Breaking News

ಸಿದ್ದರಾಮಯ್ಯ ಸ್ಪರ್ಧೆಗೆ ಹೊಸ ಕ್ಷೇತ್ರದ ಹೆಸರು ಸೇರ್ಪಡೆ

Spread the love

ಸಿದ್ದರಾಮಯ್ಯ ಸ್ಪರ್ಧೆಗೆ ಹೊಸ ಕ್ಷೇತ್ರದ ಹೆಸರು ಸೇರ್ಪಡೆ

 

ಯುವ ಭಾರತ ಸುದ್ದಿ ಬೆಂಗಳೂರು :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭಾ ಚುನಾವಣೆ ಸ್ಪರ್ಧೆ ಭಾರಿ ಕುತೂಹಲ ಕೆರಳಿಸಿದೆ. ಅವರು ಮತ್ತೊಮ್ಮೆ ಉತ್ತರ ಕರ್ನಾಟಕದಿಂದ ಸ್ಪರ್ಧೆ ನಡೆಸುತ್ತಾರೆ ಎಂಬ ಹೊಸ ಚರ್ಚೆ ಇದೀಗ ಆರಂಭವಾಗಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತಕ್ಷೇತ್ರದಿಂದ ಅವರು ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂಬ ವದಂತಿ ಹರಡಿದೆ.

ಕುಷ್ಟಗಿ ವಿಧಾನಸಭಾ ಮತಕ್ಷೇತ್ರದ ಹೆಸರು ಮುಂಚೂಣಿಯಲ್ಲಿದೆ. ಸಿದ್ದರಾಮಯ್ಯ ಇದುವರೆಗೆ ಕೋಲಾರ ಮತಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಾರೆ ಎಂಬ ವಾತಾವರಣವಿತ್ತು. ಆದರೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನೀಡಿರುವ ಸಲಹೆ ಮೇರೆಗೆ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದರು.

ಆಗ ಸುಪುತ್ರ ಪ್ರತಿನಿಧಿಸುತ್ತಿದ್ದ ವರುಣ ಹೆಸರು ಮುಂಚೂಣಿಯಲ್ಲಿತ್ತು‌. ಆದರೆ ಇದೀಗ ಕುಷ್ಟಗಿಯನ್ನು ಆರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಅವರ ಬೆಂಬಲಿಗರು ಕ್ಷೇತ್ರಾದ್ಯಂತ ಸಂಚಾರ ನಡೆಸಿದ್ದಾರೆ.

ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ಪರವಾಗಿ ಕ್ಷೇತ್ರದಲ್ಲಿ ಬಹು ಹಿಂದೆ ಸಂಚಲನ ಮೂಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಅತ್ಯಪ್ತ ಸತೀಶ ಜಾರಕಿಹೊಳಿ ಅವರು ವಾರಕ್ಕೊಮ್ಮೆ ಕುಷ್ಟಗಿ ಮತಕ್ಷೇತ್ರಕ್ಕೆ ಭೇಟಿ ನೀಡಿ ಗಮನ ಸೆಳೆಯುತ್ತಿದ್ದಾರೆ. ಕಳೆದು ಸಲ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆಗೆ ನಿಂತಾಗ ಸತೀಶ ಜಾರಕಿಹೊಳಿ ಅವರು ಹೆಗಲಿಗೆ ಹೆಗಲು ಕೊಟ್ಟು ಗೆಲುವಿಗೆ ಶ್ರಮಿಸಿದ್ದರು. ಈ ಬಾರಿ ಕೊನೆ ಗಳಿಗೆಯಲ್ಲಿ ಕುಷ್ಟಗಿಗೆ ಬಂದರು ಬರಬಹುದು ಎಂಬ ಲೆಕ್ಕಾಚಾರದೊಂದಿಗೆ ಸಿದ್ದರಾಮಯ್ಯ ಪರವಾಗಿ ಸತೀಶ ಜಾರಕಿಹೊಳಿ ಕುಷ್ಟಗಿ ಮತಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಸಿದ್ದರಾಮಯ್ಯ ಅವರು ಬೇರೆ ಕ್ಷೇತ್ರವನ್ನು ಆಯ್ದುಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ಸತೀಶ ಜಾರಕಿಹೊಳಿ ಅವರು ಮಾಡಿರುವ ಕೆಲಸಗಳು ಇದೀಗ ನೆರವಿಗೆ ಬರುವ ಸಾಧ್ಯತೆ ಇದೆ.

ಸತೀಶ ಜಾರಕಿಹೊಳಿ ಅವರು ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಶಾಲಾ ಮಕ್ಕಳಿಗೆ ತಮ್ಮ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಡೆಸ್ಕ್ ವಿತರಿಸಿದ್ದಾರೆ. ರಾಜಕೀಯ ಲೆಕ್ಕಾಚಾರದ ಲಾಭ ಇದರ ಹಿಂದೆ ಇದೆ ಎಂದು ಆ ಸಂದರ್ಭದಲ್ಲಿ ರಾಜಕೀಯ ತಜ್ಞರು ಊಹಿಸಿದ್ದರು. ಸತೀಶ ಜಾರಕಿಹೊಳಿ ಅವರು ಈ ಕ್ಷೇತ್ರದ ಮೇಲೆ ಹೆಚ್ಚಿನ ಬಲವು ಆಗಾಗ ತೋರುತ್ತಿರುವುದು ಕಂಡುಬಂದಿದ್ದು ಇದೀಗ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆಗೆ ಮುಂದಾದರೆ ಅವರಿಗೆ ಪೂರಕವಾಗುವ ಸಾಧ್ಯತೆ ಹೆಚ್ಚಿದೆ.

ಸಿದ್ದರಾಮಯ್ಯ ಅವರಿಗೆ
ಕೊಪ್ಪಳಕ್ಕಿಂತ ಕುಷ್ಟಗಿ ಮತಕ್ಷೇತ್ರದಲ್ಲಿ ಗೆಲುವು ನಿರಾಯಾಸ ಎನ್ನುವ ಲೆಕ್ಕಾಚಾರವಿದೆ. ಕುರುಬ ಸಮುದಾಯದ ಮತಗಳು ಅತ್ಯಂತ ಗಣನೀಯ ಪ್ರಮಾಣದಲ್ಲಿವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿಯಾಗಿರುವ ದೊಡ್ಡನಗೌಡ ಪಾಟೀಲ ಕೊನೆಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಸಿದ್ದರಾಮಯ್ಯ ಪರ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಕುಷ್ಟಗಿ ಮತಕ್ಷೇತ್ರ ಅತ್ಯಂತ ಸುರಕ್ಷಿತ ಎಂದು ಭಾವಿಸಲಾಗುತ್ತಿದೆ.
ಒಟ್ಟಾರೆ, ಸಿದ್ದರಾಮಯ್ಯ ಅವರ ವಿಧಾನಸಭಾ ಚುನಾವಣಾ ಸ್ಪರ್ಧೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

five × one =