ಬಂಧಿತ ಸಚಿವ ಸೆಂಥಿಲ್ ಬಾಲಾಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ
ಚೆನ್ನೈ:
ಬಂಧಿತ ವಿದ್ಯುತ್ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಗುರುವಾರ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ.
ಸಚಿವ ಸೆಂಥಿಲ್ ಬಾಲಾಜಿ ಅವರು ಉದ್ಯೋಗಕ್ಕಾಗಿ ಹಣ ತೆಗೆದುಕೊಳ್ಳುವುದು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.
ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಕಾನೂನು ಮತ್ತು ನ್ಯಾಯದ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ರಾಜ್ಯಪಾಲರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಅವರು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಇನ್ನೂ ಕೆಲವು ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವುದರಿಂದ ನ್ಯಾಯಯುತ ತನಿಖೆ ಸೇರಿದಂತೆ ಕಾನೂನಿನ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಇದು ಅಂತಿಮವಾಗಿ ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರದ ಸ್ಥಗಿತಕ್ಕೆ ಕಾರಣವಾಗಬಹುದು ಎಂಬ ಆತಂಕಗಳಿವೆ ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜ್ಯಪಾಲರಿಗೆ ಯಾವುದೇ ಅಧಿಕಾರವಿಲ್ಲ. ಇದನ್ನು ನಾವು ಕಾನೂನಾತ್ಮಕವಾಗಿ ಎದುರಿಸುತ್ತೇವೆ’ ಎಂದು ಹೇಳಿದ್ದಾರೆ.
ವಿದುತಲೈ ಚಿರುತೈಗಲ್ ಕಚ್ಚಿ ಶಾಸಕ ತೊಲ್ ತಿರುಮಾವಳವನ್ ಅವರು ಟ್ವಿಟ್ಟರ್‌ನಲ್ಲಿ ರಾಜ್ಯಪಾಲರ ಕ್ರಮಗಳನ್ನು ಮಾನಸಿಕ ಅಸ್ಥಿರ ವ್ಯಕ್ತಿಯ ಕ್ರಮಕ್ಕೆ ಹೋಲಿಸಿದ್ದಾರೆ. ರಾಜ್ಯಪಾಲರ ಕ್ರಮಗಳು ಮಾನಸಿಕ ಅಸ್ಥಿರ ವ್ಯಕ್ತಿಯಂತೆಯೇ ಇರುತ್ತವೆ. ಅವರಿಗೆ ಏನಾಯಿತು ಎಂದು ನಾನು ವಿಷಾದಿಸುತ್ತೇನೆ. ತನ್ನ ಅಧಿಕಾರದ ಮಿತಿಯನ್ನು ಅರಿಯದೆ ವರ್ತಿಸುತ್ತಿದ್ದಾರಾ? ಅಥವಾ ಉದ್ದೇಶಪೂರ್ವಕವಾಗಿ ತಮಿಳುನಾಡಿನಲ್ಲಿ ರಾಜಕೀಯ ಅವ್ಯವಸ್ಥೆ ಸೃಷ್ಟಿಸಲು ಯತ್ನಿಸುತ್ತಿದ್ದಾರಾ? ಎಂದು ಹೇಳಿದ್ದಾರೆ.