ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ: ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ..!!
ಯುವ ಭಾರತ ಸುದ್ದಿ, ಬೆಂಗಳೂರು: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಮತ್ತು ನ್ಯಾಯಬದ್ಧ ವಾದವನ್ನು ಮಂಡಿಸಲಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ತೆಲಂಗಾಣ ಸರ್ಕಾರವು ಹೊಸ ತಗಾದೆ ತೆಗೆದಿದೆ. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂಯೆ ನ್ಯಾಯಾಧಿಕರಣವು ಈಗಾಗಲೇ ಅಂತಿಮ ತೀರ್ಪನ್ನೂ ಸಹಾ ನೀಡಿದೆ. 2013ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಅಖಂಡ ಆಂಧ್ರ ಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ ಬಳಿಕ ಐತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವೂ ನಿರ್ಧರಿಸಿದೆ. ಹೀಗಾಗಿ ನೀರು ಹಂಚಿಕೆ ವಿಷಯದಲ್ಲಿ ಹೊಸದಾಗಿ ನ್ಯಾಯಾಧಿಕರಣ ಸ್ಥಾಪಿಸಬೇಕೆಂದು ತೆಲಂಗಾಣ ಸರ್ಕಾರದ ವಾದ ಅತಾರ್ತಿಕವಾಗಿದೆ ಎಂದು ಹೇಳಿರುವ ಸಚಿವರು, ರಾಜ್ಯದ ಹಿತಾಸಕ್ತಿ ಕಾಪಾಡಲು ತಾವು ಬದ್ಧ ಎಂದು ಪುನರುಚ್ಛರಿಸಿದ್ದಾರೆ.
ಕೇಂದ್ರ ಸಚಿವರೊಂದಿಗೆ ಸಮಾಲೋಚನೆ:
ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ನ್ಯಾಯಾಧಿಕರಣದಲ್ಲಿ ಮರು ವಿಚಾರಣೆ ನಡೆಸುವಂತೆ ಕೇಂದ್ರ ಜಲ ಶಕ್ತಿ ಸಚಿವರನ್ನು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಜಲ ಸಂಪನ್ಮೂಲ ಸಚಿವ *ಶ್ರೀ ರಮೇಶ್ ಜಾರಕಿಹೊಳಿ* ಅವರು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ವಿಸ್ತೃತವಾಗಿ ದೂರವಾಣಿಯಲ್ಲಿ ಚರ್ಚಿಸಿ ವಿವರಣೆ ನೀಡಿದ್ದಾರೆ. 2013ರಲ್ಲಿಯೇ ಕೃಷ್ಣಾ ನದಿ ನೀರು ಹಂಚಿಕೆ ಬಗ್ಗೆ ನ್ಯಾಯಾಧಿಕರಣ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸುವ ಸಮಯದಲ್ಲಿ ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ನೀರು ಹಂಚಿಕೆ ಸಮಸ್ಯೆಗೆ ಕರ್ನಾಟಕವನ್ನು ಹೊಣೆಯನ್ನಾಗಿಸಬಾರದೆಂದು ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.
ತೆಲಂಗಾಣ ರಾಜ್ಯವು ಆಂಧ್ರ ಪ್ರದೇಶದ ಭಾಗವೇ ಆಗಿದ್ದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರನ್ನೂ ಸಹ ತೆಲಂಗಾಣ ರಾಜ್ಯ ಆಂಧ್ರ ಪ್ರದೇಶದ ಪಾಲಿನಿಂದಲೇ ಹಂಚಿಕೊಳ್ಳಬೇಕಿದೆ. ಈ ಬಗೆಗಿನ ಸುಪ್ರೀಂ ಕೋರ್ಟ್ ಆದೇಶಗಳೂ ಸ್ಪಷ್ಟವಾಗಿವೆ ಮತ್ತು ನ್ಯಾಯಾಧಿಕರಣ ಸ್ಥಾಪಿಸಬೇಕೆಂದು ಈ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳೂ ವಜಾ ಆಗಿವೆ. ಈ ಎಲ್ಲ ಕಾರಣಗಳಿಂದ ಕೃಷ್ಣಾ ನದಿ ನೀರನ್ನು ಹಂಚಿಕೊಳ್ಳಬೇಕಾಗಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಪರಸ್ಪರ ಪರಿಹರಿಸಿಕೊಳ್ಳಬೇಕೆ ವಿನಃ ಹೊಸ ನ್ಯಾಯಾಧಿಕರಣ ಸ್ಥಾಪನೆ ಬೇಡಿಕೆ ಸಮರ್ಥನೀಯವಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಜಲಶಕ್ತಿ ಸಚಿವರ ಎದುರು ವಾದ ಮಂಡಿಸಿದ್ದಾರೆ.
ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳುವುದು ನಮ್ಮ ಆದ್ಯ ಹಕ್ಕು ಎಂದು ಪ್ರತಿಪಾದಿಸಿರುವ ಸಚಿವ ಜಾರಕಿಹೊಳಿ ಅವರು, ಅದಕ್ಕಾಗಿ ಕಾನೂನು ಮತ್ತು ರಾಜಕೀಯ ಒತ್ತಡವನ್ನು ಹೇರುವ ಮೂಲಕ ರಾಜ್ಯಕ್ಕೆ ದಕ್ಕಬೇಕಿರುವ ಅರ್ಹ ಪಾಲನ್ನು ಪಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಹದಾಯಿ – ಗೋವಾ ವಾದ ಸತ್ಯಕ್ಕೆ ದೂರವಾದುದು:
ಮಹದಾಯಿ ನದಿ ನೀರು ಹಂಚಿಕೆ ಕುರಿತು ಈಗಾಗಲೇ ನ್ಯಾಯಾಧಿಕರಣವು ಐತೀರ್ಪು ನೀಡಿದ್ದು, ಕೇಂದ್ರ ಸರ್ಕಾರವೂ ಸಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಗೋವಾ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಹಸ್ಯಾಸ್ಪದವಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಮಹದಾಯಿ ಯೋಜನೆಯ ಅನುಷ್ಠಾನದ ವಿಷಯವು ಈಗಾಗಲೇ ತಾರ್ಕಿಕವಾಗಿ ಅಂತ್ಯವಾಗಿದೆ. ಅರಣ್ಯ ಇಲಾಖೆ ಅನುಮೋದನೆ ಮಾತ್ರ ಬಾಕಿ ಇದ್ದು, ಇಂತಹ ಸಂದರ್ಭದಲ್ಲಿ ನೆರೆಯ ರಾಜ್ಯ ಗೋವಾ ಸುಖಾ ಸುಮ್ಮನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರವು ಇದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿ, ಗೋವಾ ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಛಾಯಾಚಿತ್ರ ಮತ್ತು ವಿಡೀಯೋಗಳು ಅವರೇ ಸೃಷ್ಟಿಸಿರುವ ದಾಖಲೆಗಳಷ್ಟೇ, ಮಹದಾಯಿ ಮತ್ತು ಮಲಪ್ರಭಾ ನದಿ ನಡುವೆ ಪ್ರಬಲ ಗೋಡೆ ನಿರ್ಮಿಸಲಾಗಿದೆ. ಮಹದಾಯಿ ನದಿಯ ಒಂದು ಹನಿ ನೀರೂ ಸಹ ಮಲಪ್ರಭಾ ನದಿ ಸೇರಿಲ್ಲ, ಇಂತಹ ಸುಳ್ಳು ದಾಖಲೆಗಳನ್ನು ಸುಪ್ರೀಂ ಕೋರ್ಟ್ ಸಹ ನಂಬುವುದಿಲ್ಲ ಎಂದು ಹೇಳಿದ ಜಲ ಸಂಪನ್ಮೂಲ ಸಚಿವರು, ಈ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಯೊಂದು ಅಸ್ತಿತ್ವದಲ್ಲಿ ಇದ್ದು, ಈ ಸಮಿತಿಯಿಂದ ವಾಸ್ತವ ಸ್ಥಿತಿಯ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಅಕ್ರಮವಾಗಿ ಮಹದಾಯಿ ಹರಿವನ್ನು ತಿರುಗಿಸಿದ್ದೇವೆ ಎಂಬ ಗೋವಾ ರಾಜ್ಯದ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಸಚಿವರು, ಮಹದಾಯಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆ ಜಾರಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ ಮಹದಾಯಿ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಪುನರುಚ್ಛರಿಸಿದ್ದಾರೆ.
ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯಗಳು ವಿವಾದ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ
ಅವರೂ ಸಹಾ ಕೇಂದ್ರ ಜಲಶಕ್ತಿ ಸಚಿವರಿಗೆ ತುರ್ತು ಪತ್ರ ಬರೆದಿದ್ದು ಕೂಡಲೇ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.