ಯುವ ಭಾರತ ಸುದ್ದಿ, ಗೋಕಾಕ್: ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಾಲೂಕಿನ ಲೋಳಸೂರ ಗ್ರಾಮದ ಹುತಾತ್ಮ ಯೋಧ ಕಲ್ಲಪ್ಪ ಸಿದ್ದಪ್ಪ ಬಾಂವಚಿ ೪೫ ಅವರ ಅಂತ್ಯಕ್ರೀಯೆ ಲೋಳಸೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿದೆ ಮಧ್ಯಾಹ್ನ ೧೨.೩೦ಕ್ಕೆ ನೆರವೆರಿತು.
ಲೋಳಸೂರ ಗ್ರಾಮದಲ್ಲಿ ಜನಿಸಿದ ಯೋಧ ಕಲ್ಲಪ್ಪ ಬಾಂವಚಿ ಪ್ರಾಥಮಿಕ ಲೋಳಸೂರ ಹಾಗೂ ಪ್ರೌಢಶಿಕ್ಷಣವನ್ನು ಗೋಕಾಕ ಪಟ್ಟಣದಲ್ಲಿ ಮುಗಿಸಿ. ಭಾರತಮಾತೆಯ ರಕ್ಷಣೆಗಾಗಿ ೨೦೦೦ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆಗೆ ಸೇರಿದ್ದರು. ಸುಮಾರು ೨೦ವರ್ಷಗಳ ಕಾಲ ಸೇನೆಯಲ್ಲಿ ದೇಶದ ವಿವಿಧ ಗಡಿಭಾಗಗಳಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಸೇವೆ ಗೈದಿದ್ದಾರೆ.
ಬುಧವಾರದಂದು ಬೆಳಿಗ್ಗೆ ೧೧.೦೦ಕ್ಕೆ ಯೋಧ ಕಲ್ಲಪ್ಪ ಅವರ ಪಾರ್ಥಿವ ಶರೀರ ಗೋವಾ ಮಾರ್ಗವಾಗಿ ಲೋಳಸೂರ ಗ್ರಾಮಕ್ಕೆ ತಲುಪಿತು. ಗ್ರಾಮದಲ್ಲಿ ಮೃತ ಕಲ್ಲಪ್ಪ ಅವರ ಜಮೀನಿನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ಗ್ರಾಮದಲ್ಲಿ ನೂರಾರು ಜನ ಪಾರ್ಥಿವ ಶರೀರ ವಿಕ್ಷಿಸಲು ಆಗಮಿಸಿ ಅಂತಿಮ ದರ್ಶನ ಪಡೆದರು. ಲೋಳಸೂರ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು.
ಮುಗಿಲು ಮುಟ್ಟಿದ ಆಕ್ರಂದನ: ತಾಯಿ, ಪತ್ನಿ, ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಸಹೋದರರನ್ನು ಅಗಲಿದ ಯೋಧ ಬಸವರಾಜರ ಪಾರ್ಥಿವ ಶರೀರ ನೋಡುತ್ತಿದ್ದಂತೆ ಕುಟುಂಬಸ್ತರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರುಸುತ್ತು ಗುಂಡು ಹಾರಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು.
ತಾಲೂಕ ದಂಡಾಧಿಕಾರಿ ಪ್ರಕಾಶ ಹೊಳೆಪ್ಪಗೋಳ, ಜಾವೇದ ಇನಾಮದಾರ ನೇತ್ರತ್ವದಲ್ಲಿ ಅಚ್ಚುಕಟ್ಟಾಗಿ ನೆರವೆರಿಸಲಾಯಿತು.
ತಾಪಂ ಸದಸ್ಯ ಕಿರಣ ಬೆಣಚಿನಮರ್ಡಿ, ಮುಖಂಡರಾದ ಸಿದ್ದಪ್ಪ ನಿಡಗುಂದಿ, ರಾಮಪ್ಪ ಬೆಣಚಿನಮರ್ಡಿ, ಪ್ರಕಾಶ ಮೇಟಿ, ಮನೋಹರ ಗಡಾದ, ಹಾಲಪ್ಪ ಬಾಗಾಯಿ ಸೇರಿದಂತೆ ಗಣ್ಯರು ಇದ್ದರು.
ಸಂತಾಪ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮೃತ ಯೋಧ ಕಲ್ಲಪ್ಪ ಬಾಂವಚಿ ಅವರ ನಿಧನಕ್ಕಾ ಸಂತಾಪ ಸೂಚಿಸಿದ್ದು, ಮೃತ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.