ಪ್ರತಿಪಕ್ಷ ನಾಯಕನ ಆಯ್ಕೆಗೆ ಕಸರತ್ತು
ಬೆಂಗಳೂರು :
ಮುಂದಿನ ವಾರ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕೊನೆ ಕ್ಷಣದ ಕಸರತ್ತು ನಡೆದಿದೆ.
ಮೂರ್ನಾಲ್ಕು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆಯಿದ್ದು, ಅಂತಿಮವಾಗಿ ಯಾರ ಹೆಗಲಿಗೆ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಬೀಳಲಿದೆ ಎಂಬುದು ಸ್ಪಷ್ಟವಾಗಲಿದೆ.
ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಸ್ಥಾನ ಎರಡೂ ಒಂದಕ್ಕೊಂದು ತಳಕು ಹಾಕಿಕೊಂಡಿರುವುದರಿಂದ ಜಾತಿ ಸಮೀಕರಣದ ಲೆಕ್ಕಾಚಾರ ನಡೆಯುತ್ತಿದೆ. ಲಿಂಗಾಯತ, ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗದ (ಒಬಿಸಿ) ಪೈಕಿ ಒಂದು ಸಮುದಾಯದ ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ನೀಡುವ ಸಾಧ್ಯತೆಯಿದೆ.
ಈ ಪೈಕಿ ಸದ್ಯಕ್ಕೆ ಆರು ಮಂದಿ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಒಬಿಸಿ ಸಮುದಾಯದಿಂದ ವಿ.ಸುನೀಲ್‌ಕುಮಾರ್ ಅವರ ಹೆಸರುಗಳು ಪರಿಶೀಲನೆಯಲ್ಲಿವೆ.
ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಪಕ್ಷದ ಶಾಸಕರೊಂದಿಗೆ ಶಾಸಕಾಂಗ ಪಕ್ಷದ ನಾಯಕ ಯಾರಾಗಬೇಕು ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ, ಶಾಸಕರು ಯಾರ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಪಕ್ಷದ ವರಿಷ್ಠರು ರಾಜ್ಯ ಘಟಕದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದಾರೆ. ಇನ್ನೇನು ಘೋಷಣೆ ಮಾಡುವ ಹಂತಕ್ಕೆ ಬಂದು ನಿಂತಿದೆ.
ಪಕ್ಷದ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಪರ ಒಲವು ಹೊಂದಿದ್ದಾರೆ. ಹಿಂದಿನ ಸರ್ಕಾರದ ನೇತೃತ್ವ ವಹಿಸಿರುವುದರಿಂದ ಈಗಿನ ಸರ್ಕಾರವನ್ನು ಎದುರಿಸಲು ಅವರೇ ಸೂಕ್ತ ಎಂಬ ಅಭಿಪ್ರಾಯವಿದೆ. ಆದರೆ, ಪಕ್ಷದ ಕೆಳಹಂತದಲ್ಲಿ ಬೊಮ್ಮಾಯಿ ಪರ ಒಲವಿಲ್ಲ. ಹೀಗಾಗಿಯೇ ಕುತೂಹಲ ಮೂಡಿದೆ.
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಂತಿಮಗೊಂಡ ಬಳಿಕ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೊಸಬರ ನೇಮಕಕ್ಕೆ ಹಾದಿ ಸುಗಮವಾಗಲಿದೆ. ಹೆಚ್ಚೂ ಕಡಿಮೆ ಎರಡೂ ಹುದ್ದೆಗಳಿಗೆ ಒಂದೇ ಸಮಯದಲ್ಲಿ ನೇಮಕಗೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.