Breaking News

ಶಿವ ಭಕ್ತಿಗೆ ಬಿಲ್ವಪತ್ರೆ ಸಸಿ ಸಮರ್ಪಿಸಿ ಶಿವಭಕ್ತನಾದ ವೀರೇಶ

Spread the love

ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಅಭಿಯಾನಕ್ಕೆ ದಶಕದ ಸಂಭ್ರಮ | ಲಕ್ಷ ಬಿಲ್ವಪತ್ರೆ ಸಸಿ ವಿತರಿಸಿದ ಸರ್ವಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ

ಯುವ ಭಾರತ ಬೆಳಗಾವಿ
ಮನೆ, ಮಠ- ಮಾನ್ಯಗಳಲ್ಲಿ ನಿತ್ಯ ಪೂಜೆಗೆ ಬಿಲ್ವಪತ್ರೆಗೆ ಅಗ್ರಸ್ಥಾನ. ಆದರೆ, ಈ ಬಿಲ್ವಪತ್ರೆ ಇತ್ತೀಚಿನ ದಿನಗಳಲ್ಲಿ ನಾಮಾವಶೇಷವಾಗುತ್ತಿದೆ. ಬಿಲ್ವಪತ್ರೆ ಮರಗಳು ಅಪರೂಪ ಎನ್ನುವಂತಾಗಿದೆ. ಪೂಜೆಗೆ ಬಿಲ್ವಪತ್ರೆಯೇ ಸಿಗುತ್ತಿಲ್ಲ. ಇದರಿಂದಾಗಿ ಪೂಜೆ ಕೇವಲ ಊದಬತ್ತಿಗೆ ಸೀಮಿತವಾಗಿದೆ. ಆದರೆ, ಗಡಿನಾಡು ಬೆಳಗಾವಿಯ ಸಮಾಜಸೇವಕರೊಬ್ಬರು ಪೂಜೆಗೆ ಶ್ರೇಷ್ಠವಾಗಿರುವ ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಪವಿತ್ರ ಕಾರ್ಯವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ಮಾಡುತ್ತ ಬಂದಿದ್ದಾರೆ.
ಬೆಳಗಾವಿ ತಾಲೂಕಿನ ರಾಜಹಂಸಗಡದ ನಿವಾಸಿಯಾಗಿರುವ ಸಮಾಜ ಸೇವಕ, ಪರಿಸರವಾದಿ ವೀರೇಶ ಬಸಯ್ಯ ಹಿರೇಮಠ ಎಂಬುವರೇ ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಅಭಿಯಾನವನ್ನು ಕಳೆದ ಒಂದು ದಶಕದಿಂದ ನಡೆಸುತ್ತ ಬಂದಿದ್ದಾರೆ. ಮಠ, ಮಾನ್ಯಗಳು ಸೇರಿದಂತೆ ಜನತೆಯ ನಡುವೆ ಇವರು ಸೌಹಾರ್ದದ ಕೊಂಡಿಯಾಗಿಯೂ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
ಹಿಂದೂ ಧರ್ಮದ ಪ್ರಕಾರ ಶಿವಲಿಂಗ ಪೂಜೆಗೆ ಬಿಲ್ವಪತ್ರೆ ಶ್ರೇಷ್ಠ, ಒಂದು ಬಿಲ್ವದ ಸಸಿ ನೆಟ್ಟರೆ ಕೋಟಿ ಗಿಡ ನೆಟ್ಟಂತೆ. ಅಷ್ಟೊಂದು ಶ್ರೇಷ್ಠವಾಗಿರುವ ಬಿಲ್ವಪತ್ರೆ ಸಸಿಗಳನ್ನು ನೆಡುವ ಹವ್ಯಾಸ ಬೆಳೆಸಿಕೊಂಡು ವೀರೇಶ ಅವರು ಬಿಲ್ವಪತ್ರೆ ಗಿಡ ಉಳಿಸಿ, ಬೆಳೆಸುವ ಅಭಿಯಾನ ಕೈಗೊಂಡಿದ್ದಾರೆ. ಬಿಲ್ವಪತ್ರೆ ಸಸಿಗಳನ್ನು ನೆಟ್ಟರೆ ಅಷ್ಟೇ ಮುಗಿಯಲ್ಲ. ಅವುಗಳ ಪಾಲನೆ, ಪೋಷಣೆ ಹೊಣೆಯೂ ವೀರೇಶ ಅವರದ್ದೇ ಆಗಿದೆ. ವಿಶೇಷವಾಗಿ ಮಠಗಳ ಆವರಣದಲ್ಲಿ ಸಸಿ ನೆಟ್ಟು ಅದರ ಪಾಲನೆ ಪೋಷಣೆ ಹೊಣೆಯನ್ನು ತಾವೇ ಹೊತ್ತಿಕೊಂಡಿದ್ದಾರೆ. ಅಲ್ಲದೇ ದೂರ ಊರಗಳಿದ್ದರೆ ಅಲ್ಲಿಯವರಿಗೆ ಸಸಿಗಳ ಪಾಲನೆ ಪೋಷಣೆ ಹೊಣೆ ನೀಡಲಾಗುತ್ತದೆ. ಬಿಲ್ವಪತ್ರೆ ಗಿಡ ಬೆಳೆಸುವಂತೆಯೂ ಜನಜಾಗೃತಿ ಮೂಡಿಸುತ್ತ ಬಂದಿದ್ದಾರೆ.
ಪರಿಸರದ ಬಗ್ಗೆ ಮೊದಲಿನಿಂದ ಅಪಾರ ಕಾಳಜಿ ಹೊಂದಿರುವ ವೀರೇಶ ಹಿರೇಮಠ ಅವರು ಸರ್ವಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಕಳೆದ ಒಂದು ದಶಕದಿಂದ ಬಿಲ್ವಪತ್ರೆಯ ಗಿಡಗಳನ್ನು ಸಸಿಯಾಗಿಸಿ ಅವುಗಳ ಪಾಲನೆ ಪೋಷಣೆ ಮಾಡುತ್ತ ಬಂದಿರುವ ಇವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಮಠಾಧೀಶರ ಮೂಲಕ ಜನರಿಗೆ ಉಚಿತವಾಗಿ ಬಿಲ್ವಪತ್ರೆ ಸಸಿಗಳನ್ನು ನೀಡಿದ್ದಾರೆ. ಈ ಮೂಲಕ ಬಿಲ್ವಪತ್ರೆಯ ಅಭಾವವನ್ನು ನೀಗಿಸುತ್ತ ಬಂದಿದ್ದಾರೆ. ವಿಶೇಷವಾಗಿ ಶ್ರೀಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ಮಂದಿರದ ಆವರಣದಿಂದ ಎಲ್ಲರೂ ಬಿಲ್ವಪತ್ರೆ ಸಸಿಗಳನ್ನು ತೆಗೆದುಕೊಂಡು ಬರುವುದು ವಾಡಿಕೆ. ಆದರೆ, ವೀರೇಶ ಮಾತ್ರ ಉಳಿವಿಯಲ್ಲೇ ಬಿಲ್ವಪತ್ರೆ ಸಸಿ ನೆಟ್ಟಿದ್ದಾರೆ. ಅಲ್ಲದೇ, ಖಾನಾಪುರ ಅರಣ್ಯ ಪ್ರದೇಶ, ಬೈಲಹೊಂಗಲ, ಬೆಳಗಾವಿ ನಗರ, ತಾಲೂಕು, ಗೋಕಾಕ, ಬೈಲಹೊಂಗಲ, ಹುಕ್ಕೇರಿ, ಹಾವೇರಿ, ಮುತ್ನಾಳ ಹೀಗೆ ಮತ್ತಿತರ ಭಾಗದ ಜನತೆಗೆ ಬಿಲ್ವಪತ್ರೆ ಸಸಿಗಳನ್ನು ಪೂರೈಕೆ ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ಭಾಗದ ಸುತ್ತಲೂ ಕೂಡ ಬಿಲ್ಪಪತ್ರೆ ಸಸಿ ಉಚಿತವಾಗಿ ನೀಡುವ ಮೂಲಕ ಗಡಿಭಾಗದ ಜನತೆಗೆ ವೀರೇಶ ಹಿರೇಮಠ ಚಿರಪರಿಚಿತರಾಗಿದ್ದಾರೆ.
ಬಿಲ್ವಪತ್ರೆ ಸಸಿ ಬೇಕಿದ್ದರೆ ಕರೆ ಮಾಡಿ:
ಬಿಲ್ವಪತ್ರೆ ಗಿಡವನ್ನು ನೆಡುವುದರಿಂದ ವ್ಯಕ್ತಿಯ ಪಾಪ ಕಾರ್ಯಗಳು ನಾಶವಾಗುತ್ತದೆ ಮತ್ತು ಎಲ್ಲ ಸದಸ್ಯರು ನವೀಕರಿಸಬಹುದಾದ ಫಲಗಳನ್ನು ಪಡೆಯುತ್ತಾರೆ. ಈ ಪವಿತ್ರ ಸಸ್ಯವು ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಬಿಲ್ವಪತ್ರೆ ಮರವನ್ನು ಶ್ರೀವೃಕ್ಷ ಎಂದೂ ಕರೆಯುತ್ತಾರೆ. ಈ ಮರವು ಮನೆಯ ಸಮೀಪದಲ್ಲಿ ಇದ್ದರೇ ಅದು ಸಂಪತ್ತು ಮತ್ತು ಸಮೃದ್ಧಿಯ ಮೊತ್ತವನ್ನು ಹೆಚ್ಚಾಗಿಸುತ್ತದೆ ಎನ್ನುವ ನಂಬಿಕೆಯಿದೆ. ಈ ಪವಿತ್ರ ಬಿಲ್ವಪತ್ರೆ ಸಸಿಗಳನ್ನು ನೆಟ್ಟು, ಅವುಗಳನ್ನು ಉಳಿಸಿ, ಬೆಳೆಸುವ ಸಂಕಲ್ಪ ತೊಟ್ಟು, ಕಳೆದ ಒಂದು ದಶಕಗಳಿಂದ ಬಿಲ್ವಪತ್ರೆ ಸಸಿಗಳನ್ನು ನೆಡುತ್ತ ಬಂದಿದ್ದಾರೆ. ಈವರೆಗೆ ೧೦೦೮ ಮಠ-ಮಾನ್ಯಗಳನ್ನು ಸಂಪರ್ಕ ಸಾಧಿಸಿ, ಸಸಿಗಳನ್ನು ಸ್ವಂತ ವೆಚ್ಚದಲ್ಲಿ ಸರಬರಾಜು ಮಾಡಿ, ಸ್ವತಃ ಸಸಿ ನೆಟ್ಟು ಬಿಲ್ವ ಪತ್ರಿ ಉಳಿಸಿ, ಬೆಳೆಸುವ ಕಾಯಕದಲ್ಲಿ ವೀರೇಶ ಹಿರೇಮಠ ತೊಡಗಿದ್ದಾರೆ. ಬಿಲ್ವಪತ್ರಿ ಸಸಿಗಳ ಲಭ್ಯತೆ ಮತ್ತು ಅವುಗಳ ಸಮರ್ಪಕ ಉಪಯೋಗದ ಕುರಿತು ಮಾಹಿತಿ ಈಗ ಮಠಾಧೀಶರು ಹಾಗೂ ಸಾರ್ವಜನಿಕರಿಗೆ ಗೊತ್ತಾಗಿದೆ. ಅನೇಕರು ಫೋನ್ ಮೂಲಕ ಸಂಪರ್ಕ ಸಾಧಿಸಿ, ಬಿಲ್ವಪತ್ರೆ ಸಸಿಗಳನ್ನು ಪಡೆಯುತ್ತಿದ್ದಾರೆ. ನಿಮಗೂ ಬಿಲ್ವಪತ್ರೆ ಸಸಿ ಬೇಕಿದ್ದರೆ ಮೊಬೈಲ್ ಸಂಖ್ಯೆ ೯೪೮೧೪೦೪೦೫೫ ಸಂಪರ್ಕಿಸಬಹುದಾಗಿದೆ.
ಬಿಲ್ವಪತ್ರೆಯಲ್ಲಿವೆ ಔಷಧೀಯ ಗುಣಗಳು:
ಶಿವನಿಗೆ ಮೂರು ಕಣ್ಣುಗಳಿರುವಂತೆ ಬಿಲ್ವಪತ್ರೆಯಲ್ಲಿಯೂ ಮೂರು ಎಲೆಗಳಿರುವುದರಿಂದ ಶಿವನ ಪ್ರತೀಕ ಎಂಬುವುದು ಆಧ್ಯಾತ್ಮಿಕತೆಯ ನಂಬಿಕೆ ಸಾಂಪ್ರದಾಯಿಕವಾಗಿ ಮುಂದುವರೆದಿದೆ. ಕೇವಲ ಅಧ್ಯಾತ್ಮ ನಂಬಿಕೆ ಅಷ್ಟೆ ಅಲ್ಲಾ, ವೈಜ್ಞಾನಿಕವಾಗಿಯೂ ನಂಬಲೇ ಬೇಕಾದ ಕೆಲವು ಔಷಧಿಯ ಗುಣಗಳು ಬಿಲ್ವಪತ್ರೆಯಲ್ಲಿವೆ. ಔಷಧೀಯ ಗುಣಗಳಿಂದ ಕೂಡಿದ ಬಿಲ್ವದ ಎಲೆಗಳಲ್ಲಿ ಟ್ಯಾನಿನ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮ್ಯಾಗ್ನೇಶಿಯಂ ಮುಂತಾದ ರಾಸಾಯನಿಕಗಳು ಕಂಡುಬರುತ್ತವೆ. ಬಿಲ್ವದ ಎಲೆಗಳು ದೃಷ್ಟಿ ಹೆಚ್ಚಿಸಲು, ಹೊಟ್ಟೆಯ ಹುಳುಗಳನ್ನು ಕೊಲ್ಲಲು ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಬಹಳ ಉಪಯುಕ್ತವಾಗಿವೆ. ಬಿಲ್ವಪತ್ರೆ ಹಾಗೂ ಬಿಲ್ವದ ಹಣ್ಣಿನ ಬಳಕೆಯಿಂದ ಮಲಬದ್ಧತೆ ಹಾಗೂ ಅತಿಸಾರ, ಹಸಿವು ಹೆಚ್ಚಿಸಲು, ಸಂಧಿವಾತ, ಜಠರ ಹುಣ್ಣು, ಮಧುಮೇಹ, ಗ್ಯಾಸ್ಟ್ರಿಕ್ ಅಲ್ಸರ್ ನಿವಾರಣೆಗೆ ಉಪಯುಕ್ತವಾಗಿವೆ.
ಒಂದು ಬಿಲ್ವಪತ್ರೆಸಸಿ ನೆಟ್ಟರೆ ಕೋಟಿ ಗಿಡ ನೆಟ್ಟಂತೆ. ನಾನೀಗ ೧ ಲಕ್ಷ ಬಿಲ್ವಪತ್ರೆ ಸಸಿ ನೆಟ್ಟಿದ್ದೇನೆ. ೧೦ ವರ್ಷದಲ್ಲಿ ೧ ಲಕ್ಷ ಬಿಲ್ವಪತ್ರೆ ಸಸಿನೆಡುವ ಸಂಕಲ್ಪ ಪೂರ್ಣಗೊಂಡಿದೆ. ಜನರಿಂದ ಬೇಡಿಕೆಯಂತೆ ನಾನೂ ಸಸಿ ಪೂರೈಸುತ್ತೇನೆ. ಮಠ- ಮಂದಿರಗಳ ಆವರಣದಲ್ಲಿ ಬಿಲ್ವಪತ್ರೆ ಸಸಿನೆಡುವ ಸಂಕಲ್ಪ ಮಾಡಿದ್ದೇನೆ. ಬಿಲ್ಪಪತ್ರೆ ಗಿಡ ದಿನದ ೨೪ ಗಂಟೆ ಕಾಲ ಪ್ರಾಣವಾಯು ಕೊಡುತ್ತದೆ. ಇದು ದೇವರ ವೃಕ್ಷ. ಹಾಗಾಗಿ, ಯಾರೂ ಈ ಮರವನ್ನು ಕಡಿಯುವುದಿಲ್ಲ. ಇದರಿಂದಾಗಿ ಬಿಲ್ವಪತ್ರೆ ಮರ ಸಹಜವಾಗಿಯೇ ಉಳಿದು ಬೆಳೆಯುತ್ತದೆ. ಸ್ವಂತ ಖರ್ಚಿನಿಂದ ತೆರಳಿ, ಸ್ವತಃ ಸಸಿ ನೆಟ್ಟು ಬರುತ್ತೇನೆ.
ವೀರೇಶ ಬಸಯ್ಯ ಹಿರೇಮಠ, ಬಿಲ್ವಪತ್ರೆ ಮರ ಉಳಿಸಿ, ಬೆಳಸಿ ಅಭಿಯಾನದ ರೂವಾರಿ.

Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

twenty + 6 =