ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾದ ವಿಷಯಗಳ ಕುರಿತು ಅಧಿಕಾರಿಗಳ ಜತೆ ಚರ್ಚೆ- ಸಚಿವ ರಮೇಶ್ ಜಾರಕಿಹೊಳಿ..!!
ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾದ ವಿಷಯಗಳ ಕುರಿತು ಅಧಿಕಾರಿಗಳ ಜತೆ ಚರ್ಚೆ- ಸಚಿವ ರಮೇಶ್ ಜಾರಕಿಹೊಳಿ..!!
ಯುವ ಭಾರತ ಸುದ್ದಿ ಬೆಳಗಾವಿ: ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ, ಮನೆಗಳು ಹಾಗೂ ಮೂಲಸೌಕರ್ಯಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 972 ಕೋಟಿ ರೂಪಾಯಿ ಹಾನಿಯಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು.
ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಹಿಡಕಲ್ ಜಲಾಶಯದ ಬಳಿಯ ಸಭಾಭವನದಲ್ಲಿ ಸೋಮವಾರ (ಆ.24) ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದಾಗ್ಯೂ ಕೆಲವು ಕಡೆಗಳಲ್ಲಿ ಹೆಚ್ಚಿನ ಮಳೆಯಿಂದ ಉಂಟಾಗಿರುವ ಬೆಳೆಹಾನಿಯ ಜಂಟಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀರು ಬಿಡುಗಡೆಯ ಬಗ್ಗೆ ಇದೇ ರೀತಿ ನಿರಂತರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು. ದಿಢೀರ್ ನೀರು ಬಿಡುಗಡೆಯಿಂದ ನದಿತೀರದ ಗ್ರಾಮಗಳಿಗೆ ತೊಂದರೆಯಾಗುತ್ತದೆ.
ಈ ಬಾರಿ ಸಮನ್ವಯ ಸಮರ್ಪವಾಗಿರುವುದರಿಂದ ಪ್ರವಾಹ ಪರಿಸ್ಥಿತಿ ಉದ್ಭವಿಸದಂತೆ ತಡೆಗಟ್ಟುವುದು ಸಾಧ್ಯವಾಗಿದೆ ಎಂದರು.
ಮಹಾರಾಷ್ಟ್ರದಲ್ಲಿ ಮಳೆಪ್ರಮಾಣ ಹಾಗೂ ಕೋಯ್ನಾ ಜಲಾಶಯದ ಮಾಹಿತಿಯನ್ನು ಸಚಿವರು ಪಡೆದುಕೊಂಡರು.
ಮಲಪ್ರಭಾ ನದಿಯಿಂದ ಗೋಕಾಕ ಮತ್ತು ರಾಮದುರ್ಗದ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸುವ ಬಗ್ಗೆ ಚರ್ಚಿಸಿದರು.
ಕೆರೆತುಂಬಿಸುವ ಯೋಜನೆಯ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಲ್ಲ. ಆದರೆ ಸದ್ಯಕ್ಕೆ ಇರುವ ದಾಸ್ತಾನು ಲಭ್ಯತೆಯನ್ನು ಸಮರ್ಪಕವಾಗಿ ಹಾಗೂ ಸಕಾಲಕ್ಕೆ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆಹಾನಿ ಜಂಟಿ ಸಮೀಕ್ಷೆಗೆ ಈಗಾಗಲೇ ನೀಡಲಾಗಿರುವ ನಿರ್ದೇಶನದ ಪ್ರಕಾರ ತಕ್ಷಣವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾದ ವಿಷಯಗಳ ಕುರಿತು ಸಚಿವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಇತ್ತೀಚೆಗೆ ಮಳೆಯಿಂದ ಉಂಟಾಗಿರುವ ಬೆಳೆಹಾನಿ, ಜೀವಹಾನಿ ಹಾಗೂ ಪರಿಹಾರ ವಿತರಣೆ ಪ್ರಗತಿಯನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿಯನ್ನು ನೀಡಿದರು.
ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ ಕಣಗಲಿ, ಹಿಡಕಲ್ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರ ಆರ್.ಬಿ.ದ್ಯಾಮಣ್ಣವರ, ನೀರಾವರಿ ಇಲಾಖೆಯ ಅಭಿಯಂತರ ಸಿ.ಡಿ.ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.