ಕೆಎಂಎಫ್ ನೂತನ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಪ್ತ ಭೀಮಾ ನಾಯಕ ಅವಿರೋಧ ಆಯ್ಕೆ
ಯುವ ಭಾರತ ಸುದ್ದಿ ಬೆಂಗಳೂರು :
ಕೆಎಂಎಫ್ ನೂತನ ಅಧ್ಯಕ್ಷರಾಗಿ ಭೀಮಾ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಭೀಮಾ ನಾಯಕ ಹಗರಿ ಬೊಮ್ಮನಹಳ್ಳಿ ಮಾಜಿ ಶಾಸಕರಾಗಿದ್ದಾರೆ.
ಹಾಲಿ ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶ ಇದ್ದರೂ ಹೊಸ ಅಧ್ಯಕ್ಷರ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಇಂದು ನಡೆದ ಚುನಾವಣೆಯಲ್ಲಿ ಭೀಮಾ ನಾಯಕ ಅವರ ಅವಿರೋಧ ಆಯ್ಕೆ ನಡೆದಿದೆ.
ರಾಜ್ಯದಲ್ಲಿ ಸರ್ಕಾರದ ಬದಲಾವಣೆ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಇಂದು, ಬುಧವಾರ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿ ಮಾಡಲಾಗಿತ್ತು. ಭೀಮಾ ನಾಯ್ಕ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯಾರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದ ಕಾರಣ ಭೀಮ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಅವಧಿ 11 ತಿಂಗಳು ಮಾತ್ರ ಇದ್ದು ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಭೀಮನಾಯಕ ಹಗರಿಬೊಮ್ಮನಹಳ್ಳಿ ಮತಕ್ಷೇತ್ರದಲ್ಲಿ ಪರಾಭವ ಗೊಂಡಿದ್ದರು. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಮಾಲೂರು ಶಾಸಕ ನಂಜೇಗೌಡ ಅವರು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇದ್ದರು. ಸಿದ್ದರಾಮಯ್ಯ ಅವರ ಆಪ್ತರಾಗಿ ಭೀಮನಾಯಕ ಗುರುತಿಸಿಕೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮನಾಯಕ, ನಂದಿನಿ ಹಾಲಿನ ದರ ಐದು ರೂಪಾಯಿ ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ. ಹಾಲಿನ ದರ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇವೆ. ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಎಲ್ಲಾ ಹಾಲು ಒಕ್ಕೂಟಗಳು ಐದು ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ದರ ಹೆಚ್ಚಿಸುವುದಲ್ಲದೆ ಗುಣಮಟ್ಟದ ಹಾಲು, ಮೊಸರು, ತುಪ್ಪ ಗ್ರಾಹಕರಿಗೆ ಒದಗಿಸಲು ಆದ್ಯತೆ ನೀಡಲಿದ್ದೇವೆ ಎಂದು ತಿಳಿಸಿದರು.