- ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ
ಬೆಂಗಳೂರು :
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಸರ್ಕಾರ ಖಚಿತ ತೀರ್ಮಾನ ತೆಗೆದುಕೊಳ್ಳಲಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ನಿರ್ಧಾರ ಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಾಸಕರಾದ ಬಿ.ಆರ್.ಪಾಟೀಲ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗವು ಇಂದು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ಭೂ ಸುಧಾರಣಾ ಕಾಯ್ದೆ ಬಗ್ಗೆ ಚರ್ಚೆ ಆಗಿದ್ದು, ಮುಂದಿನ ಅಧಿವೇಶನ ದಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಇಂದು ಸದನದಲ್ಲಿ ಚರ್ಚೆ ನಡೆದಿದೆ. ರೈತರ ಸಮಸ್ಯೆಜಿಕ ಬಗ್ಗೆ ವಿಸ್ತ್ರುತ ಚರ್ಚೆ ಮಾಡಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.
ಬಜೆಟ್ ನಿಂದ ಹೊರಗುಳಿದಿರುವ ಕೆಲವು ವಿಚಾರಗಳ ಬಗ್ಗೆ ಚರ್ಚಿಸಬೇಕಿದ್ದು, ಸರ್ಕಾರ ಮಾರ್ಪಾಡು ಮಾಡಿರುವ ಎಪಿಎಂಸಿ ಕಾಯ್ದೆಯ ಬಗ್ಗೆಯೂ ಚರ್ಚಿಸಬೇಕಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.
ಹೊಸ ಸರ್ಕಾರ 5 ಗ್ಯಾರಂಟಿ ಗಳನ್ನು ಜಾರಿಗೆ ತಂದಿರುವುದು ಎಪಿಎಂಸಿ ಕಾಯ್ದೆ ಮಾರ್ಪಾಡು ಮಾಡಿರುವುದು ಸ್ವಾಗತಾರ್ಹ. ಕೆಲವು ವಿಚಾರಗಳ ಬಗ್ಗೆ ಚರ್ಚೆ ಅಗತ್ಯವಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು, ಆದಷ್ಟು ಬೇಗ ವಾಪಸ್ ಪಡೆಯಬೇಕು. ತಿದ್ದುಪಡಿ ಉಳುವವರ ಕೇಂದ್ರಿತವಾಗಿರಬೇಕು. ಜಾನುವಾರು ಹತ್ಯೆ ನಿಷೇಧ ಕೂಡ ವಾಪಸ್ಸು ಪಡೆಯಬೇಕು. ಹಿಂದೆ ಕೃಷಿ ಬೆಲೆ ಆಯೋಗವನ್ನು ಘೋಷಣೆ ಮಾಡಲಾಗಿತ್ತು. ಅದಕ್ಕೆ ಶಾಸನಾತ್ಮಕ ರೂಪ ಕೊಟ್ಟು, ಆವರ್ತ ನಿಧಿ ನೀಡಬೇಕು. ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಗೆ ಅಕ್ಕಿ ಕೊಡದೆ ರಾಜಕೀಯ ಮಾಡಿರುವುದನ್ನು ವಿರೋಧಿಸುತ್ತೇವೆ. ಪೌಷ್ಟಿಕ ಆಹಾರ ನೀಡಲು ಪಡಿತರ ವ್ಯವಸ್ಥೆಗೆ ರೈತರೆ ಆಹಾರ ಧಾನ್ಯ ಕೊಡುವ ವ್ಯವಸ್ಥೆ ಮಾಡಬಹುದು. ಆಗ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ರೈತರು ಸಲಹೆ ನೀಡಿದರು. ಸರ್ಕಾರ ರೈತರ ಹಿತವನ್ನು ಕಾಪಾಡಬೇಕು ಎಂದು ರೈತರು ಮನವಿ ಮಾಡಿದರು.
ಕೃಷಿ ಸಚಿವ ಚೆಲುವರಾಯಸ್ವಾಮಿ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ರೈತ ಮುಖಂಡರು ಸಭೆಯಲ್ಲಿ ಹಾಜರಿದ್ದರು.