್ಞಾನ ಬಳಕೆ ಬೆಸ್ಟ್. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಯೋಜನೆ ಕೂಡ ಪ್ರಮುಖವಾದದ್ದು. ಇತ್ತೀಚೆಗೆ ಈ ಯೋಜನೆಯ ವಿಚಾರ ಸರ್ಕಾರ ಹೊರ ಹಾಕಿತ್ತು.