ಹೊಸ ಶಾಸಕರಿಗೆ ಇಂದಿನಿಂದ ತರಬೇತಿ
ಬೆಂಗಳೂರು:
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸಂಸದೀಯ ಕಲಾಪದ ಕುರಿತು ಅರಿವು ಮೂಡಿಸಲು ನೆಲಮಂಗಲದಲ್ಲಿರುವ ‘ಕ್ಷೇಮವನ’ದಲ್ಲಿ (ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸಸ್) ಸೋಮವಾರದಿಂದ (ಜೂನ್ 26) ಮೂರು ದಿನ ತರಬೇತಿ ಶಿಬಿರ ನಡೆಯಲಿದೆ.
ಶಿಬಿರವನ್ನು 26ರಂದು ಬೆಳಿಗ್ಗೆ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿರಲಿದ್ದಾರೆ.
ಮೂರೂ ದಿನ ಬೆಳಿಗ್ಗೆ 6ರಿಂದ 9ರವರೆಗೆ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಯಲಿದೆ. 10ರಿಂದ ಸಂಜೆಯವರೆಗೆ ಹಿರಿಯ ಸದಸ್ಯರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಕಲಾಪದಲ್ಲಿ ಭಾಗವಹಿಸುವಿಕೆ, ನಿಲುವಳಿ ಸೂಚನೆ, ನಿಯಮ-69, ವಿಶ್ವಾಸ ಮತ್ತು ಅವಿಶ್ವಾಸ ನಿರ್ಣಯ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾರ್ಗದರ್ಶನ ನೀಡಲಿದ್ದಾರೆ.
ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸನ ರಚನೆ ಹಾಗೂ ಅದರಲ್ಲಿ ಸದಸ್ಯರುಗಳ ಭಾಗವಹಿಸುವಿಕೆ ಮತ್ತು ಉಭಯ ಸದನಗಳ ಸಂಬಂಧ ಕುರಿತು ಮಾತನಾಡಲಿದ್ದಾರೆ. ಟಿ.ಬಿ.ಜಯಚಂದ್ರ ಅವರು ಶಾಸಕರ ಕರ್ತವ್ಯಗಳು, ಜವಾಬ್ದಾರಿ ಮತ್ತು ಹಕ್ಕುಬಾಧ್ಯತೆಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರು ಸದಸ್ಯರು ಅಳವಡಿಸಿಕೊಳ್ಳಬೇಕಾದ ನೀತಿ ನಿಯಮಗಳು, ಪಾಲಿಸಬೇಕಾದ ನಿಯಮಗಳು ಸಂಸದೀಯ ಭಾಷೆಯ ಬಳಕೆ ಮತ್ತು ಜನ ಮೆಚ್ಚಿದ ಶಾಸಕನಾಗುವುದು ಹೇಗೆ ಎಂದು ತಿಳಿಸಿಕೊಡಲಿದ್ದಾರೆ. ಶಾಸನ ಸಭೆಯಲ್ಲಿ ಕರ್ತವ್ಯದ ಹಾಸ್ಯ ಭರಿತ ನಿರ್ವಹಣೆ ಕುರಿತು ‘ಮುಖ್ಯಮಂತ್ರಿ’ ಚಂದ್ರು ತಿಳಿಸಿಕೊಡಲಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಸಂವಾದ ನಡೆಸಲಿದ್ದಾರೆ.
ಮೊದಲ ದಿನ ಸಂಜೆ ಬ್ರಹ್ಮಕುಮಾರೀಸ್ ಸಂಸ್ಥೆಯ ಬಿ.ಕೆ.ವೀಣಾ ಮತ್ತು ಬಿ.ಕೆ.ಭುವನೇಶ್ವರಿ ‘ಹಿತವಚನ’ ನೀಡಲಿದ್ದಾರೆ. ‘ಸಾಮರಸ್ಯ ಸಮಾಜ’ ವಿಷಯದ ಕುರಿತು 27ರಂದು ಸಂಜೆ ಡಿ.ವೀರೇಂದ್ರ ಹೆಗ್ಗಡೆ, ಕೊನೆಯ ದಿನ ಬೆಳಿಗ್ಗೆ ‘ಜನಪ್ರತಿನಿಧಿ ಮತ್ತು ಜನರ ಮಧ್ಯೆ ಸಂಬಂಧ/ ಬಾಂಧವ್ಯವನ್ನು ವೃದ್ಧಿಗೊಳಿಸುವುದು’ ವಿಷಯದ ಕುರಿತು ಜಮಾತೆ ಇಸ್ಲಾಮಿ ಹಿಂದ್‌ನ ಮಹಮ್ಮದ್ ಕುಂಞಿ ಮಾತನಾಡಲಿದ್ದಾರೆ.