ಜೈನ ಮುನಿ ಹತ್ಯೆ ಪ್ರಕರಣ : ಸಿಬಿಐಗೆ ಒಪ್ಪಿಸಲು ಎಂ.ಬಿ.ಝಿರಲಿ ಮನವಿ
ಬೆಳಗಾವಿ:
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು ಈ ಪ್ರಕರಣ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಎಮ್.ಬಿ.ಝಿರಲಿ ರಾಜ್ಯ ಸರ್ಕಾರಕ್ಕೆ ಅಗ್ರಹಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ಆಪ್ತರಿಂದಲೇ ಜೈನಮುನಿಗಳು ಹತ್ಯೆಯಾಗಿದ್ದಾರೆ. ಜೊತೆಗೆ ಆಶ್ರಮದಲ್ಲೇ ಜೈನಮುನಿಯವರನ್ನ ಕೊಲೆ ಮಾಡಿ, ಕೊಳವೆ ಬಾವಿಯಲ್ಲಿ ಶವ ಎಸೆದಿರುವ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಧಾರ್ಮಿಕವಾಗಿ ಅಹಿಂಸಾ ತತ್ವವನ್ನು ಸದಾ ಸಮಾಜಕ್ಕೆ ಬೋಧಿಸುವ ಜೈನ ಮುನಿಗಳ ಹತ್ಯೆಯಿಂದ ಋಷಿ ಮುನಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಕೃತ್ಯಕ್ಕೆ ಕಾರಣಕರ್ತರಾದರ ಆರೋಪಿಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಕಾರ್ಯ ಯಾರಿಂದಲೂ ಆಗಬಾರದು. ಈ ಪ್ರಕರಣ ಅತ್ಯಂತ ತೀವ್ರ ತರನಾಗಿದ್ದು ರಾಜ್ಯ ಸರ್ಕಾರ ಸಿಬಿಐ ಗೆ ಒಪ್ಪಿಸುವುದೇ ಸೂಕ್ತವಾಗಿದ್ದು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿಗಳು ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿ ತುಂಡು ಮಾಡಿರುವುದು ಭಕ್ತರನ್ನು ಆತಂಕಕ್ಕೆ ತಳ್ಳಿದೆ. ಒಂದು ಇರುವೆಯನ್ನು ಹತ್ಯೆ ಮಾಡುವುದೇ ಮಹಾಪಾಪ ಎಂದು ಬೋಧಿಸುವ ಗುರುವನ್ನೆ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು. ಅದರ ತನಿಖೆ ಮಾಡಿ ಕೊಲೆಗೆ ನಿಖರ ಕಾರಣ ಹೊರ ತರಬೇಕು. ಮಹಾರಾಜರು ಎಲ್ಲರ ಜೊತೆ ಚೆನ್ನಾಗಿ ಇದ್ದರು. ಯಾರ ಜೊತೆಯೂ ವೈರತ್ವ ಇರಲಿಲ್ಲ. ಬಡವರಿಗೆ ಸಹಾಯ ಮಾಡುತ್ತಿದ್ದ ಇಂಥವರೆ ಹತ್ಯೆಯಾದರೆ ಸಾಮಾನ್ಯರ ಪಾಡೇನು ಎನ್ನುವ ಸ್ಥಿತಿಗೆ ಬಂದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.