ಗ್ರಾಮಗಳಿಗೆ ಗಡಾದ ತೆರಳಿ ರಸ್ತೆ ಕಾಮಗಾರಿಗೆ ಅನುದಾನವನ್ನು ನಾನೇ ತಂದಿದ್ದು ಎಂದು ನಾಟಕ ಮಾಡುತ್ತಿದ್ದಾರೆ-ಉಪಾಧ್ಯಕ್ಷ ಸುಭಾಸ ಢವಳೇಶ್ವರ!!
ಯುವ ಭಾರತ ಸುದ್ದಿ ಮೂಡಲಗಿ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ಅಭಿವೃದ್ಧಿ ಕಾರ್ಯಗಳಲ್ಲಿ ಉದ್ಧೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದ್ದಾರೆ. ರೈತರು ಮತ್ತು ಜನರ ದಾರಿ ತಪ್ಪಿಸುತ್ತಿರುವ ಇಂತಹ ಅಭಿವೃದ್ಧಿ ವಿರೋಧಿಗಳಿಗೆ ಶಾಸಕರು ಮಾಡಿರುವ ಪ್ರಗತಿಪರ ಕಾಮಗಾರಿಗಳು ಕಣ್ಣಿಗೆ ಕಾಣುವುದಿಲ್ಲವೇ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮತ್ತು ಜಿಪಂ ಸದಸ್ಯ ಗೋವಿಂದ ಕೊಪ್ಪದ ಅವರು ಗಡಾದಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಜಂಟೀ ಹೇಳಿಕೆಯನ್ನು ನೀಡಿರುವ ಅವರು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2004 ರಿಂದ ಈ ಭಾಗದ ಶಾಸಕರಾಗಿ ನೂರಾರು ಕೋಟಿ ರೂ.ಗಳ ಅನುದಾನದಲ್ಲಿ ಅರಭಾವಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. 2004ರ ಕ್ಕಿಂತ ಮುಂಚೆ ಶಾಸಕರಾಗಿದ್ದವರು ಈ ಕ್ಷೇತ್ರಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಕೇವಲ ಪ್ರತಿ ಗ್ರಾಮಗಳಲ್ಲಿ ಒಂದಿಬ್ಬರನ್ನು ಕಟ್ಟಿಕೊಂಡು ಅವರ ಅಣತಿಯಂತೆ ಕೆಲಸ ಮಾಡುತ್ತಿರುವುದನ್ನು ಕ್ಷೇತ್ರದ ಜನ ಕಂಡಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳಿಗೆ ಟೆಂಡರ್ ಸಹ ಕರೆಯಲಾಗಿದೆ. ಆದರೆ ಎಲ್ಲ ಗ್ರಾಮಗಳಿಗೆ ಗಡಾದ ತೆರಳಿ ರಸ್ತೆ ಕಾಮಗಾರಿಗೆ ಅನುದಾನವನ್ನು ನಾನೇ ತಂದಿದ್ದು ಎಂದು ನಾಟಕ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಕೇವಲ ಪತ್ರಿಕಾ ಹೇಳಿಕೆಗಳನ್ನು ಕೊಟ್ಟು ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಇಂತಹವರಿಗೆ ಜನರೇ ಸರಿಯಾದ ಬುದ್ದಿ ಕಲಿಸುವಂತೆಯೂ ಢವಳೇಶ್ವರ ಹಾಗೂ ಕೊಪ್ಪದ ತಿಳಿಸಿದ್ದಾರೆ.
ಹದಗೆಟ್ಟ ರಸ್ತೆಗಳನ್ನು ಈಗಾಗಲೇ ದುರಸ್ತಿ ಮಾಡುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೇ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರದಿಂದ ಸುಮಾರು ನೂರಾರು ಕೋಟಿ ರೂ.ಗಳಷ್ಟು ಅನುದಾನವನ್ನು ತಂದಿದ್ದಾರೆ. ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಸಹ ಮಾಡುತ್ತ ರೈತರ ಜಮೀನುಗಳಿಗೆ ನೀರು ಹರಿಸಲು ಕಾರಣೀಕರ್ತರಾಗಿದ್ದಾರೆ. ಇಡೀ ಕ್ಷೇತ್ರವನ್ನು ಹಸಿರುಮಯವನ್ನಾಗಿ ಮಾಡುವ ಮೂಲಕ ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಾಲುವೆಗಳ ಕಾರ್ಯನಿರ್ವಹಣೆಗಾಗಿ ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದ ಸಿಬ್ಬಂದಿಗಳನ್ನು ನಿಯೋಜಿಸಿ ದಿನಂಪ್ರತಿ ರೈತರ ಅಹವಾಲುಗಳಿಗೆ ಸ್ಪಂದಿಸುತ್ತಿದ್ದಾರೆ.
ಇದನ್ನೆಲ್ಲ ಗಮನಿಸದ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಅವರು ಸುಖಾ ಸುಮ್ಮನೆ ಆರೋಪ ಮಾಡುತ್ತಿರುವುದು ಸರಿ ಅಲ್ಲಾ. ಅಭಿವೃದ್ಧಿ ಕಾರ್ಯಗಳಲ್ಲಿ ವಿನಾಕಾರಣ ರಾಜಕಾರಣ ಬೆರೆಸುವುದು ಯೋಗ್ಯವಲ್ಲ. 30 ವರ್ಷಗಳ ಕಾಲ ಅರಭಾವಿ ಕ್ಷೇತ್ರವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಆಳಿರುವ ದಿ. ವಿ.ಎಸ್. ಕೌಜಲಗಿ ಅವರ ಆಡಳಿತ ಹೇಗಿತ್ತು ಎಂಬುದು ಪ್ರತಿಯೊಬ್ಬರೂ ಬಲ್ಲರು ಎಂದು ಗಡಾದಗೆ ತಿರುಗೇಟು ನೀಡಿದ್ದಾರೆ.
ಇನ್ನು ಕ್ಷೇತ್ರದ ಬಡ ಕುಟುಂಬಗಳಿಗೆ ಸೂರು ಒದಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 3 ವರ್ಷಗಳಲ್ಲಿ ಅತೀವೃಷ್ಠಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಸುಮಾರು 10 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ.
ಶಾಸಕರು ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡಿಸಿ ತಂದಿದ್ದರೂ ಅದನ್ನು ಗಡಾದ ಅವರು ಸ್ವ ಹಿತಾಸಕ್ತಿಗೆ ನಾನೇ ಮಂಜೂರು ಮಾಡಿಸಿದ್ದೆಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮನೆಗಳ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಗಡಾದ ಅವರು ತಮ್ಮ ಅಲ್ಪ ಬೆಂಬಲಿಗರನ್ನು ಕೂಡಿಸಿಕೊಂಡು ಪ್ರತಿಭಟನೆಯ ನಾಟಕ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರುಗಳು ಪ್ರಶ್ನಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ಶಾಸಕರಾದ ನಂತರ ಅರಭಾವಿ ಕ್ಷೇತ್ರದ ಹಣೆ ಬರಹ ಸಂಪೂರ್ಣ ಬದಲಾಗುತ್ತಿದೆ. ಇವರು ಸಾಧಿಸಿರುವಷ್ಟು ಪ್ರಗತಿಪರ ಕಾರ್ಯಗಳು ಯಾರ ಅವಧಿಯಲ್ಲಿಯೂ ಆಗಿಲ್ಲ. ಬೇಕಾದರೆ ಅಭಿವೃದ್ಧಿ ಕಾರ್ಯಗಳಲ್ಲಿ ಒಂದೇ ವೇದಿಕೆಯಲ್ಲಿ ಬಂದು ಚರ್ಚೆ ನಡೆಸಲಿ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಢವಳೇಶ್ವರ ಮತ್ತು ಕೊಪ್ಪದ ಜಂಟೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.