ಜಾತಿ ಮತ ಪಂಥವನ್ನು ಮೀರಿ ಭಾವೈಕ್ಯತೆಯೊಂದಿಗೆ ದೇಶವನ್ನು ಕಟ್ಟಬೇಕೆಂದು- ಯುವ ಕವಿ ಪ್ರೊ. ಮೆಹಬೂಬಸಾಹೇಬ!
ಗೋಕಾಕ: ಯುವಕರು ಜಡತೆಯನ್ನು ತೊಡೆದು ಅನಿಕೇತನವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಜಾತಿ ಮತ ಪಂಥವನ್ನು ಮೀರಿ ಭಾವೈಕ್ಯತೆಯೊಂದಿಗೆ ದೇಶವನ್ನು ಕಟ್ಟಬೇಕೆಂದು ಕವಿ ಕುವೆಂಪು ತಿಳಿಸಿದ್ದಾರೆ ಎಂದು ಯುವ ಕವಿ ಪ್ರೊ. ಮೆಹಬೂಬಸಾಹೇಬ ಹೇಳಿದರು.

ಗೋಕಾಕ: ಕಾರ್ಯಕ್ರಮ ಉದ್ಘಾಟಿಸುತ್ತಿರುವ ಗಣ್ಯರು.
ಅವರು, ಸ್ಥಳೀಯ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುವೆಂಪು ದಿನಾಚರಣೆ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಮತ್ತು ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.
ಆಧ್ಯಾತ್ಮ ಮತ್ತು ವೈಚಾರಿಕತೆ ಎರಡನ್ನೂ ಕೂಡಿಸಿಕೊಂಡು ಭಾವೈಕ್ಯತೆಯ ಮಹತ್ಮವನ್ನೂ ತಿಳಿಸಿದ ಶ್ರೇಷ್ಠ ಕವಿ ಕುವೆಂಪು ಎಂದು ಹೇಳಿದರು. ಶಾಲಾ ಕಾಲೇಜುಗಳಲ್ಲಿ ನಾಡು ನುಡಿಯ ಚಿಂತನೆ ಹಾಗೂ ಶ್ರೇಷ್ಠ ಕವಿಗಳ ಕುರಿತಾದ ಕಾರ್ಯಕ್ರಮಗಳನ್ನು ಕಾವ್ಯಕೂಟ ಬಳಗದ ಈಶ್ವರ ಮಮದಾಪೂರ ಇವರು ಮಾಡುತ್ತಿರುವುದು ಅಭಿನಂದನಾರ್ಹವಾಗಿದ್ದು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಲು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾವ್ಯಕೂಟ ಕನ್ನಡ ಬಳಗದ ಸಂಸ್ಥಾಪಕ ಕವಿ, ಶಿಕ್ಷಕ ಈಶ್ವರ ಮಮದಾಪೂರ ಮಾತನಾಡುತ್ತಾ ಕುವೆಂಪು ಅವರು ನಾಡು ನುಡಿಯ ಕುರಿತು ಜಾಗೃತಿ ಮೂಡಿಸಿದ ನಾಡಿನ ಶ್ರೇಷ್ಠ ಕವಿ ಚಿಂತಕರಾಗಿದ್ದು ನಾಡ ಪ್ರೇಮದ ಜೊತೆಗೆ ರಾಷ್ಟ್ರ ಪ್ರೇಮದ ಅಭಿಮಾನವನ್ನು ಜಾಗ್ರತಗೊಳಿಸಿದ ಕವಿಯಾಗಿದ್ದಾರೆ ಆದರೆ ಇಂದಿನ ಯುವ ಪೀಳಿಗೆಯು ಮೊಬೈಲ್, ಅಂತರ್ಜಾಲದ ಮೋಹದಲ್ಲಿ ಬಿದ್ದು ಪುಸ್ತಕಗಳನ್ನು ಓದುವ ಪ್ರವೃತ್ತಿಯಿಂದ ದೂರಾಗುತ್ತಿರುವುದು ಖೇದಕರವಾಗಿದ್ದು ನಾಡು, ನುಡಿ ಹಾಗೂ ಶ್ರೇಷ್ಠ ಕವಿಗಳ ಪುಸ್ತಕಗಳನ್ನು ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ ವಿ. ಮೋದಿ ಇವರು ಮಾತನಾಡುತ್ತಾ ಕುವೆಂಪುರವರು ಇತಿಹಾಸ ಮತ್ತು ಸಾಹಿತ್ಯ ಪ್ರಜ್ಞೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕುವೆಂಪುರವರ ವಿಚಾರಗಳನ್ನು ಓದಿಕೊಳ್ಳಬೇಕೆಂದರು.
ಕನ್ನಡ ಸಂಘದ ಮುಖ್ಯಸ್ಥರಾದ ಪ್ರೊ. ವೈ. ಬಿ. ಕೊಪ್ಪದರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಲಕ್ಷ್ಮಿ ತಳವಾರ, ಶೃತಿ ಶಿಂಧಿ ಮರದ, ದೇವಕಿ ಜಾಲ್ಯಾಗೋಳ, ಶ್ವೇತಾ ಹುಲ್ಲೋಳಿಕರ ಇವರಿಗೆ ಅಭಿನಂದನಾ ಪತ್ರ ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕನ್ನಡ ಸಂಘದ ಕಾರ್ಯದರ್ಶಿಗಳಾದ ಕುಮಾರಿ ತ್ರಿವೇಣಿ ಗುರವ, ಕುಮಾರಿ ರೇಣುಕಾ ವ್ಯಾಪಾರಿ, ಸಾಹಿತಿ ಉಪನ್ಯಾಸಕ ಸುರೇಶ ಮುದ್ದಾರ, ಪ್ರೊ. ಡಿ. ಎಸ್. ಪತ್ತಾರ ಮತ್ತು ಎಸ್. ಎಸ್. ಗಾಣಿಗೇರ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಸೌಮ್ಯ ಹುಲ್ಲಾರ, ಪ್ರಿಯಾಂಕಾ ಕರೆಪ್ಪನವರ ಹಾಗೂ ಸಂಗಡಿಗರು ಮಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಅಂಬಿಕಾ ಅರಭಾಂವಿ, ದೇವಕಿ ಜಾಲ್ಯಾಗೋಳ ನಿರ್ವಹಿಸಿದರು. ಕುಮಾರಿ ಶ್ವೇತಾ ಹುಲ್ಲೋಳಿಕರ ವಂದಿಸಿದರು.
YuvaBharataha Latest Kannada News